Saturday, June 22, 2024
Homeರಾಜ್ಯಬಿಜೆಪಿಯಲ್ಲಿ ಟಿಕೆಟ್ ಗೊಂದಲ, ಹೆಚ್ಚಿದ ಲಾಬಿ

ಬಿಜೆಪಿಯಲ್ಲಿ ಟಿಕೆಟ್ ಗೊಂದಲ, ಹೆಚ್ಚಿದ ಲಾಬಿ

ಬೆಂಗಳೂರು,ಮಾ.10-ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಬಿಜೆಪಿಯಲ್ಲಿ ಬಣ ರಾಜಕೀಯ ಮುನ್ನೆಲೆಗೆ ಬಂದಿದ್ದು, ತಮ್ಮ ಅತ್ಯಾಪ್ತರಿಗೆ ಟಿಕೆಟ್ ಕೊಡಿಸುವ ಮುಖಂಡರ ವರ್ತನೆಗೆ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ. ಈ ಬಾರಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ.

ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರನ್ನು ಪರೋಕ್ಷವಾಗಿ ಮಾಜಿ ಸಚಿವ ಸಿ.ಟಿ.ರವಿ ಎತ್ತಿ ಕಟ್ಟುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಇದೇ ಕ್ಷೇತ್ರದಿಂದ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲೇಬೇಕೆಂದು ದೆಹಲಿ ಮಟ್ಟದಲ್ಲೂ ಲಾಬಿಗಿಳಿದಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ತುಮಕೂರಿನಲ್ಲೂ ಬಣ ರಾಜಕೀಯ ತಾರಕಕ್ಕೇರಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಿಜೆಪಿಯ ನಿಷ್ಠಾವಂತ ಬಣ ಮುಂದಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ರ್ಪಧಿಸಿ ಸೋತಿದ್ದ ಸೋಮಣ್ಣನವರಿಗೆ ಟಿಕೆಟ್ ನೀಡಬೇಕೆಂಬುದು ಬಿಜೆಪಿಯ ಒಂದು ಬಣದ ವಾದವಾಗಿದೆ. ಇಲ್ಲಿ ಕೂಡ ಯಡಿಯೂರಪ್ಪನವರ ಮಧ್ಯಪ್ರವೇಶವಾಗಿದ್ದು ತಮ್ಮ ಆಪ್ತ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ತುಮಕೂರಿನಲ್ಲೂ ಬಿಜೆಪಿ ಎರಡು ಬಣವಾಗಿರುವುದು ಸ್ಪಷ್ಟವಾಗಿದೆ. ಈವರೆಗೂ ಟಿಕೆಟ್ ನೂರಕೆ ನೂರರಷ್ಟು ಖಚಿತ ಎಂದು ಹೇಳಲಾಗುತ್ತಿದ್ದ ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹಗೆ ಎರಡು ದಿನಗಳಿಂದ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳು ಬಲವಾಗಿ ಹಬ್ಬಿದೆ.

ರಾಜವಂಶಸ್ಥ ಯದುವೀರ ಒಡೆಯರ್ ಹೆಸರು ಏಕಾಏಕಿ ಮುನ್ನಲೆಗೆ ಬಂದಿದೆ. ಆದರೆ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬೇಕೆಂದು ಶಾಸಕರಾದ ಜಿ.ಟಿ.ದೇವೆಗೌಡ, ಶ್ರೀವತ್ಸ ಸೇರಿದಂತೆ ಇಡೀ ಜಿಲ್ಲಾ ಬಿಜೆಪಿ ಘಟಕ ಅವರ ಬೆನ್ನಿಗೆ ನಿಂತಿದೆ. ಮೂಲಗಳ ಪ್ರಕಾರ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದೇ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲೂ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಮಧ್ಯ ಕರ್ನಾಟಕದ ರಾಜಧಾನಿ ಎನಿಸಿರುವ ದಾವಣಗೆರೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‍ಗೆ ಟಿಕೆಟ್ ನೀಡಬಾರದೆಂದು ಇಡೀ ಜಿಲ್ಲಾ ಬಿಜೆಪಿ ಘಟಕ ವಿರೋಧ ವ್ಯಕ್ತಪಡಿಸಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಯುವ ನಾಯಕ ಡಾ.ರವಿಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಯಡಿಯೂರಪ್ಪ ಸಿದ್ದೇಶ್ ಪರವಾಗಿ ನಿಂತರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರೇಣುಕಾಚಾರ್ಯ ಪರವಾಗಿ ಲಾಬಿ ನಡೆಸಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಇದೀಗ ಸಿದ್ದೇಶ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ ಹೆಸರು ಮುನ್ನಲೆಗೆ ಬಂದಿದೆ. ಇಲ್ಲೂ ಕೂಡ ಬಿಜೆಪಿ ಬಣ ಜಗಳ ಬೀದಿಗೆ ಬಂದಿರುವುದು ಸ್ಪಷ್ಟಾಗಿ ಗೋಚರಿಸಿದೆ.

