ಬೆಂಗಳೂರು, ಸೆ.10-ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 1200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸುವ ನೆಲಮಹಡಿ ಸೇರಿದಂತೆ 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು ಮೂರು ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ(ಓಸಿ) ಪಡೆಯುವುದರಿಂದ ವಿನಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಕಲಂ 241(7)ರಡಿಯಲ್ಲಿ ನಗರಾಭಿವೃದ್ಧಿ ಇಲಾಖೆ (ಜಿ.ಬಿ.ಎ. ಮತ್ತು ಬೆಂ.ನ.ಪಾ-1)ಯ ಅಧೀನ ಕಾರ್ಯದರ್ಶಿ ಲಕ್ಷ್ಮಿಸಾಗರ್ ಎನ್.ಕೆ. ಆದೇಶ ಹೊರಡಿಸಿದ್ದಾರೆ.
ಈ ಅಧಿನಿಯಮದ ಅಧ್ಯಾಯ 7ರ ನಿಬಂಧನೆಗಳನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗಳನ್ನು ಕಾರ್ಯಗತಗೊಳಿಸಲು ಲಭ್ಯವಿರುವ ಕಾರ್ಯಪಡೆಯೊಂದಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವಂತೆ ಜಿ.ಬಿ.ಎ. ಮುಖ್ಯ ಆಯುಕ್ತರಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.
ಜಿ.ಬಿ.ಎ. ಮುಖ್ಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಜಿ.ಬಿ.ಎ.ವ್ಯಾಪ್ತಿಯ ಸಣ್ಣ ಪ್ರಮಾಣದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರಿಗೆ ವಿನಾಯಿತಿ ನೀಡುವುದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಸಹಕಾರಿಯಾದಂತಾಗುತ್ತದೆ ಎಂಬುದನ್ನು ಸರ್ಕಾರ ಮನಗಂಡು ಈ ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.
ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯು ಸ್ಥಳ ಪರಿಶೀಲನೆ, ನಿರ್ಮಾಣ ಮಾಡಿರುವ ಕಟ್ಟಡ ಹಾಗೂ ಅನುಮೋದಿತ ಕಟ್ಟಡ ನಕ್ಷೆಯ ತುಲನಾತಕ ಪರಿಶೀಲನೆ ಮುಂತಾದವುಗಳನ್ನು ಒಳಗೊಂಡಿರುವುದರಿಂದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಹೆಚ್ಚಿನ ಕೆಲಸದ ಹೊರೆ ಉಂಟಾಗುತ್ತಿದೆ.
ಇದರಿಂದ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬವಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರ ಅನುಕೂಲವನ್ನು ಗಮನದಲ್ಲಿರಿಸಿಕೊಂಡು ಹಾಗೂ ನಂಬಿಕೆ ನಕ್ಷೆ ವ್ಯವಸ್ಥೆಯಲ್ಲಿ ಶೀಘ್ರವಾಗಿ ನಕ್ಷೆಗಳಿಗೆ ಮಂಜೂರಾತಿ ನೀಡಲಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಸಣ್ಣ ಪ್ರಮಾಣದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವುದರಿಂದ ವಿನಾಯಿತಿ ನೀಡುವುದು ಸೂಕ್ತ ಎಂದು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.