Thursday, February 22, 2024
Homeರಾಜ್ಯ26ನೇ ಬೆಂಗಳೂರು ಟೆಕ್ ಸಮ್ಮಿಟ್ ಉಧ್ಘಾಟನೆ, ಇಲ್ಲಿದೆ ಹೈಲೈಟ್ಸ್

26ನೇ ಬೆಂಗಳೂರು ಟೆಕ್ ಸಮ್ಮಿಟ್ ಉಧ್ಘಾಟನೆ, ಇಲ್ಲಿದೆ ಹೈಲೈಟ್ಸ್

ಬೆಂಗಳೂರು,ನ.29- ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ತಾಂತ್ರಿಕ ವಲಯದಲ್ಲಿ ಜಾಗತಿಕ ಆಶೋತ್ತರಗಳನ್ನು ತಲುಪಲು ಪೂರಕ ವಾತಾವರಣ ನಿರ್ಮಾಣ, ವೇಗ ವರ್ಧಕ ಸಂಶೋಧನೆಗಳು, ನವೋದ್ಯಮಗಳಿಗೆ ಬೆಂಬಲ, ಪ್ರತಿಭೆಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿಂದು ನಡೆದು 26ನೇ ಬೆಂಗಳೂರು ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 5500ಕ್ಕೂ ಹೆಚ್ಚು ಐಟಿ ಕಂಪನಿಗಳು ಬಂದಿವೆ. 750ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿವೆ. ದೇಶದ ರಫ್ತು ವಹಿವಾಟಿನಲ್ಲಿ 85 ಬಿಲಿಯನ್ ಡಾಲರ್ ಕೊಡುಗೆಯನ್ನು ರಾಜ್ಯ ನೀಡುತ್ತಿದೆ ಎಂದು ಹೇಳಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ 12 ಲಕ್ಷ ವೃತ್ತಿಪರ ಉದ್ಯೋಗ ಅವಕಾಶಗಳು ದೊರೆತಿವೆ. ಪರೋಕ್ಷವಾಗಿ 31 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದ ಸಾಫ್ಟ್ವೇರ್ ರಫ್ತಿನಲ್ಲಿ ಶೇ.40ರಷ್ಟು ಪಾಲು ಹೊಂದಿವೆ. ಜಾಗತಿಕ ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿದೆ. ಜಾಗತಿಕವಾಗಿ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಆದ್ಯ ಸ್ಥಾನ ಪಡೆದಿದೆ ಎಂದು ವಿವರಿಸಿದರು.

ವಿಶ್ವದ ಗಂಭೀರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತಹ ಅನ್ವೇಷಣೆಗಳಿಗೆ, ಹೊಸ ಆಲೋಚನೆಗಳು ಮತ್ತು ಆಶೋತ್ತರಗಳಿಗೆ ಬೆಂಗಳೂರು ಮುಂದಾಳಾಗಿರುತ್ತದೆ. ಜಾಗತಿಕ ನವೋದ್ಯಮ ಪೂರಕ ಪರಿಸರದ ಸೂಚ್ಯಂಕದಲ್ಲಿ 8ನೇ ಸ್ಥಾನದಲ್ಲಿದೆ ಎಂದರು. ಮಾಹಿತಿ ತಂತ್ರಜ್ಞಾನದಲ್ಲಷ್ಟೇ ಅಲ್ಲದೆ ಬಂಡವಾಳ ಹೂಡಿಕೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಕಳೆದ ಮೂರು ವರ್ಷಗಳಿಂದ ನೀತಿ ಆಯೋಗ ಸಿದ್ದಪಡಿಸುತ್ತಿರುವ ಸೂಚ್ಯಂಕದಲ್ಲಿ ನಿರಂತರವಾಗಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡು ಬಂಡವಾಳ ಹೂಡಿಕೆ, ಪ್ರತಿಭೆ ಮತ್ತು ಅವಕಾಶಗಳು ಕೊನೆಯ ಭಾಗದವರೆಗೂ ಉತ್ತಮ ಸೌಲಭ್ಯಗಳನ್ನು ತಲುಪಿಸುವುದು ಹಾಗೂ ಸಂಶೋಧನಾ ಆಧರಿತ ವ್ಯಾಪಾರೋದ್ಯಮಗಳಿಗೆ ಅನಿಯಮಿತವಾದಂತಹ ಬೆಂಬಲವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಿಶು ಮಾರಾಟ ಪ್ರಕರಣದಲ್ಲಿ ನಕಲಿ ವೈದ್ಯನ ಸೆರೆ

