Friday, November 22, 2024
Homeರಾಜ್ಯಮೊಬೈಲ್ ಸಂದೇಶಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿರುವ ಬೆಸ್ಕಾಂ

ಮೊಬೈಲ್ ಸಂದೇಶಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿರುವ ಬೆಸ್ಕಾಂ

ಬೆಂಗಳೂರು,ಏ.25- ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಬಗ್ಗೆ ಬೆಸ್ಕಾಂ ವತಿಯಿಂದ ಚುನಾವಣಾ ಜಾಗೃತಿ ಮೂಡಿಸುವ ಮೊಬೈಲ್ ಸಂದೇಶವನ್ನು ನೀಡಲಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಪ್ರತಿಯೊಬ್ಬರೂ ಮತದಾನ ಮಾಡುವಂತೆ ಬೆಸ್ಕಾಂ ಸಂದೇಶದಲ್ಲಿ ಮನವಿ ಮಾಡಿದೆ.

ಜವಾಬ್ದಾರಿಯುತ ಪ್ರತಿಯೊಬ್ಬ ನಾಗರಿಕರೂ ನಾಳೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆಯುವ ಮತದಾನದಲ್ಲಿ ಪಾಲ್ಗೊಂಡು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕೆಂದು ಕೋರಿದೆ. ಇದೇ ರೀತಿ ಕೆಎಸ್‍ಆರ್‍ಟಿಸಿ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮುದ್ರಿಸುತ್ತಿದೆ.

ಬಿಬಿಎಂಪಿಯು ಪ್ರತಿನಿತ್ಯ ಮನೆಮನೆಯಿಂದ ಸಂಗ್ರಹಿಸುವ ಕಸದ ವಾಹನಗಳ ಮೇಲೂ ಮತದಾನದ ಜಾಗೃತಿ ಸಂದೇಶದ ಫಲಕವನ್ನು ಹಾಕಲಾಗಿದೆ. ವಿವಿಧ ಸಂಘ, ಸಂಸ್ಥೆಗಳು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದನ್ನು ಸ್ಮರಿಸಬಹುದು.

ಭಾರತದ ಚುನಾವಣಾ ಆಯೋಗವು ವೈವಿಧ್ಯಮಯವಾದ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದೆ. ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಈ ಬಾರಿ ಮತದಾರರಿಗೆ ನೀಡುವ ವೋಟರ್ ಸ್ಲಿಪ್‍ನಲ್ಲಿ ಕ್ಯೂಆರ್‍ಕೋಡ್ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಮತದಾರರಿಗೆ ಮತಗಟ್ಟೆಗೆ ಹೋಗಲು ಮಾರ್ಗಸೂಚಿ ನೀಡುವುದಲ್ಲದೆ, ಮತಗಟ್ಟೆಯಲ್ಲಿರುವ ಸರತಿ, ಸಾಲು, ಅಲ್ಲಿನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News