Wednesday, April 24, 2024
Homeಬೆಂಗಳೂರುಸಿಲಿಕಾನ್ ಸಿಟಿಯಲ್ಲಿ ಹನಿ…ಹನಿ…ನೀರಿಗೂ ತತ್ವಾರ

ಸಿಲಿಕಾನ್ ಸಿಟಿಯಲ್ಲಿ ಹನಿ…ಹನಿ…ನೀರಿಗೂ ತತ್ವಾರ

ಬೆಂಗಳೂರು,ಫೆ.22- ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮ ಎದುರಾಗಿದೆ. ಒಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‍ವೆಲ್‍ಗಳು ಬತ್ತಿಹೋಗುತ್ತಿದ್ದು ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹದೇವಪುರ, ಕೆ.ಆರ್.ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿ ಸುಮಾರು 16 ವರ್ಷಗಳೇ ಕಳೆದಿವೆಯಾದರೂ ಇಲ್ಲಿ ವಾಸಿಸುವ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ಸರಬರಾಜಾಗುತ್ತಿಲ್ಲ.

ಇತ್ತ ಪಾಲಿಕೆಗೆ ಶೇ. 50 ರಷ್ಟು ಆದಾಯ ತಂದು ಕೊಡುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹನಿ ನೀರಿಗೂ ಭಿಕ್ಷೆ ಬೇಡುವ ಸ್ಥಿತಿ ಬಂದಿದೆ. ಐಟಿಬಿಟಿ ಕ್ಷೇತ್ರ ಅಂತಲೇ ಕರೆಸಿಕೊಳ್ಳುವ ಮಹದೇವಪುರ ಕ್ಷೇತ್ರದ ಪ್ರತಿ ವಾರ್ಡ್‍ಗಳಲ್ಲಿ ನೀರಿನ ಅಭಾವದಿಂದ ಜನ ಹೈರಾಣಾಗಿದ್ದಾರೆ. ಈ ಕ್ಷೇತ್ರಕ್ಕೊಳಪಡುವ ವರ್ತೂರು, ಹಗದೂರು ಮತ್ತಿತರ ವಾರ್ಡ್‍ಗಳಲ್ಲಿ ಬೋರ್‍ವೆಲ್‍ಗಳು ಬತ್ತಿ ಹೋಗಿವೆ. ಇಲ್ಲಿನ ಜನರು ದಿನನಿತ್ಯ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಿದೆ.

ಈ ಕ್ಷೇತ್ರದಲ್ಲಿ ಪ್ರತಿ ಮನೆಗೂ ಟ್ಯಾಂಕರ್ ನೀರೇ ಗತಿ. ತಿಂಗಳಲ್ಲಿ 4 ರಿಂದ 5 ಸಾವಿರ ಹಣ ನೀರಿಗೆ ಕೊಡಬೇಕು. ಒಂದು ವೇಳೆ ಟ್ಯಾಂಕರ್ ನೀರಿಗೆ ಬುಕ್ ಮಾಡಿದರೆ ಅದು ಬರೋದಕ್ಕೆ ಒಂದು ವಾರ ಬೇಕಂತೆ. ಅಂತ ಇಲ್ಲಿನ ಜನ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಹೆಸರಿಗೆ ಮಾತ್ರ ಮಹದೇವಪುರ ಅದರೆ ಇಲ್ಲಿ ಗಂಗೆಗಾಗಿ ಪ್ರತಿದಿನ ಪರದಾಡುವಂತಾಗಿರುವುದಂತೂ ಸತ್ಯ.

ಇನ್ನು ಕೆ.ಆರ್.ಪುರಂನಲ್ಲೂ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಕ್ಷೇತ್ರದ ದೇವಸಂದ್ರ ವಾರ್ಡ್‍ನ ಕತೆಯೇ ಬೇರೆ. ಈ ವಾರ್ಡ್‍ನ ಜನ ಪ್ರತಿನಿತ್ಯ ಕುಡಿಯುವ ನೀರಿಗೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ಮೊದಲು ವಾರಕ್ಕೆ ಎರಡು ದಿನ ನೀರು ಬಿಡ್ತಿದ್ದ ಬಿಬಿಎಂಪಿ ಈಗ ವಾರಕ್ಕೆ ಒಂದು ಬಾರಿ ಅದೂ ಅರ್ಧ ಗಂಟೆ ಮಾತ್ರ ನೀರು ಸರಬರಾಜು ಮಾಡ್ತಿದೆಯಂತೆ.

