ಬೆಂಗಳೂರು,ಮೇ 13- ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ನ ಜೊತೆ ಆತೀಯ ಸಖ್ಯ ಹೊಂದಿರುವ ಬಿಜೆಪಿ ಶಾಸಕರು ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿ ಮಾಡಿ ಗಮನ ಸೆಳೆದರು.
ಯಶವಂತಪುರದ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಯಲ್ಲಾಪುರ ಕ್ಷೇತ್ರದ ಅರೆಬೈಲು ಶಿವರಾಂ ಹೆಬ್ಬಾರ್ ಇಬ್ಬರೂ ಇಂದು ಬೆಳಿಗ್ಗೆ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ರವರ ಮನೆಗೆ ಭೇಟಿ ನೀಡಿದರು. ಈ ವೇಳೆ ರಾಜಕೀಯವಾಗಿ ಮಹತ್ವದ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದ 17 ಶಾಸಕರ ಪೈಕಿ ಪುನರ್ ಆಯ್ಕೆಯಾಗಿರುವ ಇನ್ನೂ ಕೆಲವರು ಕಾಂಗ್ರೆಸ್‌ನತ್ತ ಮರಳಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್‌ನ ಜೊತೆ ಆತೀಯ ಸಂಬಂಧ ರೂಢಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡದೇ ತಟಸ್ಥವಾಗಿ ಉಳಿದಿದ್ದರು. ಇನ್ನೂ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರು ಎಂಬ ಮಾಹಿತಿಗಳು ಇವೆ. ಚುನಾವಣೆಯ ಬಳಿಕ ಈ ಇಬ್ಬರೂ ಶಾಸಕರು ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಲಭ್ಯವಿರುವ ಈವರೆಗಿನ ಮಾಹಿತಿ ಪ್ರಕಾರ, ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್‌ರವರು ಬಿಜೆಪಿಯಲ್ಲೇ ಮುಂದುವರೆಯಲಿದ್ದಾರೆ. ಆದರೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟು ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಬಿಜೆಪಿ ನಾಯಕರು ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ ರಾಜಕೀಯ ಬೆಳವಣಿಗೆಯಾಗುತ್ತಿದ್ದು, ಜೆಡಿಎಸ್, ಬಿಜೆಪಿಯಲ್ಲಿರುವ ಬಹಳಷ್ಟು ಶಾಸಕರು ಕಾಂಗ್ರೆಸ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿಕೊಂಡು ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.