Monday, June 17, 2024
Homeರಾಜಕೀಯಕಾಂಗ್ರೆಸ್ ಜಾಹಿರಾತುಗಳಿಗೆ ಪ್ರತ್ಯುತ್ತರ ನೀಡದ ಬಿಜೆಪಿ ನಾಯಕರ ವಿರುದ್ದ ತಿರುಗಿಬಿದ್ದ ಕಾರ್ಯಕರ್ತರು

ಕಾಂಗ್ರೆಸ್ ಜಾಹಿರಾತುಗಳಿಗೆ ಪ್ರತ್ಯುತ್ತರ ನೀಡದ ಬಿಜೆಪಿ ನಾಯಕರ ವಿರುದ್ದ ತಿರುಗಿಬಿದ್ದ ಕಾರ್ಯಕರ್ತರು

ಬೆಂಗಳೂರು,ಏ.21-ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರಣಿ ಜಾಹಿರಾತುಗಳ ಮೂಲಕ ಮಾಡುತ್ತಿರುವ ಆರೋಪಗಳಿಗೆ ರಾಜ್ಯದ ನಾಯಕರು ಪ್ರತ್ಯುತ್ತರ ನೀಡದೆ ಪ್ರಮುಖ ನಾಯಕರು ಮೌನಕ್ಕೆ ಶರಣಾಗಿರುವುದರಿಂದ ಸ್ವತಃ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಕೇಂದ್ರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಕುರಿತು ಪತ್ರಿಕೆಗಳಲ್ಲಿ ಜಾಹಿರಾತು ಮೂಲಕ ಬಿಜೆಪಿ ವಿರುದ್ಧ ನಿರಂತರವಾಗಿ ಆಪಾದನೆಗಳ ಮೇಲೆ ಆಪಾದನೆ ಮಾಡುತ್ತಲೇ ಇದೆ.

ತೆರಿಗೆ, ನೀರಾವರಿ, ಬೆಲೆ ಏರಿಕೆ ಹೀಗೆ ಕೇಂದ್ರದಿಂದ ರಾಜ್ಯಕ್ಕೆ ಉಂಟಾಗಿರುವ ಅನ್ಯಾಯಗಳನ್ನು ಜಾಹಿರಾತು ರೂಪದಲ್ಲಿ ಬಿಡುಗಡೆ ಮಾಡುವ ಮೂಲಕ ಬಿಜೆಪಿಗೆ ಮುಜುಗರವನ್ನು ಸೃಷ್ಟಿಸುತ್ತಲೇ ಇದೆ. ಈ ಬಗ್ಗೆ ರಾಜ್ಯದ ಬಿಜೆಪಿಯ ಘಟಾನುಘಟಿ ನಾಯಕರು ಅಂಕಿಸಂಖ್ಯೆಗಳುಳ್ಳ ದಾಖಲೆಗಳ ಸಮೇತ ತಿರುಗೇಟು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೇ ತಿರುಗಿ ಬೀಳುತ್ತಿದ್ದಾರೆ.

91ರ ಇಳಿವಯಸ್ಸಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಶನಿವಾರ ಚಿಕ್ಕಬಳ್ಳಾಪುರದ ಸಮಾವೇಶದಲ್ಲಿ ಕಾಂಗ್ರೆಸ್ ನೀಡಿರುವ ಜಾಹಿರಾತನ್ನು ಕೈಯಲ್ಲಿಡುದುಕೊಂಡೇ ಯುಪಿಎ ಸರ್ಕಾರದಲ್ಲಿ ನಡೆದಿರುವ ಒಂದೊಂದು ಹಗರಣಗಳನ್ನು ಬಯಲಿಗೆಳೆದು ನೀವು ಮೋದಿ ಕೈಗೆ ಖಾಲಿ ಚೊಂಬು ನೀಡಿದ್ದೀರಿ. ಈಗ ಅದೇ ಮೋದಿಯವರು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ಹೇಳಿದ್ದರು.

ದೇವೇಗೌಡರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಲಾಗುತ್ತಿದ್ದು, ಇಂಥ ಇಳಿವಯಸ್ಸಿನಲ್ಲೂ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರೇ ಪಕ್ಷ ಬೇಧ ಮರೆತು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ ಬಿಜೆಪಿಯ ದಿಗ್ಗಜರೆನಿಸಿದ ಪ್ರಮುಖ ನಾಯಕರು ಕೇವಲ ನೆಪ ಮಾತ್ರಕ್ಕೆ ಮಾಧ್ಯಮಗಳ ಮುಂದೆ ಹೇಳಿಕೆಕೊಟ್ಟು ಕೈ ತೊಳೆದುಕೊಳ್ಳುತ್ತಿರುವುದಕ್ಕೆ ನಿಷ್ಠಾವಂತ ಕಾರ್ಯಕರ್ತರೇ ಬೇಸರ ಹೊರ ಹಾಕುತ್ತಿದ್ದಾರೆ.

ಗೌಡರಿಗೆ ಇರುವಷ್ಟು ಬದ್ದತೆ ನಮ್ಮ ನಾಯಕರಿಗೆ ಏಕೆ ಇಲ್ಲ. ಅಂಥ ವಯಸ್ಸಿನಲ್ಲೂ ಅವರು ಕಾಂಗ್ರೆಸ್ ವಿರುದ್ಧ ತುಂಬಿದ ಸಭೆಯಲ್ಲಿ ಝಾಡಿಸಿದ ರೀತಿ ನಮ್ಮ ಪಕ್ಷದವರು ಏಕೆ ಮಾತನಾಡುತ್ತಿಲ್ಲ. ಮತದಾನಕ್ಕೆ ಕೆಲವೇ ದಿನಗಳು ಸಮೀಪಿಸುತ್ತಿರುವಾಗ ಕಾಂಗ್ರೆಸ್ ಹೂಡಿರುವ ರಣತಂತ್ರಕ್ಕೆ ಪ್ರತಿ ತಂತ್ರವಾದರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಹಿಂದೆ ವಿಧಾನಸಭೆ ಚುನಾವಣೆ ವೇಳೆ ಪೇ ಸಿಎಂ ಅಭಿಯಾನವನ್ನು ನಡೆಸಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈಗ ಖಾಲಿ ಚೊಂಬು, ಅಚ್ಚೇ ದಿನವಲ್ಲ ದೌರ್ಭಾಗ್ಯದ ದಿನಗಳು, ತೆರಿಗೆಯಿಂದ ಉಂಟಾಗುತ್ತಿರುವ ಅನ್ಯಾಯ ಜಾಹಿರಾತು ಮೂಲಕ ಕಾರ್ಯತಂತ್ರದಲ್ಲಿ ಯಶಸ್ವಿಯಾಗಿದೆ.

ನಮ್ಮ ನಾಯಕರು ಏಕೆ ತುಟಿ ಬಿಚ್ಚುತ್ತಿಲ್ಲ ಎಂದು ನೊಂದ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್ ನೀಡಿದ್ದ ಮೊದಲ ದಿನದ ಜಾಹಿರಾತು ವೇಳೆಯೇ ದಾಖಲೆಗಳನ್ನಿಟ್ಟುಕೊಂಡು ಹಿಂದಿನ ಯುಪಿಎ ಸರ್ಕಾರ ಹಾಗೂ ಕಳೆದ ಹತ್ತು ವರ್ಷದ ಅವಯಲ್ಲಿ ಎನ್‍ಡಿಎ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಮಾಧ್ಯಮಗಳ ಮುಂದೆ ದಾಖಲೆಗಳ ಸಮೇತ ಬಿಡುಗಡೆ ಮಾಡಬೇಕಿತ್ತು.

