Friday, November 22, 2024
Homeರಾಜ್ಯಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ರೊಚ್ಚಿಗೆದ್ದ ಭಗವಂತ ಕೂಬಾ

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ರೊಚ್ಚಿಗೆದ್ದ ಭಗವಂತ ಕೂಬಾ

ಬೆಂಗಳೂರು,ಜ.10- ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವ ಹಾಗೂ ಬೀದರ್ ಸಂಸದ ಭಗವಂತ ಕೂಬಾಗೆ ಟಿಕೆಟ್ ನೀಡಿರುವುದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲಿ ಗದ್ದಲ ಉಂಟಾಗಿದೆ. ಶಾಸಕರಾದ ಪ್ರಭು ಚವ್ಹಾಣ್ ಮತ್ತು ಶರಣು ಸಲಗಾರ ಸೇರಿದಂತೆ ಜಿಲ್ಲೆಯ ಮುಖಂಡರು ಮುಂಬರುವ ಚುನಾವಣೆಯಲ್ಲಿ ಭಗವಂತ ಕೂಬಾಗೆ ಟಿಕೆಟ್ ನೀಡಬಾರದೆಂದು ಪಕ್ಷದ ವರಿಷ್ಠರಿಗೆ ಒತ್ತಾಯ ಮಾಡಿದರು.

ಇದರಿಂದ ಕೆರಳಿ ಕೆಂಡವಾದ ಕೂಬಾ, ನನಗೆ ಟಿಕೆಟ್ ಕೊಡಬಾರದೆಂದು ಹೇಳಲು ನೀವ್ಯಾರು? ನಾನು ಸ್ಪರ್ಧೆ ಮಾಡಬೇಕೋ ಬೇಡ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನೀವು ನಿಮ್ಮ ಅಭಿಪ್ರಾಯಗಳನ್ನು ಮಾತ್ರ ಹೇಳಬೇಕೆ ಹೊರತು ಟಿಕೆಟ್ ನೀಡಬಾರದೆಂದು ಹೇಳಿದರೆ ಅದನ್ನು ಕೇಳಿಸಿಕೊಂಡು ನಾನು ಸುಮ್ಮನಿರಬೇಕೆ ಎಂದು ಪ್ರಶ್ನೆ ಮಾಡಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?

ಈ ವೇಳೆ ಸಭೆಯ ಮಧ್ಯ ಭಾಗದಲ್ಲಿ ಕುಳಿತಿದ್ದ ಪ್ರಭು ಚವ್ಹಾಣ್ ಹಾಗೂ ಶರಣು ಸಲಗಾರ ವೇದಿಕೆಯತ್ತ ದೌಡಾಯಿಸಿ ಭಗವಂತ ಕೂಬಾ ವಿರುದ್ಧ ಏರಿದ ಧ್ವನಿಯಲ್ಲೇ ತಿರುಗಿಬಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀವು ನಮ್ಮ ವಿರುದ್ಧ ಪ್ರಚಾರ ಮಾಡಿದ್ದೀರಿ. ನಮ್ಮನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಶಾಮೀಲಾಗಿ ಅಪಪ್ರಚಾರ ನಡೆಸಿದ್ದೀರಿ. ಆದರೆ ಕಾರ್ಯಕರ್ತರು ನಮ್ಮನ್ನು ಕೈಬಿಡದಿದ್ದರಿಂದ ನಾವು ಗೆದ್ದುಬಂದೆವು.

ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ನಿಮ್ಮ ಪರವಾಗಿ ನಾವು ಹೇಗೆ ಪ್ರಚಾರ ನಡೆಸಬೇಕು. ಸಂಸದರಾದ ಮೇಲೆ ಒಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಮನೆಗೆ ಬಂದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಪ್ರತಿಯೊಬ್ಬರನ್ನು ಸೊಕ್ಕು, ಮಾಕು ಮತ್ತು ಅಹಂನಿಂದಲೇ ಮಾತನಾಡಿಸುತ್ತಿದ್ದೀರಿ, ನೀವು ಕೂಡ ಮೊದಲು ಕಾರ್ಯಕರ್ತರಾಗಿದ್ದೀರಿ ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದರು.

ಇದರಿಂದ ಕುಪಿತರಾದ ಭಗವಂತ ಕೂಬಾ ಲೋಕಸಭೆ ಚುನಾವಣೆಯಲ್ಲಿ ನೀವು ಏನೇನು ಮಾಡಿದ್ದೀರಿ ಎಂಬುದು ನನಗೂ ಗೊತ್ತು. ಪಕ್ಷ ಹೇಳಿದಂತೆ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೇನೆ. ನಿಮ್ಮಿಬ್ಬರ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ನನಗೆ ಪಕ್ಷ ವಿರೋ ಹಣೆಪಟ್ಟಿ ಕಟ್ಟಿದರೆ ಮೌನ ವಹಿಸಬೇಕೇ? ಎಂದು ಮರುಪ್ರಶ್ನಿಸಿದರು.

ಅಂತಿಮವಾಗಿ ಮಧ್ಯಪ್ರವೇಶ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇಲ್ಲಿ ಕೇವಲ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ನಾವು ಯಾರೊಬ್ಬರೂ ಅಭ್ಯರ್ಥಿಗಳ ಆಯ್ಕೆ ನಡೆಸುವುದಿಲ್ಲ. ಏನಿದ್ದರೂ ಪಕ್ಷದ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸುತ್ತದೆ. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆಂದು ಸೂಚಿಸಿದರು.

RELATED ARTICLES

Latest News