Wednesday, October 16, 2024
Homeರಾಜ್ಯಮಾಜಿ ಸಚಿವ ಹೆಚ್.ಆಂಜನೇಯ ಅವಿವೇಕಿ : ಯತ್ನಾಳ್

ಮಾಜಿ ಸಚಿವ ಹೆಚ್.ಆಂಜನೇಯ ಅವಿವೇಕಿ : ಯತ್ನಾಳ್

ಬೆಂಗಳೂರು,ಜ.2- ಭಗವಾನ್ ರಾಮನನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೋಲಿಸಿ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್.ಆಂಜನೇಯ ಅವಿವೇಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಟ್ವೀಟ್ ಮಾಡಿರುವ ಅವರು, ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಹಿಂದೆ ಸಚಿವರಾಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ. ಆಂಜನೇಯಪ್ಪನವರ ಪೂಜ್ಯ ದೇವರಾದ ಸಿದ್ದರಾಮಯ್ಯನವರಿಗೆ ಅವರ ಮನೆಯಲ್ಲಿ ಸಕಲ ಪೂಜಾ ಕೈಂಯರ್ಯಗಳು ನಡೆಯಲಿ. ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಘನತೆಯಿಂದ, ಗೌರವದಿಂದ ವರ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಕುರಿತು ಹೆಚ್.ಆಂಜನೇಯನವರು, ಸಿಎಂ ಸಿದ್ದರಾಮಯ್ಯ ಅವರೇ ಒಬ್ಬ ರಾಮ, ಇನ್ನು ಅವರು ಆ ರಾಮನನ್ನು (ಅಯೋಧ್ಯೆಯ ರಾಮನ ಉದ್ದೇಶಿಸಿ) ಹೋಗಿ ಯಾಕೆ ಪೂಜಿಸಬೇಕು ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಸನಗೌಡ ಪಾಟೀಲ್ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿರುಗೇಟು ಕೊಟ್ಟಿದ್ದಾರೆ.

1992ರಲ್ಲಿ ಕರಸೇವಕರಾಗಿ ಶ್ರೀ ರಾಮ ದೇವರ ಸೇವೆ ಮಾಡಿದ ಭಕ್ತರಿಗೆ, ಕಾರ್ಯಕರ್ತರಿಗೆ ಈಗ ನೋಟೀಸ್ ನೀಡಿ ಹುಬ್ಬಳ್ಳಿ ಪೊಲೀಸರು ಬಂಧನ ಮಾಡುವುದಾಗಿ ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಸೇಡಿನ ರಾಜಕಾರಣ ತೋರಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರನ್ನು ವಿ.ಐ.ಪಿ ಪ್ರಕರಣಗಳ ಹುಡುಕಾಟಕ್ಕೆ ನಿಯೋಜಿಸಿರುವ ಗೃಹ ಇಲಾಖೆಯ ಕ್ರಮ ಖಂಡನೀಯ ಎಂದು ಆಕ್ಷೇಪಿಸಿದ್ದಾರೆ.

ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುತ್ತಿರುವ ಸಂದರ್ಭದಲ್ಲಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರ 31 ವರ್ಷಗಳ ಹಳೆಯ ಪ್ರಕರಣಕ್ಕೆ ಜೀವ ನೀಡುವ ಮೂಲಕ ತಾನು ಹಿಂದೂ ವಿರೋಧಿ ಎಂದು ಸಾಬೀತುಪಡಿಸಿದೆ. ಅಸಲಿಗೆ, ಮೂರು ದಶಕಗಳ ಕಾಲ ಸುಮ್ಮನಿದ್ದು, ಈಗ ರಾಮ ಜನ್ಮಭೂಮಿ ಪ್ರಾಣಪ್ರತಿಷ್ಠಾಪನೆಯ ದಿನಾಂಕ ನಿಗದಿಯಾದ ಮೇಲೆ ಈ ಕ್ರಮ ಕೈಗೊಂಡಿರುವುದು ಹಾಗೂ ವಿಶೇಷ ತಂಡ ರಚಿಸಿ ಬಂಧಿಸಲು ಹೊರಟಿರುವುದು ಹೇಯ ಹಾಗೂ ಖಂಡನೀಯ ಎಂದು ಕುಟುಕಿದ್ದಾರೆ.

ಜಗನ್‍ಮೋಹನ್‍ರೆಡ್ಡಿ ಸಹೋದರಿ ಶರ್ಮಿಳಾಗೆ ಕಾಂಗ್ರೆಸ್ ಗಾಳ

ಆದ್ಯತಾ ಪಟ್ಟಿಯನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಪೊಲೀಸರು, ನಿರ್ಜೀವ ಪ್ರಕರಣಕ್ಕೆ ವಿಶೇಷ ತಂಡ ರಚಿಸಿರುವುದು ಹಾಸ್ಯಾಸ್ಪದವಾಗಿದೆ. ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದವರು ಲಾಠಿ ಪ್ರಹಾರ ಮಾಡುವುದು ರಾಮ ಭಕ್ತರಿಗೆ ಮಾಡುವ ಅವಮಾನ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಹಿಂದೂ ಸಮಾಜಕ್ಕೆ ಅವಮಾನ ಮಾಡುತ್ತಲೇ ಬಂದಿರುವ ಕಾಂಗ್ರೆಸ್, ಈಗ ಶ್ರೀರಾಮಚಂದ್ರರನ್ನು ಇತರರಿಗೆ ಹೋಲಿಸಿ ಮತ್ತೊಮ್ಮೆ ಹಿಂದೂ ಸಮಾಜಕ್ಕೆ ಅವಮಾನಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

RELATED ARTICLES

Latest News