Monday, June 17, 2024
Homeರಾಜಕೀಯಸ್ಯಾಮ್ ಪಿಟ್ರೋಡ ಹೇಳಿಕೆ ವೈಯಕ್ತಿಕವಾದದ್ದು, ಬಿಜೆಪಿಯವರು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ : ಡಿಕೆಶಿ

ಸ್ಯಾಮ್ ಪಿಟ್ರೋಡ ಹೇಳಿಕೆ ವೈಯಕ್ತಿಕವಾದದ್ದು, ಬಿಜೆಪಿಯವರು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ : ಡಿಕೆಶಿ

ಬೆಂಗಳೂರು,ಏ.25- ಸಂಪತ್ತಿನ ತೆರಿಗೆ ವಿಚಾರವಾಗಿ ಕಾಂಗ್ರೆಸ್ ನಾಯಕ ಸ್ಯಾಂ ಪಿಟ್ರೋಡ ಅವರ ಹೇಳಿಕೆ ಸಂಪೂರ್ಣ ವೈಯಕ್ತಿಕವಾಗಿದ್ದು, ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ, ಅದು ಸಾಧ್ಯವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೋಲಿನ ಭಯದಿಂದ ಹತಾಶವಾಗಿದೆ. ಹೀಗಾಗಿ ಅನಗತ್ಯವಾದ ವಿವಾದಗಳನ್ನು ಕೆಣಕಿ ಜನರ ಮನಸ್ಸನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.

ಈ ಹಿಂದೆ ಬಿಜೆಪಿ ಸರ್ಕಾರದಲ್ಲೇ ಸಂಪತ್ತಿನ ಒಡೆತನದ ಅಮಾನೀಕರಣ ವ್ಯವಸ್ಥೆಯನ್ನು ಜಾರಿಗೆ ತಂದು, ನಂತರ ಅದನ್ನು ಮರು ಹಂಚಿಕೆ ಮಾಡುವ ಚರ್ಚೆ ನಡೆದಿತ್ತು ಎಂದು ಯಾವುದೋ ಮಾಧ್ಯಮದಲ್ಲಿ ನಾನು ಓದಿದ್ದೆ. ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆಗಳು, ತೀರ್ಮಾನಗಳು ಆಗಿಲ್ಲ. ಪ್ರಣಾಳಿಕೆಯಲ್ಲಿ ಏನು ಭರವಸೆ ಕೊಟ್ಟಿದ್ದೇವೆ ಅದಕ್ಕೆ ಮಾತ್ರ ನಾವು ಬದ್ಧ. ಅದನ್ನಷ್ಟೇ ಜಾರಿಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸ್ಯಾಂ ಪಿಟ್ರೋಟ ಹೇಳಿಕೆ ಸಂಪೂರ್ಣ ವೈಯಕ್ತಿಕ. ಈಗಾಗಲೇ ಇದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಸ್ಪಷ್ಟನೆ ನೀಡಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅದಕ್ಕೆ ಪಕ್ಷದ ಒಪ್ಪಿಗೆ ಇಲ್ಲ. ಈ ಹಿಂದೆ ಸಾಂಪ್ರದಾಯಿಕವಾಗಿ ಯಾವ ರೀತಿ ನಡೆದುಕೊಂಡು ಬಂದಿದೆಯೋ ಅದೇ ವ್ಯವಸ್ಥೆ ಮುಂದುವರೆಯಲಿದೆ. ರಾಜಕೀಯವಾಗಿ ಪರಂಪರೆಯನ್ನು ಮುಂದುವರೆಸಲಾಗುತ್ತದೆ. ಅಂತಹುದರಲ್ಲಿ ಪಿತ್ರಾರ್ಜಿತ ಆಸ್ತಿ ವರ್ಗಾವಣೆಯಾಗುವಾಗ ತೆರಿಗೆ ವಿಧಿಸಲು ಸಾಧ್ಯವೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮಂಗಳಸೂತ್ರದಂತಹ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಂಗಳಸೂತ್ರವನ್ನು ಕಿತ್ತು ಕಾಂಗ್ರೆಸ್‍ನವರು ಬೇರೆಯವರಿಗೆ ನೀಡುತ್ತಾರೆ ಎಂದು ಮೋದಿ ಹತಾಶೆ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆ ನೋಡಿದರೆ ಮಂಗಳಸೂತ್ರವನ್ನು ಮಾಡಿಸಿಕೊಳ್ಳಲಾಗದಂತಹ ವಾತಾವರಣವಿದೆ. ಇನ್ನು ಅದನ್ನು ಕಿತ್ತು ಬೇರೆಯವರಿಗೆ ಕಿತ್ತು ಕೊಡುವ ಅವಕಾಶವಾದರೂ ಎಲ್ಲಿದೆ ಎಂದು ಪ್ರಶ್ನಿಸಿದರು.