ವಾರಕ್ಕೊಮ್ಮೆ ನೀರು ಬಿಡುವುದರಿಂದ ಕೂಲಿ ಕೆಲಸ ಮಾಡುವ ಮಹಿಳೆಯರು ಕೆಲಸಕ್ಕೆ ರಜೆ ಹಾಕಿ ನೀರು ತುಂಬಿಕೊಳ್ಳಬೇಕು. ಇಲ್ಲದಿದ್ದರೆ ವಾರ ಪೂರ್ತಿ ಕುಡಿಯೋಕ್ಕೆ ನೀರು ಇಲ್ಲದೆ ಪರದಾಡಬೇಕು. ಕ್ಯಾನ್ ವಾಟರ್‍ಗೆ ಪ್ರತಿದಿನ 100 ರೂಪಾಯಿ ಖರ್ಚು ಮಾಡಬೇಕು.ಇನ್ನು ಬಟ್ಟೆ ಹೊಗೆಯಲು, ಸ್ನಾನಕ್ಕೆ, ಪಾತ್ರೆ ತೊಳೆಯೋದಕ್ಕೆ ಅಂತ ಟ್ಯಾಂಕರ್ ನೀರು ತಗೋಬೇಕು.ಇದಕ್ಕೆ ಮಂತ್ಲಿ ಮೂರರಿಂದ ನಾಲ್ಕು ಸಾವಿರ ರೂ. ತೆರಬೇಕು ಎಂದು ಇಲ್ಲಿನ ಜನ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಭೂಗರ್ಭ ಶಾಸ್ತ್ರಜ್ಞರ ಅನುಮತಿ ನಂತರವೇ ಬೋರ್‍ವೆಲ್ ಕೊರೆಸಬೇಕು

ನಗರದಲ್ಲಿ ನೀರಿಗಾಗಿ ಹಾಹಾಕಾರವಿರುವಾಗಲೇ ಮತ್ತೊಂದು ಕಡೆ ಬಿಬಿಎಂಪಿಯಿಂದ ಕೊರೆಯುತ್ತಿರುವ ಬೋರ್‍ವೆಲ್‍ಗಳು ಫೇಲ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದುವರೆಗೂ 40 ಕೋಟಿ ರೂ.ಗಳ ಅನುದಾನದಲ್ಲಿ 110 ಹಳ್ಳಿಗಳಲ್ಲಿ ಬೋರ್‍ವೆಲ್ ಕೊರೆದಿದ್ದರೂ ಅವುಗಳಲ್ಲಿ ಬಹುತೇಕ ಬೋರ್‍ಗಳು ಫೇಲ್ ಆಗಿರುವುದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಹೀಗಾಗಿ ಇನ್ನು ಮುಂದೆ ಬೋರ್‍ವೇಲ್ ಕೊರೆಯುವವರು ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯಪಡೆದೇ ಬೋರ್‍ವೆಲ್ ಕೊರೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಬೇಕಾಬಿಟ್ಟಿ ಬೋರ್‍ವೆಲ್ ಕೊರೆದು ನೀರು ಬರಲಿಲ್ಲ ಎಂದರೆ ಅಂತಹ ಗುತ್ತಿಗೆದಾರರಿಗೆ ಹಣ ಪಾವತಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಬತ್ತಿಹೋಗಿರುವ ಬೋರ್‍ವೆಲ್‍ಗಳ ರೀಚಾರ್ಜ್‍ಗೂ ಆದೇಶಿಸಿರುವುದು ಜನರಲ್ಲಿ ಸ್ವಲ್ಪಮಟ್ಟಿನ ನೆಮ್ಮದಿ ತರಿಸಿದೆ.

