ಬೆಂಗಳೂರು,ಡಿ.28- ಸ್ವಪಕ್ಷೀಯರ ವಿರುದ್ಧವೇ ಪದೇಪದೇ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ಸೃಷ್ಟಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಅಮಾನತುಪಡಿಸುವ ಸಾಧ್ಯತೆಯಿದೆ. ನಿರಂತರವಾಗಿ ಪಕ್ಷದ ವಿರುದ್ಧ ಟೀಕೆ ಮಾಡುತ್ತಾ ವಿರೋಧ ಪಕ್ಷದವರಿಗೆ ಅಸ್ತ್ರ ನೀಡುತ್ತಿರುವ ಯತ್ನಾಳ್ ಹೇಳಿಕೆಯನ್ನು ರಾಜ್ಯ ಬಿಜೆಪಿ ಘಟಕ ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೇಂದ್ರ ಬಿಜೆಪಿ ನಾಯಕರಿಗೆ ಶಿಫಾರಸ್ಸು ಮಾಡಲು ಮುಂದಾಗಿದೆ.
ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಬೇರೆಯವರು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆಯಿದೆ ಎಂಬುದನ್ನು ಮನಗಂಡು ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಯತ್ನಾಳ್ ಮೂಲಕವೇ ನೀಡಲಾಗುತ್ತದೆ.
ಅಮಾನತು ಮಾಡುವ ಮುನ್ನ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ನೋಟಿಸ್‍ಗೆ ಸಮರ್ಪಕ ಉತ್ತರ ಬಾರದಿದ್ದರೆ ಪಕ್ಷದಿಂದ ಅಮಾನತು ಮಾಡಲು ನಿರ್ಣಯವನ್ನು ರಾಜ್ಯಘಟಕ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನಾಳೆ ಇತರರು ಕೂಡ ಇದೇ ಹಾದಿಯನ್ನು ತುಳಿಯುವ ಸಾಧ್ಯತೆ ಇರುವುದರಿಂದ ಭಿನ್ನಮತ ಉಲ್ಬಣಗೊಳ್ಳುವ ಮೊದಲೇ ಕಡಿವಾಣ ಹಾಕಲು ಮುಂದಾಗಿದೆ.
ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸುವತ್ತ ಬಿಜೆಪಿ ಹೆಜ್ಜೆ ಹಾಕುತ್ತಿದ್ದು, ಯತ್ನಾಳ್ ಹೇಳಿಕೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡಗಳು ಹೆಚ್ಚಾಗುತ್ತಿವೆ.
ಮಧ್ಯಪ್ರದೇಶದಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ : 12 ಮಂದಿ ಸಜೀವ ದಹನ
ಆಕಾಂಕ್ಷಿಯಾಗಿದ್ದ ಯತ್ನಾಳ್ :
ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ಶಾಸಕರು. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇರ ಹಾಗೂ ತೀಕ್ಷ್ಣ ನಡೆ ನುಡಿಗಳು ಇದೀಗ ಬಿಜೆಪಿ ನಾಯಕರಿಗೇ ತಲೆನೋವಾಗಿ ಪರಿಣಮಿಸಿದ್ದಾರೆ. ಬಿಜೆಪಿಯ ಶಿಸ್ತು ಚೌಕಟ್ಟನ್ನು ಮೀರಿ ಪದೇ ಪದೇ ನೀಡುತ್ತಿರುವ ಹೇಳಿಕೆಗಳು, ಕಠಿಣ ಪದಗಳ ಟೀಕೆ ಹಾಗೂ ಆರೋಪಗಳು ಕಮಲ ನಾಯಕರಿಗೆ ಇರುಸು ಮುರುಸು ತಂದೊಡ್ಡುತ್ತಿದೆ. ಕ್ರಿಟಿಕಲ್ ಇನ್‍ಸೈಡರ್ ಯತ್ನಾಳ್ ನಿಭಾಯಿಸುವುದು ಕೂಡ ಕಮಲ ನಾಯಕರಿಗೆ ಸವಾಲಿನ ಸಂಗತಿಯಾಗಿದೆ.
