Saturday, September 14, 2024
Homeರಾಜ್ಯಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ : ಸಚಿವ ರಾಜಣ್ಣ

ಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ : ಸಚಿವ ರಾಜಣ್ಣ

ತುಮಕೂರು,ಜ.4- ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬಂಧಿತ ಕರಸೇವಕನ ವಿರುದ್ಧ ಮಟ್ಕಾ, ದೊಂಬಿ, ನಕಲಿ ಮದ್ಯಮಾರಾಟ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಹಲವಾರು ವರ್ಷಗಳಿಂದಲೂ ಕಾಲಕಾಲಕ್ಕೆ ಪ್ರಕರಣಗಳು ದಾಖಲಾಗಿವೆ. ಸುದೀರ್ಘ ಕಾಲದಿಂದ ನೆನೆಗುದಿಯಲ್ಲಿದ್ದ ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇಂತಹ ಆರೋಪಿಯನ್ನು ರಕ್ಷಣೆ ಮಾಡಲು ಹಿಂದುತ್ವವವನ್ನು ಬಳಕೆ ಮಾಡುತ್ತಿರುವುದು ಶೋಭೆಯಲ್ಲ ಎಂದರು. ಬಿಜೆಪಿಯವರು ಕ್ಷುಲ್ಲಕ ವಿಚಾರವನ್ನು ರಾಷ್ಟ್ರದ ಸಮಸ್ಯೆ ಎಂಬಂತೆ ಚರ್ಚೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರನ್ನ ಶಿಕ್ಷಿಸಲು ಅಡ್ಡಿಪಡಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲಾಕ್‍ಮೇಲೆ ಮಾಡಿದ ಮಾಜಿ ಮಾಡೆಲ್ ಹತ್ಯೆ

ಹಿಂದುತ್ವ ಮತ್ತು ಶ್ರೀರಾಮನನ್ನ ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ಪದೆಪದೆ ರಾಜ್ಯಸರ್ಕಾರವನ್ನು ಹಿಂದುತ್ವದ ವಿರೋಧಿ ಎಂದು ಬಿಂಬಿಸುವುದು ಖಂಡನೀಯ. ರಾಜಕಾರಣಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಹಿಂದುತ್ವದ ದುರುಪಯೋಗವನ್ನು ಕಂಡು ಬೇಸರಗೊಂಡೇ ಅಂಬೇಡ್ಕರ್‍ರವರು ಬೌದ್ಧಧರ್ಮಕ್ಕೆ ಮತಾಂತರಗೊಂಡರು ಎಂದರು.

ಯಾವುದೋ ಒಂದು ಧರ್ಮದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಎಲ್ಲರ ಸಹಕಾರವೂ ಅಗತ್ಯ. ರಾಕೆಟ್ ತಂತ್ರಜ್ಞಾನ, ಟಿಪ್ಪು ಸುಲ್ತಾನರಿಂದ ಆರಂಭಗೊಂಡು ಇಂದು ಅಭಿವೃದ್ಧಿಗೊಂಡಿದೆ. ಅಬ್ದುಲ್ ಕಲಾಂರ ಕೊಡುಗೆಯನ್ನು ಮರೆಯಲು ಸಾಧ್ಯವೇ ಎಂದರು.

ಹಿಂದುತ್ವದಲ್ಲಿ ಗೋಡ್ಸೆ ಮತ್ತು ಮಹಾತ್ಮಗಾಂಧಿಯವರ ಭಿನ್ನ ಸಿದ್ಧಾಂತಗಳಿವೆ. ನಾವು ಮಹಾತ್ಮಗಾಂಧಿಯವರ ಹಿಂದುತ್ವವನ್ನು ಪಾಲನೆ ಮಾಡುತ್ತೇವೆ. ನಮ್ಮಲ್ಲೂ ರಾಮನ ದೇವಸ್ಥಾನಗಳಿವೆ. ಅದಕ್ಕೆ ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತೇವೆ. ಅಯೋಧ್ಯೆಗೆ ಹೋಗಿಯೇ ರಾಮನ ಪೂಜೆ ಮಾಡಬೇಕೆಂದೇನಿಲ್ಲ. ಅಲ್ಲಿ ಇನ್ನೂ ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ. ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯೂ ಆಗಿಲ್ಲ. ಆದರೆ ನಮ್ಮಲ್ಲಿ ಶತಮಾನಗಳಷ್ಟು ಹಳೆಯದಾದ ರಾಮನ ದೇವಸ್ಥಾನಗಳಿವೆ ಎಂದರು.

