ಬೆಂಗಳೂರು,ಫೆ.6-ಬರಲಿರುವ ಲೋಕಸಭೆ ಚುನಾವಣೆಯಲ್ಲಿ 25 ಕ್ಕೂ ಹೆಚ್ಚು ಸ್ಥಾನಗಳನ್ನು
ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿಗೆ ಪ್ರತಿ ಯೊಂದು ಕ್ಷೇತ್ರದಲ್ಲೂ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಅಭ್ಯರ್ಥಿಗಳ ಆಯ್ಕೆಗೆ ಕಗ್ಗಂಟಾಗಿ ಪರಿಣಮಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಒಂದರಿಂದ ಐದಕ್ಕೂ ಹೆಚ್ಚು ಆಕಾಂಕ್ಷಿಗಳಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಹಾಲಿ ಸದಸ್ಯರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇರುವುದರಿಂದ ಇಂತಹ ಕ್ಷೇತ್ರಗಳ ಮೇಲೆ ಒಂದು ಡಜನ್‍ಗೂ ಅಕ ಆಕಾಂಕ್ಷಿಗಳು ಸ್ರ್ಪಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಪಕ್ಷದಿಂದ ಟಿಕೆಟ್ ಸಿಗಬಹುದೆಂಬ ಖಚಿತ ಭರವಸೆ ಹಿನ್ನೆಲೆಯಲ್ಲಿ ಕೆಲವು ಆಕಾಂಕ್ಷಿಗಳು ಕ್ಷೇತ್ರದಲ್ಲಿ ಒಂದು ಸುತ್ತಿನ ಮತದಾರರ ಭೇಟಿ ಮಾಡುವ ಕೆಲಸಕ್ಕೂ ಕೈ ಹಾಕಿದ್ದಾರೆ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ತೇಜಸ್ವಿ ಸೂರ್ಯರಿಗೆ ಪುನಃ ಟಿಕೆಟ್ ಖಾತರಿ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಿಂದ 6 ಬಾರಿ ಗೆದ್ದಿದ್ದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್, ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್‍ರ ಹೆಸರು ಕೇಳಿಬಂದಿದೆ.
ಬೆಂಗಳೂರು ಉತ್ತರದಲ್ಲಿ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಈ ಹಿಂದೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಡಿ.ವಿ.ಸದಾನಂಗೌಡ ಮತ್ತೆ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರಕ್ಕೆ ಕೇಂದ್ರಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಕಣ್ಣಿಟ್ಟಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್ ಸ್ಪರ್ಧೆ ಕಂಡುಬರುತ್ತಿಲ್ಲ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಸ್ರ್ಪಧಿಸುವುದಿಲ್ಲ ಎಂದು ಹೇಳಿರುವುದರಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಈಗಾಗಲೇ ನನಗೇ ಟಿಕೆಟ್ ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ.
ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಕೇಜ್ರಿವಾಲ್ ಆಪ್ತ, ರಾಜ್ಯಸಭಾ ಸದಸ್ಯ ಸೇರಿ ಹಲವರ ಮನೆಗಳ ಮೇಲೆ ಇಡಿ ರೇಡ್
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಕೋಲಾರ ಕ್ಷೇತ್ರವನ್ನು ದಳಪತಿಗೆ ಬಿಟ್ಟುಕೊಟ್ಟರೆ, ಹಾಲಿ ಸಂಸದ ಮುನಿಸ್ವಾಮಿಗೆ ಟಿಕೆಟ್ ತಪ್ಪುವುದು ಗ್ಯಾರಂಟಿ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಹೆಸರು ಕೇಳಿಬಂದಿವೆ. ಒಂದು ವೇಳೆ ಈ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೆ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಬಹುದು. ಮೈಸೂರು-ಕೊಡಗು ಕ್ಷೇತ್ರಕ್ಕೆ ಬಹುತೇಕ ಹಾಲಿ ಸಂಸದ ಪ್ರತಾಪಸಿಂಹಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಹಾಲಿ ಸಂಸದ ವಿ.ಶ್ರೀನಿವಾಸ್ ಅವರ ಅಳಿಯಂದಿರಲ್ಲಿ ಒಬ್ಬರು ಕಣಕ್ಕಿಳಿಯಬಹುದು.
