ಬೆಂಗಳೂರು,ಜ.27- ವಿಧಾನಪರಿಷತ್ ಸದಸ್ಯರಾಗಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಂತೆ ಬಿಜೆಪಿ ಶಾಸಕರೊಬ್ಬರು ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಿಂದ ಹೊರಗುಳಿದು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ತಮ್ಮ ಕ್ಷೇತ್ರದಿಂದ ಮುಖ್ಯಮಂತ್ರಿಯವರ ನಿವಾಸ ಕಾವೇರಿಯವರೆಗೂ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಬಳಿಕ ಮುಖ್ಯಮಂತ್ರಿಯವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ತಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ ಸ್ನೇಹಿತರಾಗಿರುವ ಕೆ.ಆರ್. ಪೇಟೆಯ ರಾಮೇಗೌಡರು ಚೌಟ್ರಿಯೊಂದನ್ನು ನಿರ್ಮಿಸಿದ್ದಾರೆ. ಮುಖ್ಯಮಂತ್ರಿಯವರು ಕಾರ್ಯದೊತ್ತಡದಲ್ಲಿರುತ್ತಾರೆ. ಅದರಲ್ಲಿ ಭಾಗವಹಿಸುವುದಿಲ್ಲ ಎಂದು ನಾನು ಲೆಕ್ಕಾಚಾರ ಹಾಕಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಹತ್ತು ನಿಮಿಷದಲ್ಲೇ ಮುಖ್ಯಮಂತ್ರಿಯವರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಸಂದೇಶ ಬಂದಿತು. ಅಲ್ಲಿಂದ ಹೊರಟುಬರುವುದು ಸರಿಯಲ್ಲ ಎಂದು ಉಳಿದುಕೊಂಡಿದ್ದೆ. ಮುಖ್ಯಮಂತ್ರಿಯವರು ಕಾರ್ಯಕ್ರಮಕ್ಕೆ ಬಂದಿದ್ದರು. ಮಾತನಾಡಬೇಕು ಬಾ ಎಂದು ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದರು.
ನೈಸ್ ರಸ್ತೆಯಲ್ಲಿ ಪ್ರಯಾಣಿಸುವಾಗ, ನೈಸ್ ರಸ್ತೆ ಯೋಜನೆ ಆರಂಭಗೊಂಡು 30 ವರ್ಷ ಕಳೆದಿದೆ. ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅಲ್ಲಿ ಪ್ರತಿಯೊಂದು ಎಕರೆಗೆ ಮೂರೂವರೆ ಕೋಟಿ ರೂ. ದರ ದೆ. ನೈಸ್ ಸಂಸ್ಥೆಯವರು 40 ಲಕ್ಷ ಕೊಡುತ್ತೇವೆ ಎನ್ನುತ್ತಿದ್ದಾರೆ. ವಿಶೇಷ ಸಭೆ ನಡೆಸಿ ಈ ಗೊಂದಲ ಬಗೆಹರಿಸಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ನೈಸ್ ವಿಚಾರವಾಗಿ ಚರ್ಚೆ ಮಾಡಿದ್ದು ಬಿಟ್ಟರೆ ರಾಜಕೀಯವಾಗಿ ಮುಖ್ಯಮಂತ್ರಿಯವರ ಜೊತೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು.
ನಿಗಮ – ಮಂಡಳಿ ನೇಮಕಾತಿ ಬೆನ್ನಲ್ಲೇ `ಕೈ’ನಲ್ಲಿ ಭುಗಿಲೆದ್ದ ಭಿನ್ನಮತ
ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಗೆ ನನಗೆ ಆಹ್ವಾನವಿರಲಿಲ್ಲ. ನಾನಿನ್ನೂ ಬಿಜೆಪಿಯಲ್ಲಿಯೇ ಇದ್ದೇನೆ. ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕೆಲವರು ನಮ್ಮವರನ್ನು ದುರ್ಬಲ ಎಂದುಕೊಂಡಿದ್ದರು. ಈಗ ನಮ್ಮ ಹೆಸರು ಮೈಸೂರು ಹಾಗೂ ಬೆಂಗಳೂರು ಲೋಕಸಭಾ ಕ್ಷೇತ್ರಗಳಿಗೆ ಕೇಳಿಬರುತ್ತಿದೆ. ನಾನು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸುವುದಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೆ. ಅಲ್ಲೂ ಸ್ಪರ್ಧೆ ಮಾಡಿದರೆ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. ನಮ್ಮನ್ನು ಕಡಿಮೆ ಅಂದಾಜು ಮಾಡಿದವರಿಗೆ ಈ ಬೆಳವಣಿಗೆಗಳು ಉತ್ತರ ನೀಡುತ್ತವೆ ಎಂದರು. ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡರೂ ತೀರ್ಮಾನ ಮಾಡಬೇಕಾದವರು ಜನ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಫಲಿತಾಂಶ ಏನಾಗಿದೆ ಎಂದು ಎಲ್ಲರಿಗೂ ಗೊತ್ತು. ಸದ್ಯಕ್ಕೆ ಲೋಕಸಭೆ ಚುನಾವಣೆ ಕಾವೇರಿಲ್ಲ. ವಿಧಾನಪರಿಷತ್ ಚುನಾವಣೆ ವೇಳೆ ಯಾರಿಗೆ ಮತ ಹಾಕಬೇಕೆಂಬುದನ್ನು ಚರ್ಚೆ ನಡೆಸಲಾಗುತ್ತಿದೆ. ನಾನು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ನಮ್ಮ ಸ್ನೇಹಿತರ ಬಳಿಯೂ ಕೂಡ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದರು. ಜಗದೀಶ್ ಶೆಟ್ಟರ್ ಅವರ ವಿಚಾರ ಬೇರೆ. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಅಲ್ಲಿ ಅವರನ್ನು ಎಂಎನ್‍ಸಿ ಮಾಡಲಾಗಿತ್ತು. ಈಗ ಮತ್ತೆ ಬಿಜೆಪಿಗೆ ಬಂದಿದ್ದಾರೆ.
ನಾನು ಬಿಜೆಪಿಯಲ್ಲಿದ್ದೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಎಂದಿಗೂ ಪಕ್ಷಕ್ಕೆ ಕರೆದಿಲ್ಲ. ಯಶವಂತಪುರ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಸಿದ್ದರಾಮಯ್ಯನವರೇ ಕಾರಣ. ಅವತ್ತಿನಿಂದ ಈವರೆಗೂ ಅವರ ಬಗ್ಗೆ ನನಗೆ ಗೌರವವಿದೆ ಎಂದರು.