ಬೆಂಗಳೂರು,ಜ.21- ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ಬಾಲ ರಾಮಮೂರ್ತಿ ಪ್ರಾಣಪ್ರತಿಷ್ಠಾಪನೆ ನಾಳೆ ನಡೆಯಲಿದ್ದು, ರಾಜ್ಯ ಸರ್ಕಾರ ಸ್ವಯಂ ಪ್ರೇರಣೆಯಿದ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಯಾವುದೇ ಪೂರ್ವಪರ ಯೋಚಿಸದೆ ಸ್ವಪಕ್ಷೀಯರ ಮಾತು ಕೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ರಾಜ್ಯಾದ್ಯಂತ ರಜೆ ಘೋಷಿಸಬೇಕೆಂದು ಆಗ್ರಹಿಸಿದರು.
ರಾಮ ಮಂದಿರ ನಿರ್ಮಾಣದಿಂದ ಸಿದ್ದರಾಮಯ್ಯ ಅವರು ವಿಚಲಿತರಾಗಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯಿಂದ ಸಿದ್ದರಾಮಯ್ಯ ಅವರು ಭಯಗೊಂಡು ರಜೆ ನೀಡುತ್ತಿಲ್ಲವೇನೊ ಎಂದು ಅವರು ಪ್ರಶ್ನಿಸಿದರು. ರಾಜ್ಯಪಾಲರ ಒತ್ತಡದಿಂದ ಪೊಲೀಸರು ಹರಿಪ್ರಸಾದ್ ಅವರನ್ನು ವಿಚಾರಣೆ ಮಾಡಿದ್ದಾರೆಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಾನಂದಗೌಡ ಅವರು, ಸಂವಿಧಾನಬದ್ದ ಸ್ಥಾನಗಳ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಅವರ ಪಕ್ಷದವರೇ ಹರಿಪ್ರಸಾದ್ ಹೇಳಿಕೆ ಸರಿಯಲ್ಲ ಎಂದಿದ್ದಾರೆ. ಒಂದು ವೇಳೆ ನಾಳೆ ಏನಾದರೂ ಗಲಾಟೆಯಾದರೆ ಸರ್ಕಾರ ಕಾರಣವೇ ಹೊರತು ಹರಿಪ್ರಸಾದ್ ಅಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಮನಹರಿಸಬೇಕಿದೆ ಎಂದರು.
ಆರ್. ಅಶೋಕ್ ಮಾತನಾಡಿ, ದೇಶದ 15ಕ್ಕೂ ಹೆಚ್ಚು ರಾಜ್ಯಗಳು ನಾಳೆ ರಜೆ ಘೋಷಿಸಿವೆ. ಬಿಜೆಪಿಯವರು ಮಾತ್ರ ರಜೆ ಕೇಳುತ್ತಿದ್ದಾರೆ ಎಂದುಕೊಳ್ಳುವುದು ಬೇಡ. ಏಳು ಕೋಟಿ ಜನರೂ ಕೂಡ ಕೇಳುತ್ತಿದ್ದಾರೆ. ರಜೆ ನೀಡುವಂತೆ ಮುಖ್ಯಮಂತ್ರಿಗೆ ನಾನೇ ಪತ್ರ ಕೊಡುತ್ತೇನೆ ಎಂದರು. ರಾಮನ ಮೇಲೆ ಸಾಸಿವೆ ಕಾಳಿನಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಕ್ತಿ, ಪ್ರೀತಿ ಇದ್ದರೆ ರಜೆ ಕೊಡಲಿ. ಅದನ್ನು ಬಿಟ್ಟು ದ್ವೇಷದ ರಾಜಕಾರಣ ಮಾಡಿದರೆ ಯಾರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿಯ ‘ಕೆಟಿಎಂ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್
ಗುಪ್ತಚರ ಇಲಾಖೆ ವಿಫಲವಾಗಿದೆ. ದೆಹಲಿ ನಾಯಕರು ರಜೆ ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ರಜೆ ಕೊಟ್ಟಿದೆ. ಆದರೂ ರಾಜ್ಯ ಸರ್ಕಾರ ರಜೆ ನೀಡದಿರುವುದು ಸರಿಯಲ್ಲ ಎಂದರು.
ಗೋವಿಂದ ಕಾರಜೋಳ ಮಾತನಾಡಿ, ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ದೇಶದ 140 ಕೋಟಿ ಜನರ ಅಪೇಕ್ಷೆಯಾಗಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು,
ನಾಳಿನ ಕಾರ್ಯಕ್ರಮಕ್ಕೆ 150 ದೇಶಗಳಿಂದ ಗಣ್ಯರು ಬರುತ್ತಿದ್ದಾರೆ. ಇದು ದೇಶದ ಜನರಿಗೆ ಸಂತೋಷ ತಂದಿದೆ. ರಾಷ್ಟ್ರದ ಜನರು ದೀಪಾವಳಿ ರೀತಿಯಲ್ಲಿ ಹಬ್ಬ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.