ಏಕಗವಾಕ್ಷಿ ಅನುಮೋದನೆ, ಕೇಂದ್ರಿತ ತಪಾಸಣಾ ವ್ಯವಸ್ಥೆ, ಭೂ ಮಂಜೂರಾತಿ ವ್ಯವಸ್ಥೆ ಸೇರಿದಂತೆ ಹಲವು ಕೈಗಾರಿಕಾಸ್ನೇಹಿ ಕ್ರಮಗಳು ಚಾಲ್ತಿಯಲ್ಲಿವೆ ಎಂದರು. 1997ರಲ್ಲೇ ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇಂದು ಜಿಡಿಪಿಯಲ್ಲಿ ಶೇ.25ರಷ್ಟು ಪಾಲು ಹೊಂದಿದೆ. ಜೈವಿಕ ತಂತ್ರಜ್ಞಾನಕ್ಕೂ 2001ರಲ್ಲೇ ನೀತಿ ರೂಪಿಸಲಾಗಿತ್ತು.

2015ರಲ್ಲಿ ನವೋದ್ಯಮ ನೀತಿಯನ್ನು ರಚಿಸುವ ಮೂಲಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ವಿವರಿಸಿದ್ದಾರೆ. ಅನಿಮೇಷನ್, ವಿಷ್ಯುಲ್ ಎಫೆಕ್ಟ್, ಗೇಮಿಂಗ್, ಕಾಮಿಕ್ಸ್ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೀತಿಯೊಂದನ್ನು ಕೂಡ ರೂಪಿಸಲಾಗಿದೆ. ಉದ್ಯಮ, ಕೈಗಾರಿಕೆ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಸಹಯೋಗದ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆಗಳಿಗೆ ನೆರವು ನೀಡಲಾಗುತ್ತಿದೆ ಎಂದರು.

