ಬೆಂಗಳೂರು,ಜ.9- ರಾಜ್ಯದಲ್ಲಿ ಸಂಭವಿಸಿರುವ ಭೀಕರ ಬರ ನಿರ್ವಹಣೆಗೆ ರಾಜ್ಯಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಬರ ಪರಿಹಾರಕ್ಕೆ ರಾಜ್ಯಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಬಿಜೆಪಿ ಶಾಸಕರ ನಿಯೋಗ ಆಗ್ರಹಿಸಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಕೆ.ಗೋಪಾಲಯ್ಯ ಮುನಿರತ್ನ, ಶಾಸಕ ಮುನಿರಾಜು ಹಾಗೂ ರಘು ಅವರನ್ನೊಳಗೊಂಡ ನಿಯೋಗವು ರಾಜಭವನದಲ್ಲಿಂದು ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಈ ಮನವಿ ಮಾಡಿದೆ.
ತಾವು ಮಧ್ಯಪ್ರವೇಶಿಸಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಬಿಡುಗಡೆ ಮಾಡಲು ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದಾರೆ. ಹಿಂದಿನ ಸರ್ಕಾರದಲ್ಲಿ ಎಸ್‍ಡಿಆರ್‍ಎಫ್ ಅನುದಾನಕ್ಕಿಂತ 2 ಪಟ್ಟು ಪರಿಹಾರವನ್ನು ನೀಡಲಾಗಿತ್ತು. ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಹಣ ಬಿಡುಗಡೆಗೆ ಕಾಯದೆ ರಾಜ್ಯಸರ್ಕಾರದಿಂದ ರೈತರಿಗೆ ತುರ್ತಾಗಿ ಹಣ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಈಗಲೂ ಹಣ ಬಿಡುಗಡೆ ಮಾಡಬೇಕು.
ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್
ಚಳಿಗಾಲದ ಅಧಿವೇಶನಕ್ಕೂ ಮುನ್ನ ಪ್ರತಿ ರೈತರಿಗೆ 2 ಸಾವಿರ ರೂ. ಪರಿಹಾರ ನೀಡುವ ಘೋಷಣೆ ಮಾಡಿದ್ದ ರಾಜ್ಯಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ. ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲದ ಅಸಲು ತೀರಿಸಿದ ರೈತರ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಬದಲಿಗೆ ರೈತರು ಪಡೆದಿರುವ 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಅನುದಾನ ನೀಡಬೇಕು. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಮನವಿ ಪತ್ರದಲ್ಲಿ ನಿಯೋಗ ಒತ್ತಾಯಿಸಿದೆ.
ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್‍ಫೋರ್ಸ್‍ಗೆ ಪರಮಾಧಿಕಾರ ನೀಡಿ, ಪ್ರತಿ ತಾಲೂಕಿಗೆ ಕನಿಷ್ಠ 5 ಕೋಟಿ ರೂ. ಪರಿಹಾರ ನೀಡಬೇಕು. ಗರ್ಭಿಣಿಯರು, ಬಾಣಂತಿಯರು,ನವಜಾತ ಶಿಶುಗಳ ಪೌಷ್ಠಿಕತೆಗಾಗಿ ಉತ್ತಮ ಪೌಷ್ಠಿಕ ಆಹಾರವನ್ನು ಒದಗಿಸಬೇಕು. ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ಬರಗಾಲ ಸಂದರ್ಭದಲ್ಲಿ ಕುಟುಂಬದ ತಲಾ ಇಬ್ಬರಿಗೆ 30 ದಿನದವರೆಗೆ ಆರ್ಥಿಕ ನೆರವು ನೀಡಬೇಕು. ಇದರಿಂದ ಗುಳೆ ಹೋಗುವುದನ್ನು ತಪ್ಪಿಸಬಹುದು.
ಜಾನುವಾರುಗಳಿಗೆ ಬರುವ ಮಾರಣಾಂತಿಕ ಖಾಯಿಲೆಗಳಿಗೆ ಅಗತ್ಯವಿರುವ ಲಸಿಕೆ ನೀಡಬೇಕು ಹಾಗೂ ಮೇವು ಒದಗಿಸಬೇಕು. ಅಗತ್ಯವಿರುವ ಕಡೆಗಳಲ್ಲಿ 2022 ರಲ್ಲಿ ನೀಡಿದ ಮಾದರಿಯಲ್ಲೇ ಬರದಿಂದ ಬರಲಿರುವ ಕುಟುಂಬಗಳಿಗೆ ಆಹಾರ ಕಿಟ್ ನೀಡಬೇಕು. ಅತಿವೃಷ್ಠಿಯಾದ ಸಮಯದಲ್ಲಿ ಹಿಂದಿನ ಸರ್ಕಾರ ರಾಜ್ಯದ ಖಜಾನೆಯಿಂದಲೇ ನೇರವಾಗಿ ನೆರೆಯನ್ನು ನೀಡಿದ ಮಾದರಿಯಲ್ಲೇ ಬರ ಪರಿಹಾರಕ್ಕೆ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 324 ಕೋಟಿ ರೂ. ಹಣವಿದ್ದು, ಇದು ಬರಪೀಡಿತ 224 ತಾಲೂಕುಗಳ ನಿರ್ವಹಣೆಗೆ ಸಾಕಾಗುವುದಿಲ್ಲ. 48.15 ಲಕ್ಷ ಹೆಕ್ಟೇರ್‍ನಲ್ಲಿ ಬೆಳೆ ನಾಶವಾಗಿದ್ದು, ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಕಲ್ಬುರ್ಗಿ, ಬೀದರ್, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ಬರ ಅಧ್ಯಯನ ನಡೆಸಲಾಗಿದ್ದು, ರೈತರ ಪರಿಸ್ಥಿತಿ ಸಂಕಷ್ಟಮಯವಾಗಿದೆ ಎಂದು ಉಲ್ಲೇಖಿಸಲಾಗಿದೆ.