ತುಮಕೂರು ಕ್ಷೇತ್ರಕ್ಕೆ ಮಾಜಿ ಸಚಿವರಾದ ವಿ.ಸೋಮಣ್ಣ ಹಾಗೂ ಜೆ.ಸಿ.ಮಾಧುಸ್ವಾಮಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಯಾರಿಗೆ ಟಿಕೆಟ್ ಕೈತಪ್ಪಿದರೂ ಒಳಹೊಡೆತ ತಪ್ಪಿದ್ದಲ್ಲ ಎಂಬ ಭೀತಿಯಿದೆ. ಚಿತ್ರದುರ್ಗದಲ್ಲಿ ಹಾಲಿ ಸಚಿವ ನಾರಾಯಣಸ್ವಾಮಿ ಮುಂದುವರೆಯುವುದು ಖಚಿತ.
ಮಧ್ಯಕರ್ನಾಟಕದ ರಾಜಧಾನಿ ಎನಿಸಿರುವ ದಾವಣಗೆರೆಯಲ್ಲಿ ಹಿಂದೆಂದಿಗಿಂತಲೂ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಟಿಕೆಟ್ ಕೊಡಬಾರದು ಎಂದು ಜಿಲ್ಲಾ ಘಟಕ ಒತ್ತಾಯಿಸಿದೆ. ಉಳಿದಂತೆ ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ, ಚಿಕ್ಕಮಗಳೂರು-ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಮುಂದುವರೆಯಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನಳಿನ್‍ಕುಮಾರ್ ಕಟೀಲ್‍ಗೆ ಟಿಕೆಟ್ ಕೈ ತಪ್ಪುವ ಲಕ್ಷಣಗಳು ಗೋಚರಿಸಿವೆ.
ಸಂಘ ಪರಿವಾರದ ಹಿನ್ನೆಲೆಯ ಬ್ರಿಜೇಶ್ ಚೌತಗೆ ಟಿಕೆಟ್ ಸಿಗಬಹುದು. ಪಕ್ಕದ ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗ್ಡೆಗೆ ಮತ್ತೊಮ್ಮೆ ಮಣೆ ಹಾಕುವ ಸಾಧ್ಯತೆಯಿದೆ. ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಯೆಬ್ ಜೊಲ್ಲೆ ಮುಂದುವರೆದರೆ, ಬೆಳಗಾವಿಯಲ್ಲಿ ಮಂಗಳ ಸುರೇಶ್ ಬದಲಿಗೆ ಹೊಸ ಅಭ್ಯರ್ಥಿ ಕಣಕ್ಕಿಳಿಯಬಹುದು.
ಕೋವಿಡ್ ಲಸಿಕೆಗಳಿಂದ ಹೃದಯಘಾತವಾಗುತ್ತಿಲ್ಲ : ರುಶಿಕೇಶ್
ಧಾರವಾಡ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಕ್ಷೇತ್ರವನ್ನು ಹಾಲಿ ಸಚಿವ ಪ್ರಹ್ಲಾದ್ ಜೋಶಿ ಪ್ರತಿನಿಸುತ್ತಿದ್ದಾರೆ. ಹಾವೇರಿ ಕ್ಷೇತ್ರಕ್ಕೆ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್, ವಕೀಲ ಸಂದೀಪ್ ಪಾಟೀಲ್ ಹೆಸರು ಕೇಳಿಬಂದಿವೆ.
ಬಳ್ಳಾರಿಯಲ್ಲಿ ಶ್ರೀರಾಮಲು, ಕೊಪ್ಪಳದಲ್ಲಿ ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ, ರಾಯಚೂರಿನಲ್ಲಿ ಅಮರೇಶ್ ನಾಯಕ್, ಸ್ಪರ್ಧೆಗಿಳಿಯುವುದು ಖಚಿತ. ಬೀದರ್‍ನಲ್ಲಿ ಸಚಿವ ಭಗವಂತ್ ಖೂಬಾಗೆ ಟಿಕೆಟ್ ನೀಡಬಾರದೆಂಬ ಒತ್ತಡ ಕೇಳಿಬಂದಿದೆ. ಬಾಗಲಕೋಟೆಯಲ್ಲಿ ಹಾಲಿ ಸಂಸದ ಗದ್ದಿಗೌಡರ್ ಹಿಂದೇಟು ಹಾಕಿದ್ದರೆ, ಕಲಬುರ್ಗಿಯಲ್ಲಿ ಡಾ.ಉಮೇಶ್ ಜಾದವ್‍ಗೆ ಮಣೆ ಹಾಕುವ ಸಂಭವವಿದೆ.