ಬೆಂಗಳೂರು, ಜು.10- ನಗರದ ಬೀದಿ ನಾಯಿಗಳಿಗೂ ಬಾಡೂಟದ ಗ್ಯಾರಂಟಿ ಸಿಕ್ಕಿದೆ. ರಾಜ್ಯದ ಜನರಿಗೆ ಪಂಚ ಗ್ಯಾರಂಟಿ ನೀಡಿರುವ ಸರ್ಕಾರ ಇದೀಗ ಜನರ ತೆರಿಗೆ ಹಣದಲ್ಲಿ ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸಲು ಮುಂದಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಸ್ಥಳೀಯ ಸಂಸ್ಥೆಯಿಂದ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ.ಜನರ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲೇ ಬೀದಿನಾಯಿಗಳಿಗೆ ಬಾಡೂಟದ ಭಾಗ್ಯ ನೀಡಲು ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೆಲವರು ಇದು ಒಳ್ಳೆ ಐಡಿಯಾ ಎನ್ನುತ್ತಿದ್ದರೆ, ಇನ್ನು ಕೆಲವರು ಬಿಬಿಎಂಪಿಯವರಿಗೆ ಈ ಐಡಿಯಾ ಕೊಟ್ಟ ಬೃಹಸ್ಪತಿ ಅಧಿಕಾರಿ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾವೇ..? ಜನರ ಮೇಲೆ ಕಾಳಜಿ ಇಲ್ಲ ನಿಮಗೆ ನಾಯಿಗಳ ಮೇಲೆ ಪ್ರೀತಿ..! ಹೇಗೆ ಹುಟ್ಟಿತು ಎಂದು ಇನ್ನು ಕೆಲವರು ಕೇಳುತ್ತಿದ್ದಾರೆ.
ಜನರಿಗೆ ಮೂಲಭೂತ ಸೌಕರ್ಯಗಳಿಲ್ಲ. ಆದರೆ, ಬೀದಿ ನಾಯಿಗಳಿಗೆ ಮಾಂಸ. ಚಿಕನ್ ಎಗ್ ರೈಸ್ ಭಾಗ್ಯ ನೀಡಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.
ಯಾರು ಏನೇ ಅಂದರೂ ನಾವು ಮಾತ್ರ ನಮ ಕೆಲಸ ನಿಲ್ಲಿಸೊಲ್ಲ ಎನ್ನುತ್ತಿರುವ ಬಿಬಿಎಂಪಿಯವರು ಈಗಾಗಲೇ ಬೀದಿ ನಾಯಿಗಳಿಗೆ ಊಟ ಹಾಕಲು ಟೆಂಡರ್ ಕರೆದಿದ್ದಾರೆ.
ಪಾಲಿಕೆಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲು ಟೆಂಡರ್ ಕರೆಯಲಾಗಿದ್ದು, ಪ್ರತಿ ದಿನ ಚಿಕನ್ ಹಾಗೂ ಎಗ್ ರೈಸ್ ಊಟ ಹಾಕಿಸಲು ತೀರ್ಮಾನಿಸಲಾಗಿದೆ.
ಬೀದಿ ನಾಯಿಗಳ ಊಟಕ್ಕೆ 2.80 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಪ್ರತಿ ವಲಯದಲ್ಲಿ ನಿತ್ಯ 600 ರಿಂದ 700 ಬೀದಿ ನಾಯಿಗಳಿಗೆ ಬಾಡೂಟ ಹಾಕಿಸಲಾಗುತ್ತಿದೆ.