Sunday, November 24, 2024
Homeರಾಷ್ಟ್ರೀಯ | Nationalಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ಗೆಲುವಿಗೆ ಬಿಜೆಪಿ-ಜೆಡಿಎಸ್‌‍ ಸಹಕಾರವೂ ಇದೆ : ಡಿಕೆಶಿ

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ಗೆಲುವಿಗೆ ಬಿಜೆಪಿ-ಜೆಡಿಎಸ್‌‍ ಸಹಕಾರವೂ ಇದೆ : ಡಿಕೆಶಿ

BJP-JDS cooperation is also there for Congress' victory in Channapatna: DKSH

ಬೆಂಗಳೂರು,ನ.24- ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ಗೆಲುವಿಗೆ ಬಿಜೆಪಿಯ ಬೆಂಬಲವೂ ಕಾರಣ, ಜೆಡಿಎಸ್‌‍ನ ಸಹಕಾರವೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ಸೋಲು ಷಡ್ಯಂತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಸೋಲನ್ನು ಏನೆಂದು ಕರೆಯಬೇಕು. ದಳದಲ್ಲಿದ್ದ ಡಾ.ಸಿ.ಎನ್‌.ಮಂಜುನಾಥ್‌ರನ್ನು ಬಿಜೆಪಿಯಿಂದ ನಿಲ್ಲಿಸಿ ಗೆಲ್ಲಿಸಿದ್ದಾರಲ್ಲಾ? ಅದು ಷಡ್ಯಂತ್ರವಲ್ಲವೇ? ಎಂದು ತಿರುಗೇಟು ನೀಡಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿಯಾದ ದಿನದಿಂದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿ ಕ್ಷೇತ್ರಕ್ಕೆ ತೆರಳಿ, ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಿದ್ದೇನೆ. ಮನೆ ನಿವೇಶನದ ಕೊರತೆ, ಸಾಗುವಳಿ ಸಮಸ್ಯೆ, ನೀರಾವರಿ, ರಸ್ತೆ ಸೇರಿ ಹಲವು ಸಮಸ್ಯೆಗಳಿವೆ. ಅವುಗಳನ್ನೆಲ್ಲಾ ಮುಂದಿನ ದಿನಗಳಲ್ಲಿ ಬಗೆಹರಿಸಲಾಗುವುದು. ಬೆಳಗಾವಿ ಅಧಿವೇಶನಕ್ಕೂ ಮುನ್ನ ನಾನು ಮತ್ತು ಗೆಲುವು ಸಾಧಿಸಿರುವ ಸಿ.ಪಿ.ಯೋಗೇಶ್ವರ್‌ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಗಳಿಸಿದ್ದು 16,000 ಮತಗಳು ಮಾತ್ರ. ಉಪ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ನಮಗೆ ಸಹಕಾರ ನೀಡಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅವರ ಬೆಂಬಲ ಬಹಳ ಮುಖ್ಯವಾಗಿತ್ತು. ಜೆಡಿಎಸ್‌‍ನವರು ಕೂಡ ನಮಗೆ ಸಹಾಯ ಮಾಡಿದ್ದರು. ಹೀಗಾಗಿಯೇ ಕಾಂಗ್ರೆಸ್‌‍ನ ಮತಗಳಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.

ಚುನಾವಣಾ ಗೆಲುವಿನ ಕೀರ್ತಿ ಅಪೂರ್ವ ಸಹೋದರರದಲ್ಲ. ನಮ ನಾಯಕರ ಮೇಲೆ ವಿಶ್ವಾಸವಿಟ್ಟು ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವನ್ನು ಗೆಲ್ಲಿಸಬೇಕು. ಯೋಗೇಶ್ವರ್‌ ಅಭಿವೃದ್ಧಿ ಮಾಡಲಿ ಎಂದು ಮತ ನೀಡಿದವರಿಗೆ ಈ ಕೀರ್ತಿ ಸಲ್ಲಬೇಕು ಎಂದರು.