ಲಕ್ಕಸಂದ್ರದಲ್ಲೂ ಇದೇ ಗತಿ
ಇದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆ ಇರೋ ವಾರ್ಡ್. ಅವರು 8 ಬಾರಿ ಶಾಸಕರಾಗಿ, 5 ಬಾರಿ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಈ ಏರಿಯಾದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಅಷ್ಟಕ್ಕೂ ಇದು ಯಾವ ಏರಿಯಾ ಅಂತೀರಾ? ಅದೇ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರೋ ಲಕ್ಕಸಂದ್ರ ವಾರ್ಡ್. ಇಲ್ಲಿನ ಜನ ಈಗಲೂ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕಾವೇರಿ ನೀರಿಗೆ ಇಲ್ಲಿನ ಜನ ಜಪ ಮಾಡ್ತಿದ್ದಾರೆ. ವಾರಕ್ಕೊಮ್ಮೆ ಬರೋ ಕಾವೇರಿ ನೀರು ಸಣ್ಣ ಪ್ರಮಾಣದಲ್ಲಿ ಬರುತ್ತೆ. ಅದೂ ಒಂದು ಗಂಟೆ ಮಾತ್ರ ಬಿಡ್ತಾರೆ, ಬಿಟ್ಟ ನೀರು ಒಂದು ಬಿಂದಿಗೆಯನ್ನೂ ತುಂಬಲ್ಲ ಅಂತ ಇಲ್ಲಿನ ಜನ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಬೋರ್‍ವೆಲ್ ಕೊರೆದು ವರ್ಷವಾದ್ರೂ ನೀರು ಮಾತ್ರ ಬರ್ತಿಲ್ಲ. ಜನಪ್ರತಿನಿಧಿಗಳನ್ನ ಕೇಳಿದ್ರೆ ಸಿಗೋದು ಬರೀ ಭರವಸೆ ಮಾತ್ರ.
ಬೇಸಿಗೆ ಎಂಟ್ರಿಗೆ ಮೊದಲೇ ಸಚಿವರ ಮನೆ ರಸ್ತೆಯಲ್ಲೇ ಹೀಗೆ ಅದ್ರೆ ಮುಂದೆ ಹೇಗೆ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

ಟ್ಯಾಂಕರ್ ಮಾಫಿಯಾ
ನಗರದಲ್ಲಿ ಎದುರಾಗಿರುವ ನೀರಿನ ಹಾಹಾಕಾರವನ್ನೇ ಬಂಡವಾಳ ಮಾಡಿಕೊಂಡಿರುವ ನೀರಿನ ಟ್ಯಾಂಕರ್ ಮಾಫಿಯಾದವರು ಟ್ಯಾಂಕರ್ ನೀರಿಗೆ ಮನಸೋ ಇಚ್ಛೆ ಬೆಲೆ ನಿಗದಿಪಡಿಸುತ್ತಿರುವುದು ಕೆಲವೆಡೆ ಕಂಡು ಬಂದಿದೆ. 600 ರೂ. ಇದ್ದ ಒಂದು ಟ್ಯಾಂಕರ್ ನೀರಿಗೆ 1000ದಿಂದ 1200 ರೂ.ಗಳನ್ನು ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.

ಈ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸರ್ಕಾರ ಮನಸ್ಸು ಮಾಡಿದ್ದರೂ ಈಗಲೂ ಕೆಲವು ಪ್ರದೇಶಗಳಲ್ಲಿ ಮನಸೋಇಚ್ಛೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವ ನೀರಿನ ಟ್ಯಾಂಕರ್‍ಗಳ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದ್ದರೂ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಸಾಧ್ಯವಾಗದಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.

ಜನಪ್ರತಿನಿಧಿಗಳಿಗೆ ತಪರಾಕಿ
ನೀರಿನ ಸಮಸ್ಯೆ ಇರೋದು ಕೇವಲ ಮಹದೇವಪುರ, ಯಶವಂತಪುರ, ಆರ್.ಆರ್.ನಗರ, ಚಿಕ್ಕಪೇಟೆ ಮತ್ತು ಕೆ.ಆರ್.ಪುರದಲ್ಲಿ ಮಾತ್ರವಲ್ಲ, ನಗರದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ನೀರಿನ ಅಭಾವ ಸೃಷ್ಟಿಯಾಗಿದೆ. ಹೈಟೆಕ್ ಸಿಟಿಯಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಜನಪ್ರತಿನಿಧಿಗಳು ಮಾತ್ರ ಕ್ಯಾರೆ ಎನ್ನದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆ ಬಾಗಿಲಿಗೆ ಕೈ ಮುಗಿದುಕೊಂಡು ಬರುವ ರಾಜಕಾರಣಿಗಳು ಚುನಾವಣೆ ಮುಗಿದ ಮೇಲೆ ಈ ಕಡೆ ಬರೋದೇ ಇಲ್ಲ ಎಂದು ನೀರು ಸಿಗದ ಬಡಪಾಯಿ ಜನರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕುಡಿಯೋದಕ್ಕೆ ಅಂತ ಬಾಟಲ್ ನೀರು ಬಳಸ್ತೀವಿ. 25 ಲೀಟರ್ ಕ್ಯಾನ್ ನೀರಿಗೆ 50 ರಿಂದ 60 ರೂಪಾಯಿ ಕೊಡಬೇಕು. ಬೇಸಿಗೆ ಅರಂಭಕ್ಕೂ ಮುನ್ನವೇ ನೀರಿನ ಅಭಾವ ಉಲ್ಬಣಗೊಂಡಿದೆ. ಇನ್ನು ಮಾರ್ಚ್, ಏಪ್ರಿಲ್‍ನಲ್ಲಿ ಉದ್ಭವಿಸುವ ನೀರಿನ ಸಮಸ್ಯೆ ಎದುರಿಸೋದು ಹೇಗೆ ಎಂದು ಜನ ಭಯಭೀತರಾಗಿದ್ದಾರೆ.

