ಬೆಂಗಳೂರು,ಏ.4 – ಕರ್ನಾಟಕ ಭೋವಿ ನಿಗಮ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಇಂದು ರಾಜ್ಯದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ 10ಕ್ಕೂ ಹೆಚ್ಚು ಕಡೆ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ, ನಿರ್ದೇಶಕರ ಕಚೇರಿ, ನಿವಾಸ ಮತ್ತಿತರ ಕಡೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಈ ಹಿಂದೆ ಹೈಕೋರ್ಟ್ ಎಸ್‌ಐಟಿ ಮೂಲಕ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಸಿಐಡಿ ಮೂಲಕವೂ ತನಿಖೆ ನಡೆಸಿ ಈ ಹಿಂದೆ ನಿಗಮದಲ್ಲಿ ಕೆಲಸ ಮಾಡಿದ್ದ ಕೆಲವು ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ.ನಾಗರಾಜಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿಯವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳಲ್ಲಿ ಇಡಿ ತಂಡ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕಿದ್ದು, ಬ್ಯಾಂಕ್ ಖಾತೆಗಳ ವಿವರ, ಚರ-ಚಿರ ಆಸ್ತಿಗಳು, ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿಪಾಸ್ತಿ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಬೆಂಗಳೂರಿನ ವಿಜಯನಗರದಲ್ಲಿರುವ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿಯವರ ಜಾಲಹಳ್ಳಿ ನಿವಾಸದ ಮೇಲೂ ಇ.ಡಿ ದಾಳಿ ಮಾಡಿದೆ. ಈ ಹಿಂದೆ ಈ ಇಬ್ಬರು ಸಿಐಡಿ ದಾಳಿ ನಡೆದ ವೇಳೆ ತಲೆಮರೆಸಿಕೊಂಡಿದ್ದರು. ಶಿವಮೊಗ್ಗದಲ್ಲೂ ಇ.ಡಿ. ದಾಳಿ ನಡೆಸಿದೆ. ನಿಗಮದ ಕಚೇರಿಯಲ್ಲಿ 2021ರ ಏ.5ರಿಂದ 2022ರ ಜು.8ರವರೆಗೆ ಭೋವಿ ನಿಗಮದ ಕಚೇರಿಯ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಈ ಹಿಂದೆಯೂ ಎಸ್‌ಐಟಿ ಇವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ನಿಗಮದಲ್ಲಿ ನಡೆದಿದ್ದ ಅಕ್ರಮಗಳನ್ನು ಮರೆಮಾಚಲು ಲೆಕ್ಕಪತ್ರಗಳು, ನಗದು, ನೋಂದಣಿ ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿರುವ ಆರೋಪ ಸುಬ್ಬಪ್ಪ ಅವರ ಮೇಲಿದೆ. ವಿಶ್ವೇಶ್ವರಯ್ಯ ಟವರ್ ಬಳಿಯಿರುವ ನಿಗಮದ ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡ, ಕಂಪ್ಯೂಟರ್, ಕೆಲವು ಕಡತಗಳನ್ನು ಜಪ್ತಿ ಮಾಡಿದೆ.
ಅಲ್ಲದೇ, ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿ, ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು.
ಏನಿದು ಹಗರಣ?:
2021-22ನೇ ಸಾಲಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವಾಗ ಅಕ್ರಮ ನಡೆದಿದ್ದು, ಲಕ್ಷಾಂತರ ರೂ. ಸಾಲಕೊಡಿಸುವುದಾಗಿ ಸಾರ್ವಜನಿಕ ದಾಖಲೆ ದುರ್ಬಳಕೆ ಜೊತೆಗೆ 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿತ್ತು. ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಮನೆಯಲ್ಲಿ ಉದ್ಯಮಿ ಜೀವಾ ಹಾಗೂ ಆಕೆಯ ಸಹೋದರಿ ಸಂಗೀತಾ ಬಾಡಿಗೆಗೆ ಇದ್ದರು. ಇದೇ ಮನೆಯನ್ನೇ ತಮ್ಮ ಸಹೋದರಿ ಸಂಗೀತಾ ಬಡೆತನದ ಹರ್ನಿತಾ ಕ್ರಿಯೇಷನ್ಸ್ ಕಂಪನಿಯ ಕಚೇರಿ ಎಂದು ಹೇಳಿಕೊಂಡು ಜೀವಾ ಹಣ ವರ್ಗಾವಣೆ ಮಾಡಿಕೊಂಡಿದ್ದರು.
