Thursday, December 12, 2024
Homeರಾಜಕೀಯ | Politicsಮುಂಬರುವ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನುಮಾನ

ಮುಂಬರುವ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನುಮಾನ

BJP-JDS alliance

ಬೆಂಗಳೂರು, ನ.23- ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಎನ್ಡಿಎಗೆ ಭಾರಿ ಹಿನ್ನಡೆಯಾಗಿರುವುದು ಬರುವ ದಿನಗಳಲ್ಲಿ ಬಿಜೆಪಿ ಮೈತ್ರಿ ಕೂಟ ಮುಂದುವರೆಯಲಿದೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ಎದುರಾಗಿದೆ.

ಒಲ್ಲದ ಮನಸ್ಸಿನಿಂದಲೇ ಉಭಯ ಪಕ್ಷಗಳ ಮುಖಂಡರುಗಳು ಮೈತ್ರಿ ಮಾಡಿಕೊಂಡಿದ್ದು, ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಪ್ರಚಾರ ನಡೆಸಿದ್ದರು. ಮೇಲ್ನೋಟಕ್ಕೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆಂಬ ಸಂದೇಶವನ್ನು ಸಾರಲು ಉಭಯಪಕ್ಷಗಳ ನಾಯಕರು ಎಷ್ಟೇ ಪ್ರಯತ್ನ ನಡೆಸಿದರೂ ಮೈತ್ರಿ ಹೆಚ್ಚು ದಿನಗಳ ಕಾಲ ಮುಂದುವರೆಯವ ಸಾಧ್ಯತೆಗಳಿಲ್ಲ ಎನ್ನುತ್ತಿದೆ ಉಪಚುನಾವಣಾ ಫಲಿತಾಂಶ.

ಬಿಜೆಪಿಯ ಒಂದು ಬಣ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿತು. ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಒಂದು ಬಣ ಅವರಿಗೆ ಟಿಕೇಟ್ ಕೊಟ್ಟರೆ ಗೆಲುವು ಖಚಿತ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದರು.

ಆದರೆ ಜೆಡಿಎಸ್ ನಾಯಕರು ನಮ ಪಕ್ಷದ ಚಿಹ್ನೆಯಿಂದ ಯೋಗೇಶ್ವರ್ ಕಣಕ್ಕಿಳಿಯಲಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರಿಂದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೈಸೂರು ಭಾಗದಲ್ಲಿ ಪ್ರಭಾವಿ ಒಕ್ಕಲಿಗ ಸಮುದಾಯದ ನಾಯಕರಾಗಿದ್ದ ಯೋಗೇಶ್ವರ್ ಬಿಜೆಪಿಯಲ್ಲಿದ್ದರೆ ಸಂಘಟನೆಗೆ ಅನುಕೂಲವಾಗುತ್ತಿತ್ತೆಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿ ಬಂದಿದ್ದವು.
ಈಗ ಯೋಗೇಶ್ವರ್ ಪಕ್ಷ ಬಿಟ್ಟು ಹೋಗಿದ್ದರಿಂದಲೇ ಚನ್ನಪಟ್ಟಣದಲ್ಲಿ ಸೋಲು ಉಂಟಾಯಿತು.

ಒಬ್ಬ ಪ್ರಬಲ ನಾಯಕನನ್ನು ಕಳೆದುಕೊಂಡ ಮೇಲೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಏನಿದೆ ಎಂಬ ಪ್ರಶ್ನೆಯನ್ನು ಭಿನ್ನಮತೀಯ ನಾಯಕರು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು ಒಲ್ಲದ ಮನಸ್ಸಿನಿಂದಲೇ ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಎರಡು ಪ್ರಬಲ ಸಮುದಾಯಗಳಾದ ಲಿಂಗಾಯಿತ ಮತ್ತು ಒಕ್ಕಲಿಗ ಮತಗಳು ಕ್ರೂಢೀಕರಣವಾದರೆ ಸುಲಭವಾಗಿ ಅಧಿಕಾರ ಗದ್ದುಗೆ ಹಿಡಿಯಬಹುದೆಂಬ ಲೆಕ್ಕಾಚಾರದಲ್ಲಿ ಮೈತ್ರಿ ನಾಯಕರಿದ್ದರು.

ಆದರೆ ಉಪಚುನಾವಣೆ ಫಲಿತಾಂಶ ಎನ್ಡಿಎ ನಾಯಕರ ರಣತಂತ್ರವನ್ನೇ ಬುಡಮೇಲು ಮಾಡಿದೆ. ಒಕ್ಕಲಿಗರ ಪ್ರಾಭಲ್ಯವಿರುವ ಚನ್ನಪಟ್ಟಣ, ಲಿಂಗಾಯಿತರ ಪ್ರಾಭಲ್ಯವಿರುವ ಶಿಗ್ಗಾಂವಿ ಹಾಗೂ ಲಿಂಗಾಯಿತ ಮತ್ತು ಪರಿಶಿಷ್ಠ ಪಂಗಡದ ಮತಗಳು ನಿರ್ಣಯಕವಾಗಿದ್ದವು. ಇದೀಗ ಈ ಸಮುದಾಯದ ಮತಗಳು ಬಿಜೆಪಿ ಮತ್ತು ಜೆಡಿಎಸ್ನಿಂದ ದೂರವಾಗಿರುವುದು ಫಲಿತಾಂಶದಿಂದ ಸ್ಪಷ್ಟವಾಗುತ್ತದೆ.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ಕೂಗು ಪಕ್ಷದಲ್ಲಿ ಕೇಳಿ ಬರುತ್ತಿದೆ. ಹಳೆ ಮೈಸೂರು ಭಾಗದಲ್ಲಿ ನಾವು ಅವರಿಗೆ ಎಲ್ಲಾ ಸ್ಥಾನಗಳನ್ನು ಬಿಟ್ಟುಕೊಡುವುದಾದರೆ ಯಾವ ಕಾರಣಕ್ಕಾಗಿ ಕೈಜೋಡಿಸಬೇಕು ಎಂದು ಪಕ್ಷದ ನಿಷ್ಠಾವಂತರೇ ಪ್ರಶ್ನೆ ಮಾಡುತ್ತಿದ್ದಾರೆ.ಹೀಗಾಗಿ ಬರುವ ದಿನಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟ ಮುಂದುವರೆಯುತ್ತದೆಯೇ ಇಲ್ಲವೆ ವಿಚ್ಛೇದನ ಪಡೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

RELATED ARTICLES

Latest News