ಜಿಲ್ಲೆಯನ್ನು ಜೆಡಿಎಸ್‌‍ ಮುಕ್ತ ಮಾಡುವುದು ನಮ ಗುರಿಯಲ್ಲ. ಆ ಪಕ್ಷ ಈ ಹಿಂದೆ 19 ಶಾಸಕರನ್ನು ಹೊಂದಿತ್ತು. ಈಗ 18ಕ್ಕಿಳಿದಿದೆ ಎಂದು ಹೇಳಿದರು.ಉಪಚುನಾವಣೆ ಫಲಿತಾಂಶದ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂಬ ಬೇಡಿಕೆ ಗೌಣ. ಕೆಲವರಿಗೆ ಆಸೆ ಸಹಜ. ಈಗ ನಮಗೆ ಅದು ಮುಖ್ಯವಲ್ಲ. ಜನ ನಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವುದು ನಮ ಉದ್ದೇಶ. ಇದರ ಹೊರತಾಗಿ ಮುಖ್ಯಮಂತ್ರಿಯಾಗಬೇಕು ಅಥವಾ ಮತ್ತೇನೋ ಎಂಬ ಚರ್ಚೆಗಳಿಲ್ಲ ಎಂದರು.

ಉಪ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರ್‌ರಚನೆಯಾಗುತ್ತದೆೆ ಎಂಬುದು ಆಧಾರರಹಿತ. ನನ್ನ ಮಟ್ಟಿಗೆ ಆ ರೀತಿ ಯಾವುದೇ ಬೆಳವಣಿಗೆ ಇಲ್ಲ. ಹೆಚ್ಚಿನ ಮಾಹಿತಿಯನ್ನು ಮುಖ್ಯಮಂತ್ರಿಯವರ ಬಳಿ ಕೇಳಿ ಎಂದು ತಿಳಿಸಿದರು.

ಜೆಡಿಎಸ್‌‍ನ ಶಾಸಕ ಜಿ.ಟಿ.ದೇವೇಗೌಡ ಜನ ಬಯಸಿದರೆ ತಾವು ಕಾಂಗ್ರೆಸ್‌‍ ಸೇರುವುದಾಗಿ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಇದು ಒಬ್ಬರ ಅಭಿಪ್ರಾಯವಲ್ಲ. ಬಿಜೆಪಿಯ ಬಹಳಷ್ಟು ಮಂದಿ ಕಾಂಗ್ರೆಸ್‌‍ನತ್ತ ಒಲವು ಹೊಂದಿದ್ದಾರೆ. ಇಲ್ಲವಾದರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌‍ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದರು.

ಬಿಜೆಪಿಯ ರಾಜ್ಯಮಟ್ಟದ ನಾಯಕರು ಕಾಂಗ್ರೆಸ್‌‍ ಗೆಲುವಿಗೆ ಸಹಾಯ ಮಾಡಿದ್ದಾರೆ ಎಂಬ ವಿಚಾರವನ್ನು ಬಿಡಿಸಿ ಹೇಳಲು ಬಯಸುವುದಿಲ್ಲ. ಬಿಜೆಪಿಯ ಹಿರಿಯ ನಾಯಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನಿನ್ನೆ ನೀಡಿರುವ ಹೇಳಿಕೆಯನ್ನು ಗಮನಿಸಿ ಯೋಗೇಶ್ವರ್‌ ಗೆಲ್ಲುತ್ತಾರೆ ಎಂದು ನನಗೆ ಗೊತ್ತಿತ್ತು ಎಂದಿದ್ದಾರೆ. ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು. ಅವರ ಹೇಳಿಕೆ ಸುಮನೆ ಅಲ್ಲ ಎಂದರು.

ಬಿಜೆಪಿ ಸಹಕಾರದ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ತಟ್ಟಿ ಮರೆಯ ಏಟು ಅದನ್ನು ಹೇಗಾದರೂ ವಿಶ್ಲೇಷಣೆ ಮಾಡಿ ಎಂದರಲ್ಲದೆ, ಜೆಡಿಎಸ್‌‍ ನಾಯಕರು ತಮಗೆ ಬೆಂಬಲಿಸುವವರ ಪಟ್ಟಿ ಮಾಡಿಟ್ಟುಕೊಂಡಿದ್ದರು. ಅದೆಲ್ಲಾ ಏನಾಯಿತು ಎಂದು ತಿರುಗೇಟು ನೀಡಿದರು.

RELATED ARTICLES

Latest News