ಹಲವಾರು ಸವಾಲುಗಳಿಗೆ ಡಿಜಿಟಿಲ್ ಅಭಿಯಾನ ಪರಿಹಾರ ಒದಗಿಸಲಿದೆ. ಪ್ರತಿಯೊಬ್ಬರಿಗೂ ತಂತ್ರಜ್ಞಾನದ ಸೌಲಭ್ಯ ಕಲ್ಪಿಸುವುದು ನಮ್ಮ ಗುರಿ. ದತ್ತಾಂಶ ಮತ್ತು ವಿಶ್ಲೇಷಣೆಯ ಪ್ರಯೋಜನಗಳನ್ನು ಆಡಳಿತಾತ್ಮವಾಗಿ ಬಳಸಿಕೊಳ್ಳುವುದು, ಬೆಂಗಳೂರು ಹೊರತಾಗಿ ಅಭಿವೃದ್ಧಿಗಳಿಗೆ ಆದ್ಯತೆ ನೀಡುವುದು ನಮ್ಮಗ ಗುರಿಯಾಗಿದೆ ಎಂದು ಹೇಳಿದರು. 26ನೇ ಬೆಂಗಳೂರು ಟೆಕ್ ಸಮ್ಮೇಳನ ಹಲವು ಮಿತಿಗಳನ್ನು ದಾಟುವ ಗುರಿಯನ್ನು ಹೊಂದಿದೆ. ಪ್ರಾದೇಶಿಕ ಮತ್ತು ಕ್ಷೇತ್ರವಾರು ಮಿತಿಗಳನ್ನು ದಾಟುವುದು ನಮ್ಮ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಮಧುಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಉದ್ಯಮಿಗಳಾದ ಮಾರ್ಕ್ ಪೇಪರ್ ಮಾಸ್ಟರ್, ಕ್ರಿಷ್ ಗೋಪಾಲಕೃಷ್ಣ, ಕಿರಣ್ ಮುಜುಂದಾರ್ ಷಾ, ನಿವೃತ್ತಿ ರೈ, ಅರವಿಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಜೈವಿಕ ತಂತ್ರ ನೀತಿ ಅನಾವರಣ
ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನ ನೀತಿ ಹಾಗೂ ಎವಿಜಿಸಿ-ಎಕ್ಸ್ಆರ್ ಕರುಡನ್ನ ಅನಾವರಣಗೊಳಿಸಲಾಯಿತು. 2023ರಿಂದ 28ರ ನಡುವಿನ ಐದು ವರ್ಷಗಳ ಅವಯಲ್ಲಿ 30 ಸಾವಿರ ಹೊಸ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಅನಿಮೇಷನ್, ವಿಷ್ಯುಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಎಕ್ಸ್ಟೆಂಡೆಡ್ ರಿಯಾಲಿಟಿ(ಎವಿಜಿಸಿ-ಎಕ್ಸ್ಆರ್) ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ರಾಜ್ಯದ ಮಾಹಿತಿ ತಂತ್ರಜ್ಞಾನ ವಲಯವನ್ನು ಮತ್ತಷ್ಟು ಸದೃಢಗೊಳಿಸುವ ಗುರಿ ಹೊಂದಿರುವ ಈ ನೀತಿ ಎವಿಜಿಸಿ-ಎಕ್ಸ್ಆರ್ ವಲಯದಲ್ಲಿ ಜಾಗತಿಕವಾಗಿ ಕರ್ನಾಟಕವನ್ನು ಮುಂಚೂಣಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದೆ. ಕೌಶಲ್ಯಾಭಿವೃದ್ಧಿಗೆ ಆದ್ಯತೆ, ರಾಜ್ಯದ ವಹಿವಾಟು ವಲಯದ ರಫ್ತಿನಲ್ಲಿ ಶೇ.80ರಷ್ಟು ಪಾಲು ಹೊಂದುವ ನಿರೀಕ್ಷೆಗಳನ್ನು ಸ್ಪಷ್ಟಪಡಿಸಿದೆ.

ಕೌಶಲ್ಯಾಭಿವೃದ್ಧಿ ಸಲಹಾ ಸಮಿತಿ, ಕೈಗಾರಿಕಾ ಆಧರಿತ ಪಠ್ಯಕ್ರಮ, ಶಿಕ್ಷಣ ಸಂಸ್ಥೆಗಳು-ಕೈಗಾರಿಕೆಗಳ ಸಹಭಾಗಿತ್ವದಲ್ಲಿ ವೃತ್ತಿಪರ ತರಬೇತಿ, ನವೋದ್ಯಮ ಮತ್ತು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಪ್ರತಿಭೆಗಳ ಅನ್ವೇಷಣೆ, ಜೇಷ್ಠತಾ ಕೇಂದ್ರ ಸ್ಥಾಪನೆ ಸೇರಿದಂತೆ ಆರು ಉದ್ದೇಶಗಳನ್ನು ನೀತಿ ಹೊಂದಿದೆ. ವಿಶೇಷ ಆರ್ಥಿಕ ವಲಯ, ಗೇಮಿಂಗ್ ಕ್ಷೇತ್ರಕ್ಕೆ ಜೇಷ್ಠತಾ ಕೇಂದ್ರ, ಡಿಜಿಟಲ್ ಕೇಂದ್ರಗಳ ಉನ್ನತೀಕರಣ, ಎವಿಜಿಸಿ-ಎಕ್ಸ್ಆರ್ ವಲಯದಲ್ಲಿ ಸಂಶೋಧನಾ ಸಂಸ್ಥೆ ಸ್ಥಾಪನೆ ಸೇರಿದಂತೆ ಹಲವಾರು ಮೂಲ ಸೌಕರ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.