ಅಯೋದ್ಯೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುತ್ತಾರೆಂದಾಕ್ಷಣ ನಮ್ಮ ರಾಮನನ್ನು ಬಿಟ್ಟು ಹೋಗಲು ಸಾಧ್ಯವೇ. ರಾಮಜನ್ಮ ಭೂಮಿ ಅಯೋಧ್ಯೆ ಎಂಬ ಹಿನ್ನೆಲೆಯಿಂದ ದೇವಸ್ಥಾನ ಕಟ್ಟುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು. ಶ್ರೀರಾಮನನ್ನು ವಿಶ್ವಕ್ಕೆ ಪರಿಚಯಿಸಿದವರು ವಾಲ್ಮೀಕಿ. ಇಲ್ಲದೇ ಹೋದರೆ ರಾಮನೇ ತಿಳಿಯುತ್ತಿರಲಿಲ್ಲ. ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವೆಂದೇ ವಾಲ್ಮೀಕಿಯ ದೇವಸಸ್ಥಾನವನ್ನು ಕಟ್ಟಬೇಕು. ಇಲ್ಲವಾದರೆ ನಾವು ದೇಶಾದ್ಯಂತ ಹೋರಾಟ ನಡೆಸುತ್ತೇವೆ ಎಂದು ರಾಜಣ್ಣ ಹೇಳಿದರು.

ದೇವರು ಎಂಬುದು ನಮ್ಮ ನಂಬಿಕೆ. ಬೇಸಾಯ ಮಾಡುವಾಗ ಮಳೆ ಬಂದ ತಕ್ಷಣ ನಾವು ಹೊಲಕ್ಕೆ ಹೋಗಿ ಸಗಣಿ, ಬೆಣಚಿನಕಲ್ಲು, ಗರಿಕೆ ಬಳಸಿ ಶ್ರದ್ಧಾಪೂರ್ವಕವಾಗಿ ಪೂಜೆ ಮಾಡುತ್ತಿದ್ದೆವು. ಅದು ಹಿಂದೂ ಆಚರಣೆಯಲ್ಲವೆ ಎಂದು ಪ್ರಶ್ನಿಸಿದರು.

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರ ಬಂಧನ

ಕಾಂಗ್ರೆಸ್ ನಾಯಕ ಹರಿಪ್ರಸಾದ್‍ರವರು ಮುನ್ನೆಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ. ನಮ್ಮ ಸರ್ಕಾರ ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದರು.
ರಾಜ್ಯದಲ್ಲಿ 3 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಹೇಳಿಕೆಗೆ ತಾವು ಈಗಲೂ ಬದ್ಧ.

ಪಂಚರಾಜ್ಯಗಳ ಚುನಾವಣೆ ಬಳಿಕ ಬಿಜೆಪಿಯವರು 3 ರಾಜ್ಯಗಳಲ್ಲಿ ಪರಿಶಿಷ್ಟರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಉಪಮುಖ್ಯಮಂತ್ರಿಗಳನ್ನು ಮಾಡಬೇಕು. ಅಧಿಕಾರ ಮತ್ತು ಸಂಪತ್ತು ಕೆಲವರ ಬಳಿಯೇ ಉಳಿದುಕೊಂಡರೆ ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

RELATED ARTICLES

Latest News