ಬೆಂಗಳೂರು,ಅ.12- ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯ ತಂಡ ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ಶಾಸಕರುಗಳನ್ನು ಸಂಪರ್ಕ ಮಾಡುತ್ತಿದೆ ಎಂದು ಸ್ಪೋಟಕ ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನ್ಯ ಪಕ್ಷಗಳಿಂದ 42 ಮಂದಿ ಪ್ರಮುಖ ನಾಯಕರು ಪಕ್ಷ ಸೇರಲು ಅರ್ಜಿ ಹಾಕಿದ್ದಾರೆ ಎಂದು ಬಹಿರಂಗಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿಯಿಂದ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು 2024 ಕ್ಕೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಹೇಳುತ್ತಿದ್ದಾರೆ. ನಾನು ಅದರ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದರು.
ಬಿಜೆಪಿಯ ಒಂದು ತಂಡ ಸಿನಿಮೀಯ ರೀತಿಯಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದೆ. ಯಾರನ್ನೆಲ್ಲಾ ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ತಮ್ಮ ಹತ್ತಿರ ಇದೆ. ಬಿಜೆಪಿ ತಂಡದವರು ನಡೆಸಿರುವ ಮಾತುಕತೆಯ ಇಂಚಿಂಚೂ ಮಾಹಿತಿಯನ್ನು ನಮ್ಮ ಶಾಸಕರು ತಮ್ಮ ಬಳಿ ಹಂಚಿಕೊಳ್ಳುತ್ತಿದ್ದಾರೆ.
ಸದ್ಯಕ್ಕೆ ಈ ಬಗ್ಗೆ ಚರ್ಚಿಸಲು ಹೋಗುವುದಿಲ್ಲ. ಯಾವ ಪ್ರಶ್ನೆಗಳಿಗೂ ತಾವು ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರ ಪತನಗೊಳಿಸಲು ಹುನ್ನಾರ ನಡೆದಿರುವುದನ್ನು ಡಿ.ಕೆ.ಶಿವಕುಮಾರ್ ಬಹಿರಂಗಪಡಿಸಿದರು.
ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರು
ತಮ್ಮ ಮಾತು ಮುಂದುವರೆಸಿದ ಅವರು, ಕಾಂಗ್ರೆಸ್‍ಗೆ ಸೇರ್ಪಡೆಯಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮಾಜಿ ಶಾಸಕರು ಸೇರಿದಂತೆ 42 ಕ್ಕೂ ಹೆಚ್ಚು ಮಂದಿ ಶಾಸಕರು ಅರ್ಜಿ ಹಾಕಿದ್ದಾರೆ. ಈವರೆಗೂ ತಾವು ಈ ಸಂಖ್ಯೆಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ಹೇಳಲೇಬೇಕಿದೆ ಎಂದರು.
ಅಮ್‍ಆದ್ಮಿ ಪಕ್ಷದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 100 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರುವುದಾಗಿ ತಮ್ಮನ್ನು ಸಂಪರ್ಕಿಸಿದ್ದಾರೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಈ ರೀತಿಯ ಸೇರ್ಪಡೆ ಕಾರ್ಯಕ್ರಮಗಳು ಹೆಚ್ಚಾಗಿವೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಸೇರ್ಪಡೆಯಾಗಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ಹೊಸದಾಗಿ ಪಕ್ಷ ಸೇರ್ಪಡೆಯಾಗುವವರನ್ನು ಜಿಲ್ಲಾ ಮಟ್ಟದಲ್ಲಿಯೇ ಸೇರಿಸಿಕೊಳ್ಳಲು ಚಿಂತನೆ ನಡೆಯಲಾಗಿದೆ. ಯಾವುದೇ ಷರತ್ತು ಇಲ್ಲದೇ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದರು. ಡಿ.ಕೆ.ಶಿವಕುಮಾರ್ ಅವರು ಮಾತನಾಡುತ್ತಿದ್ದ ವೇಳೆ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ರವಾನಿಸಲಾದ ಎಚ್ಚರಿಕೆಯ ಸಂದೇಶಗಳು ಏಕಕಾಲಕ್ಕೆ ಎಲ್ಲರ ಮೊಬೈಲ್‍ನಲ್ಲೂ ರಿಂಗಣಿಸಲಾರಂಭಿಸಿದವು. ಇದರಿಂದ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಡಿ.ಕೆ.ಶಿವಕುಮಾರ ಕೂಡ ಗುಯ್‍ಗುಯ್‍ಗುಡುವ ಸದ್ದನ್ನು ಕೇಳಿ ಕೆಲಕ್ಷಣ ಮಾತು ನಿಲ್ಲಿಸಿದರು.
ಹಮಾಸ್ ಸರ್ವನಾಶದ ಶಪಥ ಮಾಡಿದ ಇಸ್ರೇಲ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅದು ಟೆಸ್ಟ್ ಮೆಸೇಜ್ ಎಂದು ಮಾಹಿತಿ ನೀಡಿದರು. ಲಕ್ಷ್ಮಣ್ ಸವದಿ ಅವರು ಇದು ಪ್ರಾಯೋಗಿಕ ಸಂದೇಶ. ಯಾರೂ ಗಾಬರಿಯಾಗಬೇಡಿ ಎಂದು ವರದಿಯಾಗಿದೆ ಎಂದು ಹೇಳಿದರು.ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು ನಮಗೂ, ನಿಮಗೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡುತ್ತಿದೆ. ರಾಜ್ಯದಲ್ಲಿ ಜೆಡಿಎಸ್, ಬಿಜೆಪಿಯವರು ಎಚ್ಚರವಾಗಿದ್ದಾರೆ, ನಾವೂ ಎಚ್ಚರವಾಗಿರೋಣ ಎಂದು ಮಾರ್ಮಿಕವಾಗಿ ಹೇಳಿದರು.