ಮಾರುಕಟ್ಟೆ ಮತ್ತು ವಹಿವಾಟು ವಲಯದ ನಡುವೆ ಸಂಪರ್ಕಕೊಂಡಿಯಾಗುವುದಾಗಿ ಸರ್ಕಾರ ಭರವಸೆ ನೀಡಿದೆ. ಜೈವಿಕ ತಂತ್ರಜ್ಞಾನ ನೀತಿಯಲ್ಲಿ ಕರ್ನಾಟಕ ಮಹತ್ವದ ಗುರಿಗಳೊಂದಿಗೆ ಮುಂದಡಿ ಇಡುವ ಸಂಕಲ್ಪ ಮಾಡಿದೆ.

2025ರ ವೇಳೆಗೆ ಭಾರತ ಜೈವಿಕ ಆರ್ಥಿಕತೆಯಲ್ಲಿ 150 ಬಿಲಿಯನ್ ಡಾಲರ್, 2030ರ ವೇಳೆಗೆ 300 ಬಿಲಿಯನ್ ಡಾಲರ್ ಆಶೋತ್ತರವನ್ನು ಹೊಂದಿದೆ. ಇದಕ್ಕೆ ಬೆಂಬಲವಾಗಿ ಕರ್ನಾಟಕ ಜೈವಿಕ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಗೆ 200 ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ. ಸುಮಾರು 60ಕ್ಕೂ ಹೆಚ್ಚಿನ ಗೃಹ ಉತ್ಪನ್ನಗಳತ್ತ ಗಮನಹರಿಸಿದೆ.
ಕನಿಷ್ಟ 27.1 ಬಿಲಿಯನ್ ಡಾಲರ ಜೈವಿಕ ಆರ್ಥಿಕತೆಯನ್ನು ರಾಜ್ಯ ಹೊಂದಿದೆ. 5ರಿಂದ ಎಕರೆ ಪ್ರದೇಶದಲ್ಲಿ ಹೈಟೆಕ್ ಬಯೋ ಕ್ಲಸ್ಟರ್ ಸೇರಿದಂತೆ ಹಲವು ಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಗಮನ ಸೆಳೆದ ಐಟಿ ಸಮ್ಮಿಟ್
ಐಟಿ-ಬಿಟಿ, ಎಐ ಸೇರಿದಂತೆ ಭವಿಷ್ಯದ ಪ್ರವರ್ಧಮಾನ ತಂತ್ರಜ್ಞಾನಗಳ ಬಗ್ಗೆ ಇಂದಿನಿಂದ ಆರಂಭಗೊಂಡಿ ರುವ 26ನೇ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಮಹತ್ವದ ವಿಚಾರಗಳ ವಿನಿಮಯಗಳಾಗಿವೆ.ಸಮ್ಮೇಳನದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಬೆಳೆದು ಬಂದ ಹಾದಿಯನ್ನು ಸ್ಮರಿಸಿಕೊಂಡರು.

