ಬೆಂಗಳೂರು,ಜೂ.2- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ , ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಬಿಜೆಪಿ ಮಣೆ ಹಾಕಿದೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಮಾಜಿ ಸಚಿವ ಸಿ.ಟಿ.ರವಿ, ಹಾಲಿ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್.ರವಿಕುಮಾರ್ ಹಾಗೂ ಮಾಜಿ ಶಾಸಕ, ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮುಳೆ ಅವರನ್ನು ಕಣಕ್ಕಿಳಿಸಿದೆ.
ಸಿ.ಟಿ.ರವಿ(ಒಕ್ಕಲಿಗ), ಎನ್.ರವಿಕುಮಾರ್(ಕೋಲಿ ಸಮಾಜ), ಎಂ.ಜಿ.ಮುಳೆ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಸಿ.ಟಿ.ರವಿ ಅವರನ್ನು ಅಚ್ಚರಿ ಎಂಬಂತೆ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಮಾಡಿರುವುದು ಹೊಸ ಬೆಳವಣಿಗೆಯಾಗಿದೆ.
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರಿಷತ್‌ಗೆ ಆಯ್ಕೆ ಮಾಡುವ ಸುಳಿವು ಕೊಟ್ಟಿದ್ದರು. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಹೋರಾಟ ನಡೆಸಬೇಕಾಗಿದ್ದ ಅವರು ಕೆಲವು ಕಾರಣಗಳಿಂದ ಪರಾಭವಗೊಂಡಿದ್ದಾರೆ. ಪಕ್ಷವು ಸದ್ಯದಲ್ಲೇ ಸೂಕ್ತವಾದ ಸ್ಥಾನಮಾನವನ್ನು ನೀಡಲಿದೆ ಎಂದು ಹೇಳಿದ್ದರು.
ಇದೀಗ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಎನ್.ರವಿಕುಮಾರ್ ಅವರಿಗೆ ಮತ್ತೊಮೆ ಅವಕಾಶ ನೀಡಲಾಗಿದೆ. ಪರಿಷತ್ ಚುನಾವಣೆಯಲ್ಲಿ ಈ ಬಾರಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವದ್ದಂತಿ ಕೇಳಿಬಂದಿತ್ತು. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ತ್ಯಾಗ ಮಾಡಿದ್ದ ಅವರಿಗೆ ಮೇಲನೆಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಅನ್ಯಾಯ ಸರಿಪಡಿಸಲಾಗುತ್ತದೆ ಎಂಬ ಮಾತು ಪಕ್ಷದ ಕಚೇರಿಯಲ್ಲಿ ಹಬ್ಬಿತ್ತು.
ಆದರೆ ಇದೀಗ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ಒಕ್ಕಲಿಗ ಸಮುದಾಯದ ಸಿ.ಟಿ.ರವಿ, ಹಿಂದುಳಿದ ವರ್ಗಗಳಿಂದ ಎನ್.ರವಿಕುಮಾರ್ ಮತ್ತು ಸಂಘ ಪರಿವಾರದ ಮುಳೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ವಿಧಾನಸಭೆಯಲ್ಲಿ 65 ಸದಸ್ಯರನ್ನು ಹೊಂದಿರುವ ಬಿಜೆಪಿ ವಿಧಾನಪರಿಷತ್‌ಗೆ ಮೂವರು ಅಭ್ಯರ್ಥಿಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದು. ಒಬ್ಬ ಸದಸ್ಯ ಗೆಲ್ಲಲು 19 ಮತಗಳ ಅಗತ್ಯ ಇರುವುದರಿಂದ ಬಿಜೆಪಿಗೆ ಮೂರು ಸ್ಥಾನಗಳು ದಕ್ಕಲಿವೆ. ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದು, ಇಂದು ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ.