Sunday, October 13, 2024
Homeರಾಜಕೀಯ | Politicsನಾಲಿಗೆ ಹಾರಿಬಿಡುವ ಬಿಜೆಪಿ ಭಿನ್ನಮತೀಯರಿಗೆ ಹೈಕಮಾಂಡ್ ವಾರ್ನಿಂಗ್

ನಾಲಿಗೆ ಹಾರಿಬಿಡುವ ಬಿಜೆಪಿ ಭಿನ್ನಮತೀಯರಿಗೆ ಹೈಕಮಾಂಡ್ ವಾರ್ನಿಂಗ್

BJP Highcommand warn Rebel Leaders

ಬೆಂಗಳೂರು,ಸೆ.30- ಪಕ್ಷದಲ್ಲಿ ನಡೆಯುತ್ತಿರುವ ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದೆಹಲಿ ಬಿಜೆಪಿ ನಾಯಕರು ಭಿನ್ನಮತೀಯ ನಾಯಕರ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇನ್ನು ಮುಂದೆ ಪ್ರತ್ಯೇಕವಾಗಿ ಯಾವುದೇ ನಾಯಕರು ಸಭೆ ನಡೆಸುವುದು, ಇಲ್ಲವೇ ಪಕ್ಷದ ಅನುಮತಿ ಇಲ್ಲದೆ ಬಾಯಿಗೆ ಬಂದಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಅದನ್ನು ಅಶಿಸ್ತು ಎಂದು ಪರಿಗಣಿಸುವುದಾಗಿ ಎಚ್ಚರಿಕೆ ಕೊಟ್ಟಿದೆ.

ಇನ್ನು ಮುಂದೆ ಪಕ್ಷದ ಅಧಿಕೃತ ಆದೇಶವಿಲ್ಲದೆ ಯಾರೋಬ್ಬರು ಸಭೆ ನಡೆಸುವಂತಿಲ್ಲ. ಏನೇ ಇದ್ದರೂ ಪಕ್ಷದ ಚೌಕಟ್ಟಿನೊಳಗೆ ನಡೆಯಬೇಕು. ಸ್ವಪಕ್ಷೀಯರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಬಿಜೆಪಿಯ ಖಾಯಂ ಭಿನ್ನಮತೀಯ ಎಂದು ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕರಾದ ಬಿ.ಪಿ.ಹರೀಶ್‌, ರಮೇಶ್‌ ಜಾರಕಿಹೊಳಿ, ಮಾಜಿ ಸಚಿವರಾದ ಪ್ರತಾಪ್‌ ಸಿಂಹ, ಜಿ.ಎಂ.ಸಿದ್ದೇಶ್ವರ್‌, ಅಣ್ಣಾ ಸಾಹೇಬ್‌ ಜೊಲ್ಲೆ ಜೊತೆ ಸಭೆ ನಡೆಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವರಿಷ್ಠರು ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಮಗೆ ನೋವು ತಂದಿದೆ. ಸಂಘ ಪರಿವಾರದ ನಾಯಕರು ಮಧ್ಯಪ್ರವೇಶ ಮಾಡಿ ಸಭೆ ನಡೆಸಿದ ಮೇಲು ಈ ರೀತಿ ಪ್ರತ್ಯೇಕ ಸಭೆ ನಡೆಸುವುದು ಸರಿಯಲ್ಲ.ಪಕ್ಷದ ಚೌಕಟ್ಟಿನೊಳಗೆ ನಡೆಸಬೇಕಾದ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ನಡೆಸುತ್ತಿರುವ ಔಚಿತ್ಯವಾದರೂ ಏನು ರಾಷ್ಟ್ರೀಯ ನಾಯಕರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಯಾವುದೇ ರಾಜ್ಯದಲ್ಲೂ ಇರದ ಇಕ್ಕಟ್ಟು-ಬಿಕ್ಕಟ್ಟು ಕರ್ನಾಟಕದಲ್ಲಿದೆ. ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ಸಮಿತಿ ಇರುವಾಗ ಗುಂಪು ಕಟ್ಟಿಕೊಂಡು ಪ್ರತ್ಯೇಕ ಸಭೆ ನಡೆಸುವುದರಿಂದ ನೀವು ಏನನ್ನೂ ಸಾಧಿಸುತ್ತೀರಿ, ಸಂಘ ಪರಿವಾರದ ನಾಯಕರ ಜೊತೆ ಸಂಧಾನ ಸಭೆ ನಡೆಸಿದಾಗ ಕೊಟ್ಟ ಮಾತು ಮರೆತಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌‍ನಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಂಡಿವೆ. ಈ ಸಂದರ್ಭದಲ್ಲಿ ಒಗ್ಗಟ್ಟು ತೋರಿಸಬೇಕಾದವರು ಬಿಕ್ಕಟ್ಟನ್ನು ಸೃಷ್ಟಿಸುತ್ತಿದ್ದೀರಿ, ಪಕ್ಷದ ಬ್ಯಾನರ್‌ನಡಿ ಪಾದಯಾತ್ರೆ ಮಾಡಿ ಎಂದರೆ ನಾವು ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು, ಪಾದಯಾತ್ರೆ ಮಾಡುತ್ತೇವೆ ಎಂದರೆ ಅದಕ್ಕೆ ಅನುಮತಿ ನೀಡುವುದಾದರೂ ಹೇಗೆ ಎಂದು ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್‌‍ ಅಗರ್‌ವಾಲ್‌ ಅವರು ಯತ್ನಾಳ್‌ಗೆ ಪ್ರಶ್ನೆ ಮಾಡಿರುವುದಾಗಿ ತಿಳಿದುಬಂದಿದೆ.

RELATED ARTICLES

Latest News