ಬೆಂಗಳೂರು,ಮಾ.27- ಟಿಕೆಟ್ ಘೋಷಣೆಯಾದ ನಂತರ ಪಕ್ಷದ ವರಿಷ್ಠರ ವಿರುದ್ಧವೇ ತಿರುಗಿಬಿದ್ದಿದ್ದ ಅಸಮಾಧಾನಿತರ ಭಿನ್ನಮತ ಬಗೆಹರಿಯಲಿದೆ ಎಂದು ಹೇಳಲಾಗುತ್ತಿದೆಯಾದರೂ ಪರಿಸ್ಥಿತಿ ಮಾತ್ರ ಈಗಲೂ ಬೂದಿಮುಚ್ಚಿದ ಕೆಂಡದಂತಿದೆ.ದಾವಣಗೆರೆ, ಬೆಳಗಾವಿ, ಕೊಪ್ಪಳ, ಬೀದರ್, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಬಿಕ್ಕಟ್ಟು ಶಮನವಾಗಿದೆ ಎಂದು ಪಕ್ಷದ ಮುಖಂಡರು ಬಿಂಬಿಸುತ್ತಿದ್ದರೂ ಒಳಗಡೆ ಮಾತ್ರ ಒಳ ಹೊಡೆತದ ಭೀತಿ ಧಿಕೃತ ಅಭ್ಯರ್ಥಿಗಳಿಗೆ ಎದುರಾಗಿದೆ.
ಯಾವುದೇ ಕ್ಷಣದಲ್ಲೂ ಭಿನ್ನಮತ ಆಸ್ಪೋಟಗೊಳ್ಳುವ ಸಾಧ್ಯತೆಯಿದ್ದು, ಮತದಾನಕ್ಕೂ ಮುನ್ನವೇ ಬಿಜೆಪಿಗೆ ದುಬಾರಿಯಾದರೂ ಅಚ್ಚರಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲಾ ಘಟಕದ ತೀರ್ಮಾನದ ವಿರುದ್ಧವೇ ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ್ಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಮಧ್ಯಪ್ರವೇಶಿಸಿ ಅಸಮಧಾನಿತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಹಾವು-ಮುಂಗುಸಿಯಂತಿದ್ದ ಸಿದ್ದೇಶ್ವರ್ ಮತ್ತು ಎಸ್.ಎ.ರವೀಂದ್ರನಾಥ್ ಬಣ ಪರಸ್ಪರ ಕೈಜೋಡಿಸಿ ಮತಯಾಚನೆ ಮಾಡುತ್ತಾರೆ ಎಂಬುದು ಊಹೆಗೆ ನಿಲುಕದ ಪ್ರಶ್ನೆಯಾಗಿದೆ. ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ ಈಗಲೂ ಸಿದ್ದೇಶ್ವರ್ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬೆಳಗಾವಿಯಲ್ಲೂ ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಹಲವರು ಶೆಟ್ಟರ್ಗೆ ನಮ್ಮ ಬೆಂಬಲ ಇಲ್ಲ ಎಂದು ತೀರ್ಮಾನಕ್ಕೆ ಬಂದಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಆಕಾಂಕ್ಷಿಗಳಾದ ಮಹಾಂತೇಶ್ ಕವಟಗಿ ಮಠ, ರಮೇಶ್ ಕತ್ತಿ ಸೇರಿದಂತೆ ಅನೇಕರು ಮುನಿಸಿಕೊಂಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಬುಧವಾರ ಜಿಲ್ಲೆಯ ಪ್ರಮುಖರ ಜೊತೆ ಸಭೆ ನಡೆಸಿ ಎಲ್ಲರೂ ಶೆಟ್ಟರ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು. ಸದ್ಯಕ್ಕೆ ಬಿಕ್ಕಟ್ಟು ಶಮನವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಶೆಟ್ಟರ್ಗೆ ಟಿಕೆಟ್ ನೀಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಉಡುಪಿ ಚಿಕ್ಕಮಗಳೂರಿನಲ್ಲೂ ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಮುಖಂಡರ ಮುನಿಸು ಮಾತ್ರ ಶಮನವಾಗುತ್ತಿಲ್ಲ. ಅದರಲ್ಲೂ ಮಾಜಿ ಸಚಿವ ಸಿ.ಟಿ.ರವಿ ಬೆಂಬಲಿಗರು ಈಗಲೂ ಪಕ್ಷದ ಪರವಾಗಿ ಕೆಲಸ ಮಾಡಲು ಒಪ್ಪುತ್ತಿಲ್ಲ. ತುಮಕೂರಿನಲ್ಲಿ ಟಿಕೆಟ್ ಸಿಗದೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕೋಪ ನಿಧಾನವಾಗಿ ತಣ್ಣಗಾಗಿದೆ.