Monday, May 27, 2024
Homeರಾಜ್ಯಪ್ರಜ್ವಲ್ ಪೆನ್‌ಡ್ರೈವ್‌ ಹಂಚಿದ್ದು ಬಿಜೆಪಿಯವರೇ : ಶಾಸಕ ಗಣಿಗ ರವಿ

ಪ್ರಜ್ವಲ್ ಪೆನ್‌ಡ್ರೈವ್‌ ಹಂಚಿದ್ದು ಬಿಜೆಪಿಯವರೇ : ಶಾಸಕ ಗಣಿಗ ರವಿ

ಮಂಡ್ಯ,ಮೇ 14- ಹಾಸನದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಬಿಜೆಪಿಯವರೇ ಹಂಚಿಕೆದಾರರಾಗಿದ್ದು, ಮಾಜಿ ಶಾಸಕರು, ರಾಜ್ಯಮಟ್ಟದ ಪ್ರಭಾವಿ ನಾಯಕರ ಪಾತ್ರವು ಶೀಘ್ರವೇ ಹೊರಬರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌‍ ಶಾಸಕ ಗಣಿಗ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌‍ ಪಕ್ಷವನ್ನು ಮುಗಿಸಲು ಬಿಜೆಪಿಯವರೇ ಮಾಡಿದ ಹುನ್ನಾರ ಇದು ಎಂದು ಟೀಕಿಸಿದರು.

ಬಿಜೆಪಿಯವರಿಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಬೆಂಬಲ ಇಲ್ಲ. ಹೀಗಾಗಿ ಜನತಾದಳವನ್ನು ಪಕ್ಕದಲ್ಲೇ ಇಟ್ಟುಕೊಂಡು ಅವರನ್ನು ಮುಗಿಸಿ, ಆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಸಂಚು ನಡೆದಿದೆ. ಅದಕ್ಕಾಗಿ ಕಾಂಗ್ರೆಸ್‌‍ ಮೇಲೆ ಕೋಪ ಬರುವಂತೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯ ಈ ಮೊದಲು ಜನತಾದಳದ ಜೊತೆಗಿತ್ತು. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಮೇಲೆ ಒಟ್ಟಾರೆ ಲಿಂಗಾಯತ ಸಮುದಾಯವನ್ನು ಬಿಜೆಪಿ ಹೈಜಾಕ್‌ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌‍ ಹೇಳ ಹೆಸರಿಲ್ಲದಂತೆ ಮಾಡಲಾಗಿದೆ. ಈಗ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನು ಸೆಳೆದುಕೊಂಡು ಜೆಡಿಎಸ್‌‍ ಪಕ್ಷವನ್ನು ಮುಗಿಸಲು ಬಿಜೆಪಿ ಸಂಚು ರೂಪಿಸಿದೆೆ ಎಂದರು.

ಜೆಡಿಎಸ್‌‍-ಬಿಜೆಪಿಯ ಮೈತ್ರಿಗೂ ಮೊದಲು ಜೆಡಿಎಸ್‌‍ನವರು ಮಣ್ಣು, ನೇಗಿಲು, ತೆನೆ ಎನ್ನುತ್ತಿದ್ದರು. ಈಗ ಭಾರತ, ಪಾಕಿಸ್ತಾನ, ಆಘ್ಫಾನಿಸ್ತಾನ ಎಂದು ಮಾತನಾಡುತ್ತಿದ್ದಾರೆ. ಹೊಲ ಉಳುವುದು, ನೀರು ಹಾಯಿಸುವ ಬಗ್ಗೆ ಮಾತನಾಡುತ್ತಿದ್ದ ಜನತಾದಳದ ನಾಯಕರು, ಅಮೆರಿಕ ಎಂದು ವಿದೇಶದ ವಿಚಾರಗಳನ್ನು ಬಿಜೆಪಿಯವರ ರೀತಿಯಲ್ಲೇ ಚರ್ಚೆ ಮಾಡಲಾರಂಭಿಸಿದ್ದಾರೆ ಎಂದು ಹೇಳಿದರು.

ಪೆನ್‌ಡ್ರೈವ್‌ ಪ್ರಕರಣಕ್ಕೂ, ಕಾಂಗ್ರೆಸ್‌‍ಗೂ ಯಾವುದೇ ಸಂಬಂಧ ಇಲ್ಲ. ಸಹಜ ಕುತೂಹಲದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೇವರಾಜೇಗೌಡರ ಜೊತೆ ಮಾತನಾಡಿದ್ದಾರೆ. ಆತ ಅದನ್ನು ರೆಕಾರ್ಡ್‌ ಮಾಡಿಕೊಂಡು ತನಗೆ ಬೇಕಾದಷ್ಟು ಮಾತ್ರ ಬಹಿರಂಗಗೊಳಿಸಿದ್ದಾರೆ ಎಂದು ಕಿಡಿಕಾರಿದರು.

ಪೆನ್‌ಡ್ರೈವ್‌ನಲ್ಲಿನ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಮಾಡಿದವರು ಸಂಸದ ಪ್ರಜ್ವಲ್‌ ರೇವಣ್ಣ. ಅದರ ಹಂಚಿಕೆದಾರರು, ಪ್ರಿಂಟರ್‌ ಬಿಜೆಪಿಯವರು. ಈಗಾಗಲೇ ಬಿಜೆಪಿಯ ಮಾಜಿ ಶಾಸಕ ರ ಎಡಗೈ, ಬಲಗೈನಂತಿದ್ದ ಆಪ್ತರನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮುಖ್ಯ ಪಾತ್ರಧಾರಿಗಳು ಹೊರಬರುತ್ತಾರೆ ಎಂದು ಹೇಳಿದರು.

ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ. ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡು ಚಿತ್ರೀಕರಣ ಮಾಡಿಕೊಳ್ಳಲು ನಾವು ಹೇಳಿರಲಿಲ್ಲ. ಎಲ್ಲವೂ ಅವರೇ ಮಾಡಿಕೊಂಡ ತಪ್ಪುಗಳು. ನಾವು ಪ್ರಕರಣದ ತನಿಖೆಗೆ ಎಸ್‌‍ಐಟಿ ರಚನೆ ಮಾಡಿದ್ದೇವೆ. ಹಂಚಿಕೆದಾರರು, ಭಾಗಿದಾರರು ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸರ್ಕಾರ ಎಸ್‌‍ಐಟಿ ರಚನೆ ಮಾಡಿದೆ, ತನಿಖೆ ನಡಯುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದಂತೆ ತಪ್ಪು ಮಾಡಿದವರ ವಿರುದ್ಧ ಖಂಡಿತ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಾವು ದಾಖಲೆ ಇಲ್ಲದೆ ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ, ಹಿಟ್‌ ಅಂಡ್‌ ರನ್‌ ಪ್ರವೃತ್ತಿಯೂ ನಮದಲ್ಲ ಎಂದು ಗಣಿಗ ರವಿ ಹೇಳಿದರು.

RELATED ARTICLES

Latest News