Sunday, September 8, 2024
Homeರಾಜಕೀಯ | Politicsಉಪ ಚುನಾವಣೆಯಲ್ಲೂ ಬಿಜೆಪಿ - ಜೆಡಿಎಸ್‌‍ ಮೈತ್ರಿ ಮುಂದುವರಿಕೆ

ಉಪ ಚುನಾವಣೆಯಲ್ಲೂ ಬಿಜೆಪಿ – ಜೆಡಿಎಸ್‌‍ ಮೈತ್ರಿ ಮುಂದುವರಿಕೆ

ಬೆಂಗಳೂರು, ಜೂ.20– ಲೋಕಸಭಾ ಚುನಾವಣೆಯಂತೆ ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಮೈತ್ರಿ ಮುಂದುವರೆಸಲಿವೆ. ಲೋಕಸಭಾ ಚುನಾವಣೆಯಲ್ಲಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ.ಕುಮಾರಸ್ವಾಮಿ(ಚನ್ನಪಟ್ಟಣ), ಬಸವರಾಜ ಬೊಮಾಯಿ(ಶಿಗ್ಗಾವಿ) ಹಾಗೂ ತುಕಾರಾಂ(ಸಂಡೂರು) ತಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌‍ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್‌‍ ವಿರುದ್ಧ ಜಂಟಿ ಹೋರಾಟ ನಡೆಸಲಿವೆ.

ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌‍ಗೆ ಬಿಟ್ಟುಕೊಡಲಿದ್ದು, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಮೂರು ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿ ವರದಿ ಪಡೆಯಲು ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಿದೆ.

ಸಮೀಕ್ಷಾ ವರದಿ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕು. ಲೋಕಸಭಾ ಚುನಾವಣೆಯಂತೆ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಲು ಉಭಯ ನಾಯಕರು ನಿರ್ಧರಿಸಿದ್ದಾರೆ.

ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ನಿನ್ನೆ ಭೇಟಿ ಮಾಡಿ ಉಪ ಚುನಾವಣೆ ಸಂಬಂಧ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಚನ್ನಪಟ್ಟಣ ನಮ ಪಕ್ಷಕ್ಕೆೆ ಬಿಟ್ಟುಕೊಡುವುದಾಗಿ ಹಾಗೂ ಉಳಿದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುವುದಾಗಿ ಶಾ ಹೇಳಿದ್ದಾರೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಆದರೆ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸುವ ಅಪೇಕ್ಷೆ ಹೊಂದಿದ್ದಾರೆ. ಅವರು ಬಿಜೆಪಿ ಬಿಟ್ಟು ಜೆಡಿಎಸ್‌‍ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಿದರೆ ಯಾವುದೇ ಬಿಕ್ಕಟ್ಟು ಮೈತ್ರಿಯಲ್ಲಿ ಉಂಟಾಗುವುದಿಲ್ಲ.

ಯೋಗೇಶ್ವರ್‌ ಬಿಜೆಪಿಯಿಂದ ಸ್ಪರ್ಧಿಸಲು ಜೆಡಿಎಸ್‌‍ ಒಪ್ಪದಿದ್ದರೆ ಮೈತ್ರಿಯಲ್ಲಿ ಬಿಕ್ಕಟ್ಟು ಉಂಟಾಗಲಿದೆ. ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್‌‍ ಮೂಲಗಳು ಹೇಳಿವೆ.

ಮೈತ್ರಿ ಅಭ್ಯರ್ಥಿಯಾಗಿ ಸ್ಥಳೀಯರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ನಡುವೆ ನಿನ್ನೆ ಕ್ಷೇತ್ರ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಜನರು ಅಪೇಕ್ಷೆ ಪಟ್ಟರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಹೀಗಾಗಿ ಪ್ರಬಲ ಹಾಗೂ ಸಮರ್ಥ ಅಭ್ಯರ್ಥಿಯನ್ನೇ ಎನ್‌ಡಿಎ ಮೈತ್ರಿಕೂಟ ಕಣಕ್ಕಿಳಿಸಬೇಕಿದೆ. ಮೂರು ಕ್ಷೇತ್ರಗಳಲ್ಲಿ ಮೂರು ರಾಜಕೀಯ ಪಕ್ಷಗಳ ತಲಾ ಒಬ್ಬರು ರಾಜೀನಾಮೆ ನೀಡಿದ್ದಾರೆ. ಮತ್ತೆ ಆಯಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಮರ್ಥ ಅಭ್ಯರ್ಥಿಯ ಹುಡುಕಾಟವನ್ನು ಆರಂಭಿಸಿವೆ. ಇದರಿಂದ ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌‍ ಮತ್ತು ಮಿತ್ರ ಪಕ್ಷಗಳ ನಡುವೆ ಪ್ರತಿಷ್ಠೆಯ ಹೋರಾಟ ನಡೆಯಲಿದೆ.

RELATED ARTICLES

Latest News