ಯಶವಂತಪುರದಲ್ಲೂ ಜನರ ಪರದಾಟ
ಇನ್ನು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಂತೂ ಜನ ನೀರಿಗಾಗಿ ಪರದಾಡುವಂತಾಗಿದೆ. ಈ ಕ್ಷೇತ್ರದ ಹೇರೋಹಳ್ಳಿ ವಾರ್ಡ್‍ನ ವಿಘ್ನೇಶ್ವರ ನಗರ, ಮಹದೇಶ್ವರ ನಗರ, ದೊಡ್ಡಬಿದರಕಲ್ಲು ವಾರ್ಡ್, ಉಲ್ಲಾಳು ವಾರ್ಡ್, ಕೆಂಗೇರಿ ಮತ್ತಿತರ ಕಡೆಗಳಲ್ಲೂ ಜನ ನೀರು ಸಿಗದೆ ಪರದಾಡುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಇದುವರೆಗೂ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಇಲ್ಲಿನ ಬಾಡಿಗೆ ಮನೆಗಳಿಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ನೀರಿನ ಅಭಾವ ತೀವ್ರಗೊಂಡಾಗ ಸ್ಥಳೀಯ ಪ್ರತಿನಿಗಳು ಟ್ಯಾಂಕರ್ ಮೂಲಕ ಸ್ವಲ್ಪ ಪ್ರಮಾಣದ ನೀರು ನೀಡಿ ಮತ್ತೆ ಆ ಕಡೆ ಮುಖ ಕೂಡ ಹಾಕಲ್ಲ ಎಂದು ಇಲ್ಲಿನ ಜನ ಆರೋಪಿಸುತ್ತಿದ್ದಾರೆ.
ಇನ್ನು ಮೊನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನ ನಡೆಸಿದ್ದ ಆರ್.ಆರ್. ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ನರಸಿಂಹ ಸ್ವಾಮಿ ಬಡಾವಣೆಯಲ್ಲಿ ಹನಿ ನೀರಿಗೂ ರಾಜಕೀಯದ ಬಣ್ಣ ಬೆರೆಸಿದ್ದು, ನೀರಿಲ್ಲದೇ ಜನ ಕಂಗಾಲಾಗಿ ಖಾಲಿ ಬಿಂದಿಗೆಗಳನ್ನು ಇಟ್ಟುಕೊಂಡು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ತಲುಪಿದ್ದಾರೆ.

ಈ ಏರಿಯಾದಲ್ಲಿ ವಾರಕ್ಕೊಮ್ಮೆ ರಾತ್ರಿ ವೇಳೆ ಬರೋ ನೀರನ್ನೇ ಕಾದು ಕುಳಿತು ಶೇಖರಿಸಿಡುವ ಸ್ಥಿತಿ ನಿರ್ಮಾಣವಾಗಿರೋದರಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಈ ಏರಿಯಾದಲ್ಲಿ ಹೆಚ್ಚಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವವರೇ ಇರುವುದರಿಂದ ಎಷ್ಟೋ ದಿನ ನೀರು ಬರುತ್ತೆ ಎಂದು ಕೆಲಸಕ್ಕೆ ರಜೆ ಹಾಕಿ ನೀರಿಗೆ ಕಾದುಕುಳಿತುಕೊಳ್ಳುವಂತಾಗಿದೆ.

RELATED ARTICLES

Latest News