ಬೆಂಗಳೂರು,ಸೆ.25– ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶದ ನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿವೆ.
ರಾಜಧಾನಿ ಬೆಂಗಳೂರು, ಮೈಸೂರು, ಯಾದಗಿರಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ಸಿದ್ದರಾಮಯ್ಯನವರ ರಾಜೀನಾಮೆಗೆ ತೀವ್ರ ಒತ್ತಡ ತಂದಿದ್ದಾರೆ.
ಅಲ್ಲದೆ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲು ಉಭಯ ಪಕ್ಷಗಳು ನಿರ್ಧರಿಸಿದ್ದು, ಜಂಟಿಯಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುವುದಾಗಿ ಘೋಷಿಸಿವೆ. ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಪ್ರದರ್ಶಿಸಿ, ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ.
ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಸೇರಿದಂತೆ ಮೋರ್ಚಾದ ನೂರಾರು ಕಾರ್ಯಕರ್ತರು, ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಶಿವಾನಂದ ವೃತ್ತದಿಂದ ಮುಖ್ಯಮಂತ್ರಿ ವಿರುದ್ಧದ ಫಲಕಗಳನ್ನು ಹಿಡಿದು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕುಮಾರಕೃಪ ಅತಿಥಿ ಗೃಹದ ಬಳಿ ಬರುತ್ತಿದ್ದಂತೆ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಧೀರಜ್ ಮುನಿರಾಜ್, ಪ್ರಕರಣದಲ್ಲಿ ಸಿದ್ದರಾಮಯ್ಯ ಅವರೇ ಆರೋಪಿ ಸ್ಥಾನದಲ್ಲಿರುವುದರಿಂದ ನೈತಿಕ ಹೊಣೆ ಹೊತ್ತು ಅವರು ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದ್ದರೆ ಅವರು ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ರಾಜೀನಾಮೆ ನೀಡಬೇಕಿತ್ತು ಎಂದು ಹೇಳಿದರು.
ನ್ಯಾಯಾಲಯದ ಆದೇಶ ಸ್ಪಷ್ಟವಾಗಿದ್ದು, ಅವರು ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಉಳಿಸಿಕೊಂಡಿಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಮೊದಲು ನೈತಿಕತೆ ಪ್ರದರ್ಶಿಸಿ ಇನ್ನೊಬ್ಬರಿಗೆ ಮಾದರಿಯಾಗಲಿ. ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅವರು ರಾಜೀನಾಮೆ ನೀಡುವವರೆಗೂ ನಮ ಹೋರಾಟ ಮುಂದುವರೆಯುತ್ತದೆ. ಬೆಂಗಳೂರಿನಿಂದ ಮೈಸೂರುವರೆಗೆ ನಾವು ಹೋರಾಟ ನಡೆಸಿದ ಪರಿಣಾಮದಿಂದ ಪ್ರಕರಣ ಹೊರಬಂದಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ತಮ ಬುಡಕ್ಕೆ ಬೆಂಕಿ ಬಿದ್ದಾಗ ಕಾನೂನು ಬಗ್ಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಸಿದರು.
ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಫ್ರೀಡಂಪಾರ್ಕ್ ಮುಂಭಾಗದಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಲಾಯಿತು.ಮುಖ್ಯಮಂತ್ರಿ ವಿರದ್ಧದ ಫಲಕಗಳನ್ನು ಪ್ರದರ್ಶಿಸಿ, ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಮಾತನಾಡಿದ ಎಚ್.ಎಂ.ರಮೇಶ್ಗೌಡ, ಬಿಜೆಪಿ-ಜೆಡಿಎಸ್ ತಮ ವಿರುದ್ಧ ಷಡ್ಯಂತ್ರ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಆರೋಪಿಸಿ ರಾಜೀನಾಮೆ ಕೇಳುವ ನೈತಿಕ ಹಕ್ಕು ವಿಪಕ್ಷಗಳಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು. ರಾಜ್ಯಪಾಲರು ನೀಡಿದ ಅನುಮತಿಯನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಹೀಗಾಗಿ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಿ ಎಂದು ಆಗ್ರಹಿಸಿದರು.
ತಿಪ್ಪೇಸ್ವಾಮಿ ಮಾತನಾಡಿ, ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಹಿಂದೆ ಆರೋಪ ಕೇಳಿಬಂದಾಗ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮಾಯಿ ರಾಜೀನಾಮೆ ನೀಡಿದ್ದರು. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಸಹ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಅಂಟಿಕೊಂಡು ಕೂರಬಾರದು. ತಕ್ಷಣವೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವವರೆಗೂ ನಿರಂತರವಾಗಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದರು.
ಟಿ.ಎ.ಶರವಣ ಮಾತನಾಡಿ, ಹೈಕೋರ್ಟ್ ತನಿಖೆಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದರು. ಕಾನೂನು ಹೋರಾಟ ನಡೆಸಲು ನಮದೇನು ತಕರಾರು ಇಲ್ಲ. ಆದರೆ ನೈತಿಕ ಹೊಣೆ ಹೊತ್ತು ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.