ಬೆಂಗಳೂರು,ಮೇ 16– ನಗರ ಗ್ರೇಟರ್ ಬೆಂಗಳೂರು ಆಗುತ್ತಿದ್ದಂತೆ ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ. ರಾಜಕಾಲುವೆ ಹೂಳು ತೆಗೆಯಲು ರೋಬೋ ಬಳಸಲು ಬಿಬಿಎಂಪಿ ಮುಂದಾಗಿದ್ದರೆ, ನಗರದ ಅಪರಾಧ ಕೃತ್ಯಗಳಿಗೆ ಸಮರ್ಪಕವಾಗಿ ಕಡಿವಾಣ ಹಾಕಲು ಹಾಗೂ ಆಂತರಿಕ ಸಂವಹನಕ್ಕಾಗಿ ನಗರ ಪೊಲೀಸರು ಬಿಸಿಪಿ ಚಾಟ್ ಎಂಬ ಹೊಸ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ಇದರೊಂದಿಗೆ ಹೈಟೆಕ್ ಸಿಟಿ ಬೆಂಗಳೂರಿನ ಪೊಲೀಸರು ಹೈಟೆಕ್ ಆಗಿದ್ದಾರೆ.ಈ ಹೊಸ ಆ್ಯಪ್‌ನಲ್ಲಿ ನಗರದಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್‌ಗಳು ಸೇರಿದಂತೆ ಅವರಿಂದ ಮೇಲ್ಪಟ್ಟ ಎಸಿಸಿ, ಡಿಸಿಪಿ, ಜಂಟಿ ಪೊಲೀಸ ಆಯುಕ್ತರುಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರನ್ನು ಸೇರ್ಪಡೆ ಮಾಡಲಾಗಿದೆ. ಪೊಲೀಸರ ಆಂತರಿಕ ಸಂವಹನಕ್ಕಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಸಂದೇಶ ವಿನಿಮಯಕ್ಕಾಗಿ ಬಿಸಿಪಿಚಾಟ್ ಆ್ಯಪ್ ರೂಪಿಸಲಾಗಿದೆ.
ಬಿಸಿಪಿಚಾಟ್ ಆ್ಯಪ್ ಅನ್ನು ಪೊಲೀಸರ ದಿನನಿತ್ಯದ ಕಾರ್ಯಚಟುವಟಿಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಗಣ್ಯ ವ್ಯಕ್ತಿಗಳ ಇರುವಿಕೆ, ಸಂಚಾರ ನಿಭಾಯಿಸಲು, ಮಾಧ್ಯಮ ವರದಿಗಳು, ದೈನಂದಿನ ಅಪರಾಧ ವರದಿಗಳು ಮತ್ತು ದೈನಂದಿನ ಪರಿಸ್ಥಿತಿ ವರದಿಗಳನ್ನು ಅಪ್‌ಲೋಡ್ ಮಾಡಲಾಗುವುದು. ಆ್ಯಪ್‌ನಲ್ಲಿ ಸಂಗ್ರಹವಾದ ಎಲ್ಲಾ ದತ್ತಾಂಶಗಳನ್ನು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗುವುದರಿಂದ ದತ್ತಾಂಶದ ಗೌಪ್ಯತೆ ಮತ್ತು ಭದ್ರತೆಯನ್ನು ಖಾತರಿಪಡಿಸಲಾಗಿದೆ.
ಈ ಆ್ಯಪ್ ಮೂಲಕ ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು ನೋಟೀಸ್‌ಗಳಂತಹ ಅಧಿಕೃತ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಕಾಲಕ್ಕೆ ತಲುಪಿಸಬಹುದಾಗಿದೆ. ಬಿಸಿಪಿಚಾಟ್ ಅನ್ನು ಅಧಿಕೃತ ಪೊಲೀಸ್ ಅಧಿಕಾರಿಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಅಲ್ಲದೇ ಆ್ಯಪ್‌ನಲ್ಲಿ ಕ್ಷಿಪ್ರ ಶೋಧ ವ್ಯವಸ್ಥೆ ಇರುವುದರಿಂದ ಐತಿಹಾಸಿಕ ದಾಖಲೆಗಳು ಮತ್ತು ಸಂದೇಶ ವಿನಿಮಯಗಳನ್ನು ವಿಳಂಬವಿಲ್ಲದೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.