1999ರಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಅಡಿಗಲ್ಲು ಹಾಕಿತು. ಬೆಂಗಳೂರು ಟೆಕ್ ಸಮ್ಮೇಳನ ದೇಶದಲ್ಲೇ ಅಷ್ಟೇ ಅಲ್ಲ, ಏಷ್ಯಾಖಂಡದ ಅತಿದೊಡ್ಡದಾದ ಸಮಾವೇಶವಾಗಿದೆ. ಈ ಬಾರಿಯ ಸಮಾವೇಶದಲ್ಲಿ ಗಡಿಗಳನ್ನು ದಾಟುವ ಧ್ಯೇಯ ಹೊಂದಿರುವುದು ಸೂಕ್ತವಾಗಿದೆ. ಮೊಟ್ಟೆಯ ಗೋಡೆಯನ್ನು ದಾಟದೇ ಇದ್ದರೆ ಮರಿಗಳು ಹೊರ ಬರುವುದಿಲ್ಲ. ಗಡಿಗಳನ್ನು ದಾಟದೇ ಇದ್ದರೆ ಯಾವುದೇ ಸಾಮ್ರಾಜ್ಯವೂ ನಿರ್ಮಾಣವಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರಿಗೂ ಅಂತಹ ಧ್ಯೇಯೋದ್ದೇಶಗಳು ಅಗತ್ಯ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಅಮೆರಿಕ, ಜರ್ಮನಿಯ ನಂತರ ಕೃತಕ ಬುದ್ದಿಮತೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರು ಐಟಿ-ಬಿಟಿ, ರಕ್ಷಣೆ, ಬಾಹ್ಯಾಕಾಶ ಸೇರಿದಂತೆ ವಿವಿಧ ವಲಯಗಳಲ್ಲಿನ ಉತ್ಪಾದನೆ ಮತ್ತು ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು. ವಿದೇಶಿ ಬಂಡವಾಳ ಹೂಡಿಕೆ ಭವಿಷ್ಯದ ನೀಲನಕ್ಷೆ ಸೇರಿದಂತೆ ಹಲವಾರು ವಲಯಗಳಲ್ಲಿ ಕರ್ನಾಟಕ ಮುಂದಿದೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ , ಕರ್ನಾಟಕ ಸಂಶೋಧನೆ ಮತ್ತು ಆರ್ಥಿಕ ಅಭಿವೃದ್ಧಿ ಹಾದಿಯಲ್ಲಿ ಸುದೀರ್ಘ ಪ್ರಯಾಣ ಮಾಡಿದೆ. ಅನಿರೀಕ್ಷಿತವಾದ ಸಾಧ್ಯತೆಗಳನ್ನು ನಿಭಾಯಿಸುವಲ್ಲೂ ಮುಂಚೂಣಿಯಲ್ಲಿದ್ದೇವೆ. ಕ್ರಿಯಾತ್ಮಕ ಮತ್ತು ಸ್ವಾವಲಂಬಿತ ಪರಿಸರ ಸೃಷ್ಟಿಸುವಲ್ಲಿ ಮಹತ್ವದ ಎತ್ತರದಲ್ಲಿದ್ದೇವೆ. ಬಂಡವಾಳ ಆಕರ್ಷಣೆ, ಉದ್ಯಮ ಶೀಲತೆ, ನೀತಿ ನಿರೂಪಣೆಗಳ ಮೂಲಕ ಪ್ರಗತಿಯ ಹಾದಿಯಲ್ಲಿ ಅಪತ್ಯ ಸೃಷ್ಟಿಸುತ್ತಿದ್ದೇವೆ. ಸುಸ್ಥಿರತೆ ಮತ್ತು ಒಳಗೊಳ್ಳುವಿಕೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಶೇ.40ರಷ್ಟು, ಬಯೋತಂತ್ರಜ್ಞಾನ ವಲಯದಲ್ಲಿ ಶೇ.30ರಷ್ಟು, ಇಎಸ್ಡಿಎಂ ವಲಯದಲ್ಲಿ ಶೇ.64ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು, 234 ಇಂಜಿನಿಯರಿಂಗ್ ಕಾಲೇಜುಗಳು, 1777 ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಇವೆ. 10 ಕೈಗಾರಿಕಾ ವಲಯಗಳಿವೆ. ಡಿಫೆನ್ಸ್ಪಾರ್ಕ್, ಇವಿ ಪಾರ್ಕ್ ಸೇರಿದಂತೆ ಹಲವಾರು ಕ್ಷೇತ್ರಗಳ ಮೂಲಕ ಹೂಡಿಕೆಗೆ ವ್ಯಾಪಕ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ನ ಅಧ್ಯಕ್ಷ ಕ್ರಿಷ್ ಗೋಪಾಲಕೃಷ್ಣ ಮಾತನಾಡಿ, ಜಾಗತಿಕವಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕ ಶೇ.9ರಷ್ಟು ಪಾಲು ಪಡೆದಿದ್ದು, 200 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. 2030ರ ವೇಳೆಗೆ 350 ಬಿಲಿಯನ್ ಡಾಲರ್ ಗುರಿಯನ್ನು ಹೊಂದಿದೆ. ವೇಗ ವರ್ಧಕ ಹಾಗೂ ನಿರಂತರ ಬೆಳವಣಿಗೆಗಳನ್ನು ಕಾಯ್ದುಕೊಂಡಿದೆ. ತಂತ್ರಜ್ಞಾನದ ಪರಿವರ್ತನೆಗೆ ಸ್ಪಂದಿಸುತ್ತಿದೆ. 2022ರ ನವೆಂಬರ್ನಲ್ಲಿ ಆರಂಭಗೊಂಡ ಚಾಟ್ ಜಿಪಿಟಿ ಅಪ್ಲಿಕೇಶನ್ ಆಧಾರಿದ ತಂತ್ರಜ್ಞಾನ ಹೆಚ್ಚು ಜನಪ್ರಿಯಗೊಂಡಿದೆ ಎಂದರು.

