ಬೆಂಗಳೂರು, ಜ.27- ಮುಂಬರುವ ಲೋಕಸಭೆ ಚುನಾವಣೆ ಸಜ್ಜಾಗುತ್ತಿರುವ ಬಿಜೆಪಿ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ಮತ್ತು ಸುಧಾಕರ್ ರೆಡ್ಡಿ ಅವರನ್ನು ಕರ್ನಾಟಕದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಬಿಜೆಪಿ ಹೈಕಮಾಂಡ್ ಶನಿವಾರ ಆದೇಶ ಹೊರಡಿಸಿದೆ. ಬೈಜಯಂತ್ ಪಾಂಡಾ ಉತ್ತರ ಪ್ರದೇಶದ ನೂತನ ಉಸ್ತುವಾರಿಯಾಗಲಿದ್ದಾರೆ. ಬಿಹಾರದ ಚುನಾವಣಾ ಉಸ್ತುವಾರಿಯಾಗಿ ವಿನೋದ್ ತಾವ್ಡೆ ನೇಮಕ ಅವರನ್ನು ನೇಮಕ ಮಾಡಲಾಗಿದೆ.
ಒಟ್ಟು 23 ಮಂದಿಯನ್ನು ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ದಕ್ಷಿಣ ರಾಜ್ಯ ಕೇರಳದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ಗೆ ವೈ ಸತ್ಯ ಕುಮಾರ್, ಅರುಣಾಚಲ ಪ್ರದೇಶಕ್ಕೆ ಅಶೋಕ್ ಸಿಂಘಾಲ್, ಚಂಡೀಗಢಕ್ಕೆ ವಿಜಯಭಾಯಿ ರೂಪಾನಿ, ಗೋವಾಕ್ಕೆ ಆಶಿಶ್ ಸೂದ್, ಜಾರ್ಖಂಡ್ಗೆ ಲಕ್ಷ್ಮೀಕಾಂತ ಬಾಜಪೇಯಿ, ಲಡಾಖ್ಗೆ ತರುಣ್ ಚುಗ್, ಲಕ್ಷ್ಯದ್ವೀಪಕ್ಕೆ ಅರವಿಂದ್ ಮೆನನ್, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನಾ, ಸಿಕ್ಕಿಂಗೆ ದಿಲೀಪ್ ಜೈಸ್ವಾಲ್, ಉತ್ತರಾಖಂಡಕ್ಕೆ ದುಶ್ಯಂತ್ ಕುಮಾರ್ ಗೌತಮ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಗೂಂಡಾ ಕಾಯ್ದೆ ಮಾದರಿಯಲ್ಲೇ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಕ್ರಮ
ಬಿಹಾರಕ್ಕೆ ವಿನೋದ್ ತಾವ್ಡೆ, ಹರಿಯಾಣಕ್ಕೆ ಬಿಪ್ಲಬ್ ಕುಮಾರ್ ದೇವ್, ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ, ಮಧ್ಯಪ್ರದೇಶಕ್ಕೆ ಮಹೇಂದ್ರ ಕುಮಾರ್ ಸಿಂಗ್, ಒಡಿಶಾಕ್ಕೆ ವಿಜಯಪಾಲ್ ಸಿಂಗ್ ತೋಮರ್, ತಮಿಳುನಾಡಿಗೆ ಅರವಿಂದ್ ಮೆನನ್, ಪಶ್ಚಿಮ ಬಂಗಾಳಕ್ಕೆ ಮಂಗಲ್ ಪಾಂಡೆ ಇವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಮತ್ತೊಂದೆಡೆ, ಲೋಕಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆ ಭರದಿಂದ ಸಾಗಿದೆ. ಪ್ರಣಾಳಿಕೆ ಸಿದ್ಧಪಡಿಸಲು ಸಲಹೆ ಸೂಚನೆ ನೀಡುವಂತೆ ಯುವ ಮತದಾರರನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆಹ್ವಾನಿಸಿದ್ದು, ನಮೋ ಅಪ್ಲಿಕೇಶನ್‌ನಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.