2014 ರಲ್ಲಿ ಮೋದಿ ಪ್ರಧಾನಿಯಾದಾಗ ಪ್ರತೀ ಗ್ರಾಂ ಚಿನ್ನದ ಬೆಲೆ 2,800 ರೂ. ಗಳಿತ್ತು. ಈಗ 75 ಸಾವಿರ ರೂ. ಆಗಿದೆ. 300 ಪಟ್ಟು ಹೆಚ್ಚಾಗಿದೆ. ಬಡವರು ಇಂತಹ ಪರಿಸ್ಥಿತಿಯಲ್ಲಿ ಮಂಗಳಸೂತ್ರ ಮಾಡಿಸಿಕೊಳ್ಳಲು ಸಾಧ್ಯವೇ ಎಂದು ಹೇಳಿದರು.

ನರೇಂದ್ರ ಮೋದಿಯವರಿಗೆ ದೇಶದ ಜನ 10 ವರ್ಷ ಅವಕಾಶ ನೀಡಿದರು. ಆದರೆ ಅಭಿವೃದ್ಧಿಯಾಗಲಿಲ್ಲ. ಚುನಾವಣೆಯಲ್ಲೂ ಅಭಿವೃದ್ಧಿಯ ವಿಚಾರಗಳು ಚರ್ಚೆಯೇ ಆಗುತ್ತಿಲ್ಲ. ಮಂಗಳಸೂತ್ರ, ಸಂಪತ್ತಿನ ತೆರಿಗೆಯಂತಹ ಸುಳ್ಳುಗಳ ವಿಚಾರಗಳನ್ನೇ ದೊಡ್ಡದಾಗಿ ಬಿಂಬಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಬಿಜೆಪಿಯವರು ಜನರ ಅಭಿಪ್ರಾಯವನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕೆಂದು ಹೇಳಿದರು.

ಮೊದಲ ಹಂತದ ಚುನಾವಣಾ ವೇಳೆ ತಮಿಳುನಾಡಿನಲ್ಲಿ 40 ಸ್ಥಾನಗಳಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಗೆಲ್ಲುವ ಸಾಧ್ಯತೆಗಳಿವೆ. ಅದಕ್ಕಾಗಿ ಬಿಜೆಪಿಯವರು ಮೈ ಪರಚಿಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಮೂರ್ನಾಲ್ಕು ಕಡೆ ಕಾಂಗ್ರೆಸ್‍ನ ಮುಖಂಡರನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ದಾಳಿ ನಡೆದಿದೆ. ಬಿಜೆಪಿಯವರ್ಯಾರೂ ಹಣ ಹಂಚುತ್ತಿಲ್ಲವೇ? ಅದು ಚುನಾವಣಾ ಆಯೋಗಕ್ಕೆ, ಆದಾಯ ತೆರಿಗೆ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಈವರೆಗೂ ಬಿಜೆಪಿಯ ಒಬ್ಬರ ಮನೆಯ ಮೇಲೂ ಏಕೆ ದಾಳಿಯಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಸುಳ್ಳು ವದಂತಿಗಳನ್ನು ಸೃಷ್ಟಿಸಿ, ಅಪಥ್ಯಗಳನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡುವ ಭರವಸೆಯಂತೆ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವೃತ್ತಿ ತರಬೇತಿಯೊಂದಿಗೆ 1 ಲಕ್ಷ ಶಿಷ್ಯ ವೇತನ, 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ, ನಗರಪ್ರದೇಶದಲ್ಲಿ ಉದ್ಯೋಗ ಖಾತ್ರಿಯಂತಹ ಭರವಸೆಗಳನ್ನು ನೀಡಿದೆ. ಜನರಿಗೆ ಇವು ತಲುಪಿವೆ ಮತ್ತು ಅರ್ಥವಾಗಿವೆ. ಹೀಗಾಗಿ ಲೋಕಸಭಾ ಮತದಾನದಲ್ಲಿ ಬಿಜೆಪಿಗೆ ಚೊಂಬು ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನುಡಿದಂತೆ ನಡೆದುಕೊಂಡಿದೆ. ಪಂಚಖಾತ್ರಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ದೇಶದಲ್ಲೂ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ತಿಳಿಸಿದರು.

RELATED ARTICLES

Latest News