ಹಿಂದುತ್ವವಾದಿಯಾಗಿರುವ ಯತ್ನಾಳ್ ತಮ್ಮ ತೀಕ್ಷ್ಣ ಪದಗಳ ಬಳಕೆ ಹಾಗೂ ನೇರ ಮಾತುಗಳಿಂದಲೇ ಪ್ರಸಿದ್ಧಿ ಗಳಿಸಿದವರು. ವಿರೋಧ ಪಕ್ಷಗಳ ನಾಯಕರ ವಿರುದ್ಧ ಮಾತ್ರವಲ್ಲ ಸಮಯ ಸಂದರ್ಭ ಬಂದಾಗ ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿಡಿದು ನಿಂತವರು. ಬಿಜೆಪಿ ಪಕ್ಷದ ಶಿಸ್ತು ಚೌಕಟ್ಟನನ್ನು ಮೀರಲು ಇತರ ನಾಯಕರು ಹಿಂದು ಮುಂದು ನೋಡಿದರೆ, ಯತ್ನಾಳ್ ಮಾತ್ರ ಅದ್ಯಾವುದಕ್ಕೂ ಕ್ಯಾರೇ ಅನ್ನದೆ ತಮಗೆ ಹೇಳಬೇಕಾಗಿರುವುದನ್ನು ಹೇಳುವ ವ್ಯಕ್ತಿತ್ವ ಹೊಂದಿರುವವರು. ಆದರೆ ಇವರ ಈ ನಡವಳಿಕೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದೆ.
ಒಂದು ಕಾಲದಲ್ಲಿ ಬಿಎಸ್‍ವೈ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ ಯತ್ನಾಳ್ ಹೈಕಮಾಂಡನ್ನು ಎದುರು ಹಾಕಿಕೊಂಡಿದ್ದರು. ಮಳೆ ಹಾನಿ ಪರಿಹಾರ ವಿಳಂಬ ವಿಚಾರವಾಗಿ ಬಿಎಸ್‍ವೈ ಪರವಾಗಿ ಕೇಂದ್ರದ ವಿರುದ್ಧವೇ ಮಾತನಾಡಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ವರಸೆಯನ್ನು ಬದಲಾವಣೆ ಮಾಡಿಕೊಂಡ ಯತ್ನಾಳ್ ಮಾಜಿ ಸಿಎಂ ಬಿಎಸ್‍ವೈ ವಿರುದ್ಧ ಮಾತನಾಡಲು ಆರಂಭಿಸಿದರು.
ಬಿಎಸ್‍ವೈ ಸಂಪುಟದಲ್ಲಿ ಯತ್ನಾಳ್‍ಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿತ್ತು. ಇದೇ ಸಂದರ್ಭದಲ್ಲಿ ಯತ್ನಾಳ್ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದರು. ಅದರಲ್ಲೂ ಬಿಎಸ್‍ವೈ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು.
ಆನ್‍ಲೈನ್ ವಂಚನೆ ಸಂಸ್ಥೆಗಳ 278 ಕೋಟಿ ರೂ. ಆಸ್ತಿ ಜಪ್ತಿ
ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರ ಆಗುವ ವಿಶ್ವಾಸ ಇದೆ ಎಂಬ ಹೇಳಿಕೆ ನೀಡುವ ಮೂಲಕ ಅಂದಿನ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದರು.
ಬಿಎಸ್‍ವೈ ವಿರುದ್ಧ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಸರಣಿ ಭ್ರಷ್ಟಾಚಾರದ ಆರೋಪ ಮಾಡಿದ್ದ ಯತ್ನಾಳ್‍ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ನೋಟಿಸ್‍ಗೆ ಯತ್ನಾಳ್ ಉತ್ತರವನ್ನೂ ನೀಡಿದ್ದರು. ಆದರೆ ನೋಟಿಸ್ ನೀಡಿದ ಬಳಿಕವೂ ಅವರ ವಾಗ್ದಾಳಿ ಮುಂದುವರಿದಿತ್ತು. ಅಷ್ಟೇ ಯಾಕೆ ಬಿಎಸ್‍ವೈ ರಾಜೀನಾಮೆಯ ಬಳಿಕಯೂ ಅವರ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಯತ್ನಾಳ್ ನಿರಂತರ ಆರೋಪ ಮುಂದುವರಿಸಿದ್ದರು.
ಪಕ್ಷಕ್ಕೆ ಪದೇ ಪದೇ ಮುಜುಗರ :
ಶಾಸಕ ಯತ್ನಾಳ್ ನಡೆ ಬಿಜೆಪಿ ಪಕ್ಷಕ್ಕೆ ಪದೇ ಪದೇ ಮುಜುಗರ ಸೃಷ್ಟಿ ಮಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಯತ್ನಾಳ್ ಸ್ವಪಕ್ಷದ ವಿರುದ್ಧವೇ ಗುಡುಗುತ್ತಿರುವುದು ಸಹಜವಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ. ರಾಜ್ಯ ಮುಖಂಡರ ಮಾತಿಗೆ ಬಗ್ಗದ ಯತ್ನಾಳ್ ಅವರಿಗೆ ಕೇಂದ್ರದ ಮೂಲಕ ಬಿಸಿ ಮುಟ್ಟಿಸುವ ಪ್ರಯತ್ನವನ್ನು ರಾಜ್ಯ ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಯಶಸ್ಸು ಕಾಣುತ್ತಾರಾ ಎಂಬುದು ಸದ್ಯದ ಕುತೂಹಲ.