ಬೆಂಗಳೂರು,ಫೆ.11- ಇಲ್ಲಿನ ಯಲಹಂಕ ವಾಯು ನೆಲೆಯಲ್ಲಿ ನಡೆಯು ತ್ತಿರುವ ಏರೋ ಇಂಡಿಯಾ 2025 ರ 2ನೇ ದಿನವಾದ ಇಂದು ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಅವರು ವಿವಿಧ ದೇಶಗಳ ಅಧಿಕಾರಿಗಳೊಂದಿಗೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಮೊದಲಿಗೆ ಇಂದು ಬೆಳಿಗ್ಗೆ ಇಟಲಿಯ ರಕ್ಷಣಾ ಖಾತೆಯ ಅಧೀನ ಕಾರ್ಯದರ್ಶಿ ಮ್ಯಾಟಿಯೊ ಪೆರೆಗೊ ಡಿ ಕ್ರೆಮ್ನಾಗೊ ಅವರೊಂದಿಗಿನ ಸಭೆಯಲ್ಲಿ ಇಬ್ಬರೂ ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿವಿಧ ಅಂಶಗಳನ್ನು ಪರಿಶೀಲಿಸಿದರು. ಉಪಕರಣಗಳ ತಯಾರಿಕೆ ಮತ್ತು ಸ್ವದೇಶಿ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯಗಳ ಕುರಿತು ಅವರು ಚರ್ಚಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸುವ ತಮ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ನಂತರ ಹೌಸ್ ಆಫ್ ಲಾರ್ಡ್ಸ್ ಬ್ರಿಟನ್ನ ಸಚಿವ ಲಾರ್ಡ್ ವೆರ್ನಾನ್ ಕೋಕರ್ ಅವರನ್ನು ಸಚಿವ ಸಂಜಯ್ ಸೇಠ್ ಭೇಟಿಯಾದರು. ಇಬ್ಬರೂ ಸಚಿವರು ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಪರಿಶೀಲಿಸಿದರು ಮತ್ತು ಸಂಬಂಧಗಳನ್ನು ಬಲಪಡಿಸುವ ವಾಗ್ದಾನ ಮಾಡಿದರು.
ಶಾಂತಿ, ಸಮೃದ್ಧಿ ಮತ್ತು ನಿಯಮಾಧಾರಿತ ವಿಶ್ವ ಕ್ರಮಕ್ಕಾಗಿ ದ್ವಿಪಕ್ಷೀಯವಾಗಿ ಮತ್ತು ಇತರ ಪಾಲುದಾರರೊಂದಿಗೆ ಕೆಲಸ ಮಾಡುವ ತಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ನಿರ್ದಿಷ್ಟವಾಗಿ ಇಂಡೋ-ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪರಸ್ಪರ ಸಹಕಾರವು ಸಮುದ್ರ ಮತ್ತು ಇತರ ಕಡೆಗಳಲ್ಲಿ ಸಂಚರಣೆ ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮಗಳ ಬಗ್ಗೆ ಚರ್ಚಿಸಲಾಯಿತು.
ಲೆಸೊಥೊ ಸಾಮ್ರಾಜ್ಯ ಪ್ರಧಾನ ಮಂತ್ರಿ ಕಚೇರಿ (ರಕ್ಷಣೆ ಮತ್ತು ಭದ್ರತೆ) ಪ್ರತಿನಿಧಿ ಲಿಂಫೊ ಟೌ ಅವರನ್ನು ಭೇಟಿಯಾಗಿ ರಕ್ಷಣಾ ರಫ್ತು ಕ್ಷೇತ್ರದಲ್ಲಿ ಲಭ್ಯವಿರುವ ಅಪಾರ ಸಾಮರ್ಥ್ಯ ಮತ್ತು ಸಹಕಾರವನ್ನು ವಿಸ್ತರಿಸುವ ಮಾರ್ಗಗಳ ಕುರಿತು ಇಬ್ಬರು ನಾಯಕರೂ ಚರ್ಚಿಸಿದರು.