Friday, November 22, 2024
Homeಬೆಂಗಳೂರುಬೆಂಗಳೂರನ್ನು ಗಬ್ಬೆಬಿಸಿದ ಮಳೆರಾಯ, ವಿಲೇವಾರಿಯಾಗದ ಕಸ, ಸಾಂಕ್ರಾಮಿಕ ರೋಗದ ಭೀತಿ, ರೋಸಿಹೋದ ಜನ

ಬೆಂಗಳೂರನ್ನು ಗಬ್ಬೆಬಿಸಿದ ಮಳೆರಾಯ, ವಿಲೇವಾರಿಯಾಗದ ಕಸ, ಸಾಂಕ್ರಾಮಿಕ ರೋಗದ ಭೀತಿ, ರೋಸಿಹೋದ ಜನ

Bengaluru Rain: Heavy Overnight Downpour Leads To Waterlogging

ಬೆಂಗಳೂರು,ಅ.22- ಮಳೆ ಅವಾಂತರದಲ್ಲಿ ಸಿಲಿಕಾನ್‌ ಸಿಟಿ ಮಿಂದೇಳುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿನ ಜನ ಮಳೆ ಕಾಟದಿಂದ ರೋಸಿ ಹೋಗಿದ್ದಾರೆ. ಆದರೂ ಅವರ ಬವಣೆ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ ಬಿದ್ದ ಮಳೆಗೆ ನಾಗವಾರ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಮ್ಯಾನ್ಪೋ ಕನ್ವೆನ್ಷನ್‌ ಸೆಂಟರ್‌ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಸಭಾಂಗಣದಲ್ಲಿ ಮೊಣಕಾಲುದ್ದ ನೀರು ಸಂಗ್ರಹವಾಗಿದೆ. ಹಾಲ್‌ ತುಂಬಾ ನೀರು ನಿಂತಿರುವುದರಿಂದ ಅಲ್ಲಿದ್ದ ಪೀಟೋಪಕರಣಗಳು ಹಾಳಾಗಿ ಹೋಗಿವೆ.

ಮಳೆ ನೀರಿನ ಜೊತೆಗೆ ರಾಜಕಾಲುವೆಯ ನೀರು ಸೇರಿ ಸ್ಥಳದಲ್ಲಿ ಪ್ರವಾಹದಂತಹ ಪರಿಸ್ಥಿತಿ ಎದುರಾಗಿತ್ತು. ಇನ್ನು ಮಳೆ ಆರ್ಭಟಕ್ಕೆ ಯಲಹಂಕ ಸುತ್ತಮುತ್ತ ಬಾರೀ ಅವಾಂತರಗಳು ನಡೆದಿವೆ. ಕೋಗಿಲು ಕ್ರಾಸ್‌‍ ನ ಮಾರುತಿನಗರದಲ್ಲಿ ರಸ್ತೆಯಲ್ಲಿ ನಿಂತ ನೀರಿನಿಂದಾಗಿ ಇಡೀ ಏರಿಯಾ ಜಲದಿಗ್ಬಂಧನಕ್ಕೊಳಗಾಗಿದೆ.

ನೀರು ನುಗ್ಗಿದ್ದರಿಂದ ಅಲ್ಲಿನ 10ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವತವಾಗಿದ್ದು, ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕಲು ಜನ ಪರದಾಡುವಂತಾಗಿತ್ತು.ಯಲಹಂಕದ ಚಿಕ್ಕಬೊಮಸಂದ್ರದಲ್ಲೂ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಬೆಳಗಿನ ಜಾವದ ವೇಳೆಗೆ ನೀರು ಕಡಿಮೆಯಾದ ಕಾರಣ ಜನ ಮನೆ ಶುಚಿಗೊಳಿಸುತ್ತಿದ್ದಾರೆ. ಮಳೆಯಿಂದಾಗಿ ಇಡೀ ಏರಿಯಾದ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ನೂರಾರು ಮನೆಗಳ ಸಂಪ್‌ಗಳಿಗೂ ಮಳೆ ನೀರು ಹರಿದು ಜನ ಕುಡಿಯಲು ನೀರಿಲ್ಲದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಕೇಂದ್ರಿಯ ವಿಹಾರ್‌ ಮುಳುಗಡೆ:
ನಿನ್ನೆ ರಾತ್ರಿ ಸುರಿದ ಮಳೆಗೆ ಯಲಹಂಕದ ಕೇಂದ್ರೀಯ ವಿಹಾರ್‌ ಅಪಾರ್ಟೆಂಟ್‌ ಮತ್ತೆ ಮುಳುಗಡೆಯಾಗಿದ್ದು ಸ್ಥಳದಲ್ಲಿ ಎನ್‌ಡಿಆರ್‌ಎಫ್‌ ತುಕಡಿಗಳನ್ನು ನಿಯೋಜಿಸಲಾಗಿದೆ. 35 ಕ್ಕೂ ಹೆಚ್ಚು ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು ಬೋಟಿಂಗ್‌ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಮುಳುಗಡೆಯಾಗಿರುವ ಅಪಾರ್ಟ್‌ಮೆಂಟ್‌ನಲ್ಲಿರುವ 2500 ಜನರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿಗಳು ಬೋಟ್‌ಗಳ ಮೂಲಕ ಹೊರ ಕರೆತರುತ್ತಿದ್ದಾರೆ.

ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ ಸೀಲ್‌‍:
ಈ ಅಪಾರ್ಟ್‌ಮೆಂಟ್‌ನಲ್ಲಿ 10 ಅಡಿಗೂ ಹೆಚ್ಚು ನೀರು ನಿಂತಿದೆ. ಅಷ್ಟು ನೀರನ್ನು ತೆರವು ಮಾಡುವುದರಕ್ಕೆ ನಾಲ್ಕೈದು ದಿನಗಳು ಬೇಕಾಗಿರುವುದರಿಂದ ಒಂದು ವಾರ ಅಪಾರ್ಟ್‌ಮೆಂಟ್‌ನ್ನು ಸೀಲ್‌ ಮಾಡಲು ನಿರ್ಧರಿಸಲಾಗಿದೆ.

ಕೆರೆ ನೀರು ನುಗ್ಗಿ ಮುಳುಗಡೆಯಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ 600 ಕುಟುಂಬಗಳ ಪೈಕಿ ಈಗಾಗಲೇ 250 ಕುಟುಂಬಗಳನ್ನು ಬೇರೆ ಕಡೆಗೆ ಶಿಫ್‌್ಟ ಮಾಡಲಾಗಿದೆ. ಉಳಿದವರನ್ನು ಖಾಲಿ ಮಾಡಿಸಿದ ನಂತರ ನೀರು ಹೊರ ಹಾಕುವ ಕಾರ್ಯ ನಡೆಸಬೇಕಿರುವುದರಿಂದ ಬಿಬಿಎಂಪಿ ಇಡಿ ಅಪಾರ್ಟ್‌ಮೆಂಟ್‌ ಅನ್ನು ವಶಕ್ಕೆ ಪಡೆದು ಕಾರ್ಯಚರಣೆ ನಡೆಸಲು ತೀರ್ಮಾನಿಸಿದೆ.

ಸರ್ಜಾಪುರ ರಸ್ತೆಯಲ್ಲಿ ಉಕ್ಕುತ್ತಿರುವ ನೀರು; ಸರ್ಜಾಪುರ ಸಮೀಪದ ನಡುರಸ್ತೆಯಲ್ಲಿ ಬುಗ್ಗೆ ರೀತಿ ನೀರು ಉಕ್ಕಿ ಹರಿಯುತ್ತಿರುವುದು ಕಂಡುಬಂದಿದೆ. ವಿಪ್ರೋ ಜಂಕ್ಷನ್‌ ಮತ್ತು ಆರ್‌ಬಿಡಿ ಲೇಔಟ್‌ ಜಂಕ್ಷನ್‌ ಕೂಡ ಜಲಾವತವಾಗಿದೆ.

ಲೇಔಟ್‌ ಮುಳುಗಡೆ:
ಯಲಹಂಕದ ಜಕ್ಕೂರು ರಸ್ತೆಯಲ್ಲಿರುವ ರಾತ್ರಿ ಸುರಿದ ಭಾರಿ ಮಳೆಗೆ ಸುರಭಿ ಲೇಔಟ್‌ ಮುಳುಗಿ ಹೋಗಿದೆ. ಆ ಬಡಾವಣೆಗೆ ತೆರಳುವ ಸರ್‌. ಎಂವಿ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ನಿಂತಿದೆ. ಜಕ್ಕೂರು ಕೆರೆಗೆ ಹರಿಯಬೇಕಿದ್ದ ಯಲಹಂಕ ಕೆರೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಸುರಭಿ ಲೇಔಟ್‌ಗೆ ಜಲದಿಗ್ಬಂಧನ ವಿಧಿಸಿದಂತಾಗಿದೆ. ಜಕ್ಕೂರು ಕೆರೆಯಲ್ಲಿನ ಕೊಳಚೆ ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಜಕ್ಕೂರು ಕೆರೆಗೆ ಹೊಂದಿಕೊಂಡಂತೆ ಇರುವ ಸರ್‌ಎಂವಿ ರಸ್ತ್ತೆಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಜನ ರಾತ್ರಿಯಿಡಿ ನಿದ್ರೆಯಿಲ್ಲದ ಜಾಗರಣೆ ಮಾಡುವಂತಾಗಿದೆ. ರಸ್ತೆಯಲ್ಲಿ ನಿಂತಿರುವ ನೀರಿನಲ್ಲಿ ಬೈಕ್‌ಗಳು ಮತ್ತು ಕಾರುಗಳು ತೇಲಾಡುತ್ತಿರುವಂತೆ ಕಂಡು ಬರುತ್ತಿವೆ.