ಬೆಲೆ ಏರಿಕೆ ಕುರಿತಂತೆ ನೀಡಿರುವ ಜಾಹಿರಾತಿನಲ್ಲಿ ಕೆಲವು ತಪ್ಪು ಮಾಹಿತಿ ನೀಡಲಾಗಿದೆ. ಗ್ಯಾಸ್ ಸಿಲಿಂಡರ್, ತೊಗರಿಬೇಳೆ, ಅಡುಗೆ ಎಣ್ಣೆ, ಟೀ ಪುಡಿ ಇತ್ಯಾದಿ ಬೆಲೆಗಳ ಕುರಿತು ಮಾಧ್ಯಮಗಳ ಮುಂದೆ ದಾಖಲೆಗಳನ್ನಿಡಲು ನಮ್ಮವರಿಗೆ ಇರುವ ಸಮಸ್ಯೆಯಾದರೂ ಏನು ಎಂದು ಅನೇಕರು ಪಕ್ಷದ ವಿರುದ್ದವೇ ಬೆಂಕಿ ಉಗುಳುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದ ನಂತರ ಮದ್ಯ, ಬಸ್ತರ, ವಿದ್ಯುತ್, ಮುದ್ರಣ ಮತ್ತು ನೋಂದಣಿ ಶುಲ್ಕ ಹೀಗೆ ಹಲವು ರೀತಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಇದನ್ನು ಜನರಿಗೆ ನಾವು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮಲ್ಲಿ ತಾಳ-ಮೇಳ ಎಲ್ಲವೂ ಸರಿ ಇಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಮೋದಿ ಅಲೆ ಸಾಕಾಗುವುದಿಲ್ಲ:
ಕೆಲವು ಕಣದಲ್ಲಿರುವ ಅಭ್ಯರ್ಥಿಗಳಿಗೆ ಈಗಾಗಲೇ ನಾವು ಗೆದ್ದೇ ಬಿಟ್ಟಿದ್ದೇವೆ ಎಂಬ ಅಹಂ ಬಂದಿದೆ. ಕಾರ್ಯಕರ್ತರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರಮೋದಿ ಅಲೆಯಲ್ಲಿ ಗೆಲ್ಲುತ್ತೇವೆ ಎಂಬ ಅತಿಯಾದ ವಿಶ್ವಾಸದಲ್ಲಿದ್ದಾರೆ. ಎಲ್ಲದಕ್ಕೂ ಮೋದಿ ಅಲೆಯನ್ನೇ ನೆಚ್ಚಿಕೊಂಡರೆ ಗೆಲ್ಲುವುದು ಸುಲಭವಲ್ಲ ಎಂದು ಕಾರ್ಯಕರ್ತರೆ ಹೇಳುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಮೋದಿಯವರನ್ನು ಪ್ರಧಾನಿ ಹುದ್ದೆ ಮರೆತು ಗಲ್ಲಿ ಗಲ್ಲಿಯಲ್ಲೂ ಪ್ರಚಾರ ನಡೆಸಲಾಯಿತು. ಕೊನೆಗೆ ಫಲಿತಾಂಶದಲ್ಲಿ ಬಂದಿದ್ದು 66 ಸ್ಥಾನ. ಇದನ್ನು ಬಿಜೆಪಿ ನಾಯಕರು ಮರೆಯಬಾರದೆಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ಇದೆ. ನನ್ನ ಬಗ್ಗೆ ನೀವು ಮಾತನಾಡಬೇಡಿ. ನಿಮ್ಮ ಬಗ್ಗೆ ನಾವು ಮಾತನಾಡುವುದಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಹೀಗಾಗಿಯೇ ಲೋಕಸಭೆ ಚುನಾವಣೆಯಲ್ಲಿ ನಾವು ವ್ಯವಸ್ಥಿತವಾದ ಕಾರ್ಯತಂತ್ರವನ್ನು ರೂಪಿಸುವಲ್ಲಿ ವಿಫಲರಾಗಿದ್ದೇವೆ ಎಂಬ ನೋವು ಅನೇಕರಲ್ಲಿದೆ.

ಒಳ್ಳೆಯದೋ ಕೆಟ್ಟದ್ದೋ ವಾದ-ವಿವಾದ ಏನೇ ಇರಲಿ ಈಗಿನ ಬಿಜೆಪಿಗೆ ಅನಂತಕುಮಾರ್ ಹೆಗಡೆ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಅಂಥವರೇ ಸೂಕ್ತ ಎಂದು ಬಿಜೆಪಿಯವರೇ ಮಾತನಾಡಿಕೊಳ್ಳುತ್ತಿದ್ದಾರೆ.

RELATED ARTICLES

Latest News