ಹಾವೇರಿಯಲ್ಲೂ ಬಿಜೆಪಿ ಬಣ ರಾಜಕೀಯ ಸ್ಪೋಟಗೊಂಡಿದೆ. ಮಾಜಿ ಸಚಿವ ಈಶ್ವರಪ್ಪ, ತಮ್ಮ ಪುತ್ರ ಕೆ.ಇ.ಕಾಂತೇಶ್‍ಗೆ ಟಿಕೆಟ್ ನೀಡಬೇಕೆಂದರೆ ಮತ್ತೊಂದು ಬಣ ಬಸವರಾಜ್ ಬೊಮ್ಮಾಯಿಗೆ ಮಣೆ ಹಾಕಿದೆ.ಆದರೆ ಇಲ್ಲೂ ಕೂಡ ಯಡಿಯೂರಪ್ಪ ಸುಪ್ರೀಂಕೋರ್ಟ್‍ನಲ್ಲಿ ಅಡ್ವೊಕೇಟ್ ಆಗಿರುವ ಸಂದೀಪ್ ಪಾಟೀಲ್‍ಗೆ ಟಿಕೆಟ್ ಕೊಡಿಸಲು ಕಸರತ್ತು ನಡೆಸಿದ್ದಾರೆ. ಹೀಗಾಗಿ ಹಾವೇರಿ ಜಿಲ್ಲಾ ಬಿಜೆಪಿ ಇಬ್ಭಾಗವಾಗಿದೆ. ಉತ್ತರ ಕನ್ನಡ ಜಿಲ್ಲೆಯಿಂದ ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷೀಯರೇ ಒತ್ತಾಯಿಸಿದ್ದಾರೆ. ಎಂದಿನಂತೆ ಹೆಗಡೆ ಪರವಾಗಿ ಯಡಿಯೂರಪ್ಪ ನಿಂತರೆ ಮತ್ತೊಂದು ಬಣ ಕಾಗೇರಿ ಪರವಾಗಿಯೂ ಲಾಬಿ ನಡೆಸಿದೆ.

ಬಿಜೆಪಿ ಕಪಟ ನಾಟಕ ಬಿಟ್ಟು ಕೇಂದ್ರದಿಂದ ಹಣ ಕೊಡಿಸಲಿ : ಡಿಕೆಶಿ

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ಗೆ ಟಿಕೆಟ್ ನೀಡಲು ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ. ಸ್ಥಳೀಯರಿಗೆ ಯಾರಿಗಾದರೂ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.ಬೀದರ್‍ನಲ್ಲೂ ಸಚಿವ ಭಗವಂತ ಕೂಬಾಗೆ ಟಿಕೆಟ್ ನೀಡಲು ಸ್ವಪಕ್ಷಿಯವರಿಂದಲೇ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಅವರಿಗೆ ಟಿಕೆಟ್ ಕೊಟ್ಟರೆ ನೋಟಾಕ್ಕೆ ಮತ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿಯೂ ಕೂಬಾ ಪರವಾಗಿ ಯಡಿಯೂರಪ್ಪ ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬೆಳವಣಿಗೆಯಿಂದ ಶಾಸಕರಾದ ಪ್ರಭು ಚವ್ಹಾಣ್, ಬಸವ ಕಲ್ಯಾಣ ಶಾಸಕ ಶರಣು ಸಲಗಾರ ಮತ್ತಿತರರು ಚುನಾವಣಾ ಚಟುವಟಿಕೆಗಳಿಂದ ದೂರ ಉಳಿಯುವ ಬೆದರಿಕೆ ಹಾಕಿದ್ದಾರೆ.

ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೆಬ್ ಜೊಲ್ಲೆಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿಗೆ ಟಿಕೆಟ್‍ನೀಡಬೇಕೆಂಬ ಬೇಡಿಕೆ ಇದೆ.ಅಣ್ಣಾ ಸಾಹೇಬ್ ಜೊಲ್ಲೆ ಪರವಾಗಿ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಲಾಬಿ ನಡೆಸಿದರೆ ರಮೇಶ್ ಕತ್ತಿ ಪರವಾಗಿ ಯಡಿಯೂರಪ್ಪ ಲಾಬಿ ಮಾಡಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಬಣ ರಾಜಕೀಯ ಜೋರಾಗಿದೆ. ಒಂದು ಬಣ ಮಾಜಿ ಸಚಿವ ಡಾ.ಕೆ.ಸುಧಾಕರ್ ಪರವಾಗಿದ್ದರೆ, ಯಡಿಯೂರಪ್ಪ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್‍ಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.
ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಬಣ ರಾಜಕೀಯ ಬೀದಿಗೆ ಬಂದಿದ್ದು, ಅಭ್ಯರ್ಥಿಗಳ ಆಯ್ಕೆ ಮಾಡುವುದೇ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ.

RELATED ARTICLES

Latest News