ಸಾಂಕ್ರಾಮಿಕ ರೋಗದ ಭೀತಿ :
ಮಳೆ ನಡುವೆಯೇ ರಾಜಧಾನಿಗೆ ಕಸದ ಸಮಸ್ಯೆ ಭೀತಿ ಎದುರಾಗಿದೆ. ವಿಲೇಯಾಗದೆ ಉಳಿದ ಸಾವಿರಾರು ಟನ್‌ ಕಸದ ರಾಶಿ ಮಳೆ ನೀರಿನಿಂದಾಗಿ ಕೊಳೆತು ನಾರುವಂತಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಎಲ್ಲೆಂದರಲ್ಲಿ ಹಾಗೆ ಬಿದ್ದಿರುವ ಕಸದ ರಾಶಿ ಕೊಳೆತು ಹೋಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ.

ಕೋಗಿಲು ಕ್ರಾಸ್‌‍ನಲ್ಲಿರುವ ಬೆಳ್ಳಳ್ಳಿ ಡಂಪಿಂಗ್‌ ಯಾರ್ಡ್‌ಗೆ ತೆರಳುವ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿರುವುದರಿಂದ ಅಲ್ಲಿಗೆ ತೆರಳಿರುವ ಲಾರಿಗಳು ರಸ್ತೆಯಲ್ಲೇ ಹೂತು ಹೋಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ಅಲ್ಲೇ ಸಾಲುಗಟ್ಟಿ ನಿಲ್ಲುಂತಾಗಿದೆ. ಹೀಗಾಗಿ ಕಸದ ಲಾರಿಗಳು ಕಿ.ಮೀಗಟ್ಟಲೆ ಸಾಲುಗಟ್ಟಿ ನಿಂತಿರುವ ದೃಶ್ಯ ಡಂಪಿಂಗ್‌ ಯಾರ್ಡ್‌ ಬಳಿ ಕಂಡು ಬರುತ್ತಿದೆ.

ಕಸ ವಿಲೇವಾರಿಗೆ ಇರುವುದು ಒಂದೇ ಡಂಪಿಂಗ್‌ ಯಾರ್ಡ್‌ ಇರುವುದರಿಂದ ಲಾರಿಗಳಲ್ಲಿ ತುಂಬಿರುವ ಕಸ ವಿಲೇವಾರಿ ಮಾಡಿ ವಾಪಸ್‌‍ ಆಗಲು ಮೂರ್ನಾಲ್ಕು ದಿನಗಳು ಬೇಕಾಗುವುದರಿಂದ ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಸದ್ಯ ನಗರದಲ್ಲಿ ಸುಮಾರು 12 ಸಾವಿರ ಮೆಟ್ರಿಕ್‌ ಟನ್‌ಗಳಿಗಿಂತ ಹೆಚ್ಚು ಕಸ ಉಳಿದಿದ್ದು, ಅದನ್ನು ತೆರವು ಮಾಡಲು ಕನಿಷ್ಠ ಒಂದು ವಾರ ಸಮಯ ಬೇಕು ಎನ್ನುತ್ತಿದ್ದಾರೆ ಕಸ ವಿಲೇವಾರಿ ಗುತ್ತಿಗೆದಾರರು.

ಬಿಬಿಎಂಪಿ ಆಯುಕ್ತರಿಂದ ಪರಿಶೀಲನೆ
ಮಳೆಯಿಂದಾಗಿ ಜಲಾವೃತವಾಗಿ ರುವ ಟಾಟಾ ನಗರ,ಭದ್ರಪ್ಪ ಲೇಔಟ್ನ ಹಾಗು ವಿವಿ ಪ್ರದೇಶಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್,ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಮತ್ತಿತರ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಈಗಾಗಲೆ ಪರಿಹಾರ ಸಿಬ್ಬಂಧಿ ವಸತಿ ಸಮುಚ್ಚಯದಲ್ಲಿ ಸಿಲುಕಿರುವವರನ್ನು ಸ್ಥಳಾಂತರಿ ಸುತ್ತಿದ್ದು ,ರಬ್ಬರ್ ಬೋಟ್ ಗಳನ್ನು ಬಳಸಲಾಗುತ್ತಿದೆ .ವಸತಿ ಸಮುಚ್ಚಯದ ನೆಲಮಾಳಿಗೆ ಸಂಪೂರ್ಣ ನೀರಿನಿಂದ ಆವೃತವಾಗಿದ್ದು ಹಲವಾರು ವಾಹನಗಳುನ ನೀರಿನಲ್ಲಿ ಮುಳುಗಿವೆ. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

RELATED ARTICLES

Latest News