Friday, May 17, 2024
Homeರಾಷ್ಟ್ರೀಯಬ್ರಿಜ್ ಭೂಷಣ್ ಸಿಂಗ್‍ ಕೈ ತಪ್ಪಿದ ಬಿಜೆಪಿ ಟಿಕೆಟ್

ಬ್ರಿಜ್ ಭೂಷಣ್ ಸಿಂಗ್‍ ಕೈ ತಪ್ಪಿದ ಬಿಜೆಪಿ ಟಿಕೆಟ್

ನವದೆಹಲಿ,ಮೇ2- ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದ್ದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಿಲುಕಿದ್ದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‍ಗೆ ಈ ಬಾರಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದೆ. ಟಿಕೆಟ್ ನೀಡಿದರೆ ವಿರೋಧ ಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಳ್ಳಬಹುದೆಂಬ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಬಿಜೆಪಿ ಬ್ರಿಜ್ ಭೂಷಣ್‍ಗೆ ಟಿಕೆಟ್ ನಿರಾಕರಿಸಿ ಬದಲಿಗೆ ಅವರ ಪುತ್ರನಿಗೆ ಟಿಕೆಟ್ ನೀಡುವ ಸಂಭವವಿದೆ ಎಂದು ತಿಳಿದುಬಂದಿದೆ.

ಈ ಬಾರಿ ನಿಮಗೆ ಕೆಲವು ಕಾರಣಗಳಿಂದ ಟಿಕೆಟ್ ನೀಡಲು ಸಾಧ್ಯವಿಲ್ಲ. ನೀವು ಒಪ್ಪಿದರೆ ನಿಮ್ಮ ಕ್ಷೇತ್ರಕ್ಕೆ ನಿಮ್ಮ ಪುತ್ರನನ್ನು ಕಣಕ್ಕಿಳಿಸುತ್ತೇವೆ ಎಂದು ಪಕ್ಷದ ವರಿಷ್ಠರು ಹೇಳಿರುವುದಾಗಿ ತಿಳಿದುಬಂದಿದೆ. ಉತ್ತರಪ್ರದೇಶದ ಕೈಸರ್‍ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಭಾರತೀಯ ಕುಸ್ತಿಪಟು ಸಂಘದ ಅಧ್ಯಕ್ಷರಾಗಿದ್ದರು. ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಸ್ತಿಪಟುಗಳು ತಿಂಗಳುಗಟ್ಟಲೇ ಹೋರಾಟ ನಡೆಸಿದ್ದರು. ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಲವು ಮಹಿಳಾ ಕುಸ್ತಿಪಟುಗಳು ಪದಕಗಳನ್ನು ಹಿಂತಿರುಗಿಸಿದ್ದರು.

ಈ ವಿವಾದದಿಂದ ಅಂತರ ಕಾಪಾಡಿಕೊಂಡಿದ್ದ ಬಿಜೆಪಿ ಬ್ರಿಜ್ ಭೂಷಣ್‍ಗೆ ಟಿಕೆಟ್ ನಿರಾಕರಿಸುವ ಮೂಲಕ ತಪ್ಪು ಮಾಡಿದರೆ ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದೆ.
ಕೈಸರ್‍ಗಂಜ್ ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ತನ್ನ ಅಭ್ಯರ್ಥಿಯ ಘೋಷಣೆ ಮಾಡುವ ನಿರೀಕ್ಷೆ ಇದೆ.

RELATED ARTICLES

Latest News