Friday, September 20, 2024
Homeರಾಜಕೀಯ | Politicsಬಿಜೆಪಿ-ಜೆಡಿಎಸ್‌‍ ಪಾದಯಾತ್ರೆ ಬೆನ್ನಲ್ಲೇ ಮೈಸೂರು ಭಾಗದ ಶಾಸಕರ ಜೊತೆ ಸಿಎಂ ಚರ್ಚೆ

ಬಿಜೆಪಿ-ಜೆಡಿಎಸ್‌‍ ಪಾದಯಾತ್ರೆ ಬೆನ್ನಲ್ಲೇ ಮೈಸೂರು ಭಾಗದ ಶಾಸಕರ ಜೊತೆ ಸಿಎಂ ಚರ್ಚೆ

ಬೆಂಗಳೂರು,ಆ.3– ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ತಮ್ಮ ನಿವಾಸದಲ್ಲಿಂದು ಚಾಮರಾಜನಗರ, ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ಕಾಂಗ್ರೆಸ್‌‍ ಮುಖಂಡರ ಜೊತೆ ಉಪಹಾರ ಕೂಟ ನಡೆಸಿ ಪ್ರಸಕ್ತ ರಾಜಕೀಯ ಬೆಳವಣಿಗೆಯ ಬಗ್ಗೆ ಸಮಾಲೋಚನೆ ನಡೆಸಿದರು.

ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್‌‍ ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಆಗಿರುವ ಸಿಎಂ ರಾಜಕೀಯವಾಗಿ ತಿರುಗೇಟು ನೀಡಲು ತಯಾರಿ ನಡೆಸಿದ್ದಾರೆ.

ನಗರದಲ್ಲಿ ಸಚಿವರ ಜೊತೆ ಉಪಹಾರ ಕೂಟ ನಡೆಸಿ ಸಮಾಲೋಚನೆ ನಡೆಸಿದರು. ಅದರ ಬೆನ್ನಲ್ಲೇ ಮೈಸೂರಿನಲ್ಲಿ ಮೂರು ಜಿಲ್ಲೆಗಳ ಮುಖಂಡರ ಜೊತೆ ಉಪಹಾರ ಕೂಟ ನಡೆಸುವ ಮೂಲಕ ಸಿದ್ದರಾಮಯ್ಯ ಪಾದಯಾತ್ರೆಗೆ ಪ್ರತಿಯಾಗಿ ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.

ಈಗಾಗಲೇ ಬಿಡದಿ, ರಾಮನಗರದಲ್ಲಿ ಎರಡು ದಿನ ಕಾಂಗ್ರೆಸ್‌‍ ಸಮಾವೇಶ ನಡೆದಿದೆ. ಆ.9 ರಂದು ಮೈಸೂರಿನಲ್ಲಿ ಬೃಹತ್‌ ಸಮಾವೇಶ ಆಯೋಜನೆ ಮಾಡಲಾಗಿದೆ. ಅದಕ್ಕೆ ಸುಮಾರು ಒಂದು ಲಕ್ಷ ಜನ ಸಮಾವೇಶಗೊಳ್ಳಬೇಕು. ಬಿಜೆಪಿ-ಜೆಡಿಎಸ್‌‍ನ ಪಾದಯಾತ್ರೆಗೆ ಪ್ರತಿಯಾಗಿ ಈ ಎರಡೂ ಪಕ್ಷಗಳ ನಾಯಕರ ಹಗರಣಗಳನ್ನು ಜನರ ಮುಂದಿಡಬೇಕು ಎಂಬ ಚರ್ಚೆಗಳಾಗಿವೆ.

ಮತ್ತೊಂದೆಡೆ ಕಾಂಗ್ರೆಸ್‌‍ನ ಒಳವಲಯದಲ್ಲೆ ಸಿದ್ದರಾಮಯ್ಯ ಅವರ ವಿರುದ್ಧ ಅಪಸ್ವರಗಳು ಹೊಗೆಯಾಡುತ್ತಿದ್ದು, ಈ ಕುರಿತು ಚರ್ಚೆಯಾಗಿದೆ.
ಒಂದು ವೇಳೆ ಪಕ್ಷದ ಒಳಗೆ ಅಪಸ್ವರಗಳು ಹೆಚ್ಚಾದರೆ ಅದಕ್ಕೆ ತಿರುಗೇಟು ನೀಡುವ ಸಲುವಾಗಿ ತಮ ತವರು ಜಿಲ್ಲೆಯಲ್ಲಿನ ಸಂಘಟನೆಗಳನ್ನು ಬಲಪಡಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದು, ಈ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌, ಶಾಸಕರಾದ ಪೊನ್ನಣ್ಣ, ವಿಧಾನಪರಿಷತ್‌ ಸದಸ್ಯ ವಿಜಯೇಂದ್ರ, ಮುಖಂಡರಾದ ಶಿವಣ್ಣ, ಮರಿತಿಬ್ಬೇಗೌಡ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜೊತೆ ದೃಢವಾಗಿ ನಿಲ್ಲುವುದಾಗಿ ಜಿಲ್ಲೆಯ ನಾಯಕರು ಭರವಸೆ ನೀಡಿದ್ದಾರೆ. ಜೊತೆಗೆ ಇದೇ ವೇಳೆ ಮೂರು ಜಿಲ್ಲೆಗಳಲ್ಲಿನ ಮಳೆಹಾನಿಗೆ ಸಂಬಂಧಪಟ್ಟಂತೆಯೂ ಚರ್ಚೆಗಳಾಗಿವೆ.

RELATED ARTICLES

Latest News