Saturday, May 4, 2024
Homeಇದೀಗ ಬಂದ ಸುದ್ದಿವೋಟ್ ಮಾಡಿ ಹೋಟೆಲ್‍ನಲ್ಲಿ ಉಚಿತ ಊಟ ಮಾಡಿ

ವೋಟ್ ಮಾಡಿ ಹೋಟೆಲ್‍ನಲ್ಲಿ ಉಚಿತ ಊಟ ಮಾಡಿ

ಬೆಂಗಳೂರು,ಏ.25- ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಮತ ಚಲಾವಣೆ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮತದಾನದ ಬಗ್ಗೆ ಹಲವು ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.

ಕೆಲವರು ತಮ್ಮ ಮದುವೆ ಕಾರ್ಯಕ್ರಮಗಳಲ್ಲೂ ಮತದ ಹಕ್ಕಿನ ಬಗ್ಗೆ ಅರಿವು ಮೂಡಿಸಿರುವುದು ಕಂಡುಬರುತ್ತಿದೆ. ಆದರೆ, ಬೆಂಗಳೂರಿನ ಹೋಟೆಲ್‍ವೊಂದು ಮತದಾನ ಮಾಡಿ ಬಂದವರಿಗೆ ಉಚಿತ ಉಪಾಹಾರ ನೀಡಲು ಮುಂದಾಗಿದೆ. ಮತದಾನದ ಜಾಗೃತಿ ಸಲುವಾಗಿ ನಗರದ ನಿಸರ್ಗ ಹೊಟೇಲ್ ಮಾಲೀಕರು ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿತಿನಿಸುಗಳನ್ನು ನೀಡಲು ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಬೆಂಗಳೂರು ಸೇರಿ 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಈ ದಿನ ಮತದಾನ ಮಾಡಿದ ಬಳಿಕ ಹೋಟೆಲ್‍ಗೆ ಬಂದು ಮತದಾನದ ಗುರುತು ತೋರಿಸಿದರೆ ಜನರಿಗೆ ಉಚಿತ ಬೆಣ್ಣೆ ದೋಸೆ, ಸಿಹಿ ತಿನಿಸು, ತಂಪು ಪಾನಕ ನೀಡಲಿದ್ದಾರೆ.

ಚುನಾವಣಾ ಆಯೋಗದ ಅನುಮತಿ ಮೇರೆಗೆ ರಿಯಾಯಿತಿ ದರದಲ್ಲಿ ಊಟ, ತಿಂಡಿ, ಉಚಿತ ಸೇವೆಗೆ ಅವಕಾಶ ನೀಡಲಾಗಿದೆ. ಇದನ್ನು ಬಳಸಿಕೊಂಡು ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಹೋಟೆಲ್ ಮತದಾರರಿಗೆ ಈ ಮೂಲಕ ಮತದಾನದ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ವೋಟ್ ಮಾಡಿ ಊಟ ಮಾಡಿ:
ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕವನ್ನು ಮತದಾನದ ಉತ್ತೇಜನಕ್ಕಾಗಿ ಉಚಿತವಾಗಿ ನೀಡಲಾಗುವುದು. ವೋಟ್ ಮಾಡಿ, ಊಟ ಮಾಡಿ ಎನ್ನುವ ಸಾಮಾಜಿಕ ಕಳಕಳಿವುಳ್ಳ ರಾಜಕೀಯೇತರ ಕಾರ್ಯಕ್ರಮ ಇದಾಗಿದೆ ಎಂದು ನಿಸರ್ಗ ಹೊಟೇಲ್ ಮಾಲೀಕರಾದ ಕೃಷ್ಣ ರಾಜ್ ಹೇಳಿದ್ದಾರೆ.

ಚಿಕ್ಕಮಗಳೂರು, ಕೊಡಗು ಮುಂತಾದ ಕಡೆಗಳಲ್ಲಿ ಹೋಟೆಲ್ ಹಾಗೂ ಹೋಮ್ ಸ್ಟೇಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮತದಾನ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ನಾಳೆ ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಇದ್ದು, ಶನಿವಾರ ಏಪ್ರಿಲ್ ತಿಂಗಳ ನಾಲ್ಕನೇ ಶನಿವಾರವಾಗಿದೆ. ಶುಕ್ರವಾರ ಮತ್ತು ಶನಿವಾರ ಸಾರ್ವಜನಿಕ ರಜೆ ಇದ್ದು ಭಾನುವಾರ ಸಹ ರಜೆ ಸಿಗುವ ಕಾರಣ ಮೂರು ದಿನ ರಜೆಯಾಗುತ್ತದೆ. ಸಾಲು ಸಾಲು ರಜೆಗಳು ಸಿಗುವ ಕಾರಣ ಕೆಲವೊಬ್ಬರು ಗುರುವಾರವೇ ಬೆಂಗಳೂರು ಪಟ್ಟಣ ಬಿಟ್ಟು ಟ್ರಿಪ್‍ಗೆ ಹೋಗುವ ಯೋಜನೆ ರೂಪಿಸುತ್ತಿದ್ದಾರೆ.

ಆದರೆ, ಇದನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಬೆಂಗಳೂರಿನಲ್ಲಿ ಸಹ ಹೋಟೆಲ್ ಮಾಲೀಕರು ಹೊಸದಾಗಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

RELATED ARTICLES

Latest News