ಭೋವಿ ನಿಗಮದಲ್ಲಿ ನಡೆದಿದ್ದ ಹಗರಣ ಸಂಬಂಧ ಜೀವಾ ಅವರೂ ವಿಚಾರಣೆ ಎದುರಿಸಿದ್ದರು. ವಿಚಾರಣೆ ವೇಳೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದರು ಎಂದು ಆರೋಪಿಸಿ, ಮರಣ ಪತ್ರ ಬರೆದಿಟ್ಟು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೀವಾ ಆತ್ಮಹತ್ಯೆಯ ಕುರಿತು ಅವರ ಸಹೋದರಿ ಸಂಗೀತಾ ನೀಡಿದ್ದ ದೂರಿನ ಅನ್ವಯ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಲಾಗಿತ್ತು.
ಯಾವ ಕಂಪನಿಗೆ ಎಷ್ಟು?:
ಜೀವಾ ಅವರಿಗೆ ಸೇರಿದ್ದು ಎನ್ನಲಾದ ಅನ್ನಿಕಾ ಎಂಟರ್ ಪ್ರೈಸಸ್‌ಗೆ 7.16 ಕೋಟಿ, ಅವರ ಸಹೋದರಿ ಹೆಸರಿನಲ್ಲಿ ಇರುವ ಹರ್ನಿತಾ ಕ್ರಿಯೇಷನ್ಸ್‌ಗೆ 3.79 ಕೋಟಿ ಸೇರಿದಂತೆ 10.9 ಕೋಟಿ ರೂ. ವರ್ಗಾವಣೆಯಾಗಿದೆ.ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ಅವರ ಸಹೋದರಿ ಮಂಗಳಾ ರಾಮು ಅವರಿಗೆ ಹಂತ ಹಂತವಾಗಿ 1.48 ಕೋಟಿ ಕೊಡಲಾಗಿತ್ತು.
ಇನ್ನೂ ಮೂರು ಕಂಪನಿಗಳು ಬಿ.ಕೆ.ನಾಗರಾಜಪ್ಪ ಅವರ ಆಪ್ತರ ಪಾಲುದಾರಿಕೆಯಲ್ಲಿ ಇವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.ಬಿ.ಕೆ.ನಾಗರಾಜಪ್ಪ ಅವರ ಆಪ್ತ ಸಹಾಯಕಿ ಯಶಸ್ವಿನಿ ಹೆಸರಿನಲ್ಲಿ ನ್ಯೂ ಕ್ರೀಮ್, ಆಕೆಯ ಸಹೋದರ ಕಾರ್ತಿಕ್ ಗೌಡ ಹೆಸರಿನಲ್ಲಿ ಆದಿತ್ಯಾ ಕಂಪನಿ, ಮನೆ ಬಾಡಿಗೆದಾರರಾದ ಜೀವಾ ಹೆಸರಿನಲ್ಲಿ ಅನ್ನಿಕಾ ಎಂಟರ್ ಪ್ರೈಸಸ್, ಆಕೆಯ ಸಹೋದರಿ ಸಂಗೀತಾ ಹೆಸರಿನಲ್ಲಿ ಹರ್ನಿತಾ ಕ್ರಿಯೇಷನ್ಸ್ ಹಾಗೂ ಆಪ್ತ ಸಿ.ಸಂತೋಷ್ ಹೆಸರಿನಲ್ಲಿ ಸೋಮೇಶ್ವರ ಎಂಟರ್ ಪ್ರೈಸಸ್ ಎಂಬ ಕಂಪನಿಗಳನ್ನು ಸ್ಥಾಪಿಸಲಾಗಿತ್ತು.
ಈ ರೀತಿ ಬೇರೆಯವರ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ನಾಗರಾಜಪ್ಪ ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.ಸಾಲ ಮಂಜೂರಾತಿ ಹೆಸರಿನಲ್ಲಿ ಹಣ ಲಪಟಾಯಿಸಲು ಮಧ್ಯವರ್ತಿಗಳ ನೆರವಿನಲ್ಲಿ ಅಧಿಕಾರಿಗಳೇ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿದ್ದರು. ಸಾಲ ಮಂಜೂರಾತಿಗೂ ಮುನ್ನವೇ ಫಲಾನುಭವಿಗಳಿಂದ ಸಹಿ ಮಾಡಿದ ಖಾಲಿ ಚೆಕ್ ಹಾಗೂ ಪತ್ರಗಳಿಗೆ ಸಹಿ ಪಡೆಯುತ್ತಿದ್ದರು. ಫಲಾನುಭವಿಗೆ 50 ಸಾವಿರ ಸಿಕ್ಕಿದರೆ, ಉಳಿದ 4 ಲಕ್ಷದಿಂದ 5 ಲಕ್ಷವನ್ನು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.