Wednesday, December 4, 2024
Homeಬೆಂಗಳೂರುವೀಲ್ಹಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ವೀಲ್ಹಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಬೆಂಗಳೂರು,ಫೆ.28- ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸಿ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಒಟ್ಟು 11 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಪಶ್ಚಿಮ ವಿಭಾಗ:
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿಗೆ ತೊಂದರೆಯುಂಟಾಗುವಂತೆ ವಾಹನಗಳನ್ನು ಚಲಾಯಿಸಿ ವ್ಹೀಲಿಂಗ್ ಮಾಡುತ್ತಿದ್ದ 5 ಮಂದಿ ಯುವಕರನ್ನು ವಾಹನಗಳ ಸಮೇತ ವಶಕ್ಕೆ ಪಡೆಯಲಾಗಿದೆ.

ಈ ಐದು ಮಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆಎಂದು ಪಶ್ಚಿಮ ಸಂಚಾರ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಅನಿತಾ ಬಿ ಹದ್ದಣ್ಣವರ್ ತಿಳಿಸಿದ್ದಾರೆ. ಮುಂದೆ ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗದಂತೆ, ಸಾಮಾಜಿಕ ಶಾಂತಿ ಭಂಗ ತಂದ ಕಾರಣದಿಂದಾಗಿ ವ್ಹೀಲಿಂಗ್ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಭದ್ರತಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗಿದೆ.

ನಗರದ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರು, ಇನ್ಸ್‍ಫೆಕ್ಟರ್‍ಗಳ ನೇತೃತ್ವದಲ್ಲಿ ಠಾಣಾವಾರು ತಂಡವನ್ನು ರಚಿಸಲಾಗಿದೆ. ಈ ರೀತಿ ಸಾಮಾಜಿಕ ಶಾಂತಿಯ ಭಂಗಕ್ಕೆ ಕಾರಣರಾಗುವವರ ವಿರುದ್ಧ ಕಾನೂನು ಅಡಿಯಲ್ಲಿ ಮುಂದಿನ ದಿನಗಳಲ್ಲಿಯೂ ಸಹ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ಪೂರ್ವ ವಿಭಾಗ:
ಕೆಆರ್‍ಪುರ, ಪುಲಿಕೇಶಿನಗರ ಮತ್ತು ಶಿವಾಜಿನಗರ ಸಂಚಾರಿ ಠಾಣೆ ಪೊಲೀಸರು ವೀಲ್ಹಿಂಗ್ ಮಾಡುವವರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆ ಕೈಗೊಂಡು ಆರು ಪ್ರತ್ಯೇಕ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಭಟ್ಟರಹಳ್ಳಿ ಮುಖ್ಯರಸ್ತೆ, ಹೇನ್ಸ್ ರಸ್ತೆ, ಹಾಲ್ ರಸ್ತೆ ಮತ್ತು ಕಬ್ಬನ್‍ರಸ್ತೆಯಲ್ಲಿ ಠಾಣಾ ಸಿಬ್ಬಂದಿ ಗಸ್ತಿನಲ್ಲಿರುವಾಗ ವಿಲ್ಹೀಂಗ್ ಮಾಡುತ್ತಿದ್ದ ಆರು ದ್ವಿಚಕ್ರ ವಾಹನ ಸವಾರರನ್ನು ಪತ್ತೆಹಚ್ಚಿ ಆರು ದ್ವಿಚಕ್ರ ವಾಹನಗಳ ಸಮೇತ ಜಪ್ತಿ ಮಾಡಿದ್ದಾರೆ.

ಈ ಆರು ಮಂದಿ ದ್ವಿಚಕ್ರ ವಾಹನ ಸವಾರರು ವಯಸ್ಕರಾಗಿದ್ದು, ಈ ಸವಾರರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್.ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News