ಜೈವಿಕ ತಂತ್ರಜ್ಞಾನ ವಲಯದ ವಿಷನ್ ಗ್ರೂಪ್ನ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಮಾತನಾಡಿ, ಜೈವಿಕ ತಂತ್ರಜ್ಞಾನ 2030ರ ವೇಳೆಗೆ 150 ಬಿಲಿಯನ್ ಡಾಲರ್ ವಹಿವಾಟು ದಾಖಲಿಸಲಿದೆ. ಪ್ರಸ್ತುತ 80 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.ಬೆಂಗಳೂರು ಐಟಿ-ಬಿಟಿಗಳಿಗೆ ಅಪೇಕ್ಷಣೀಯ ಸ್ಥಳವಾಗಿದೆ. ಜೈವಿಕ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಕೊಡುಗೆ ಅಪಾರವಾದದ್ದು, ದತ್ತಾಂಶ ವಿಶ್ಲೇಷಣೆ, ದತ್ತಾಂಶ ಆಧರಿಸಿದ ತಂತ್ರಜ್ಞಾನ, ಕೃತಕ ಬುದ್ದಿಮತ್ತೆಗಳ ವಲಯದಲ್ಲಿ ವಿಫಲ ಹೂಡಿಕೆಗಳಾಗುತ್ತಿವೆ. ಜೈವಿಕ ತಂತ್ರಜ್ಞಾನ ಜೀವನ ಶೈಲಿ, ಔಷ, ಪೌಷ್ಠಿಕತೆ ಸೇರಿದಂತೆ ಹಲವು ವಲಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಶಿವಪ್ರಸಾದ್ ಪ್ರಕಾಶ್ ಮಾತನಾಡಿ, ಭವಿಷ್ಯದಲ್ಲಿ ಜೆನ್ಎಐ, ಕ್ಲೈಮೆಟ್ಕೆ, ಫಿನ್ಟೆಕ್ ತಂತ್ರಜ್ಞಾನಗಳು ಜನ ಜೀವನದ ಹಾಸುಹೊಕ್ಕುಗಳಾಗಲಿದೆ. ಜೆನ್ಎಐನಲ್ಲಿ ಜಾಗತಿಕವಾಗಿ ಈಗಾಗಲೇ 25 ಸಾವಿರ ಬಿಲಿಯನ್ ಡಾಲರ್ ಹೂಡಿಕೆಯಾಗಿದೆ. ನಮ್ಮ ದೇಶದಲ್ಲಿ ಈವರೆಗೂ ಆ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಿಲ್ಲ. ಆದರೆ, ಈ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ ಎಂದರು.
ಸಮ್ಮೇಳನದಲ್ಲಿ ಜೈವಿಕ ತಂತ್ರಜ್ಞಾನ ಹಾಗೂ ಎವಿಜಿಸಿ-ಎಕ್ಸ್ಆರ್ ಕರಡು ನೀತಿಗಳನ್ನು ಪ್ರಕಟಿಸಲಾಯಿತು.

RELATED ARTICLES

Latest News