Tuesday, October 8, 2024
Homeರಾಜ್ಯಇಂದು ಬೆಳಗಾವಿಗೆ ಜೆ.ಪಿ.ನಡ್ಡಾ ಭೇಟಿ : ಲೋಕಸಭಾ ಅಭ್ಯರ್ಥಿಗಳ ಕುರಿತು ಚರ್ಚೆ

ಇಂದು ಬೆಳಗಾವಿಗೆ ಜೆ.ಪಿ.ನಡ್ಡಾ ಭೇಟಿ : ಲೋಕಸಭಾ ಅಭ್ಯರ್ಥಿಗಳ ಕುರಿತು ಚರ್ಚೆ

ಬೆಂಗಳೂರು,ಮಾ.4-ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಆಗಮಿಸುತ್ತಿದ್ದು, ನಾಲ್ಕು ಜಿಲ್ಲೆಗಳ ಪ್ರಮುಖರ ಜೊತೆ ಚರ್ಚೆ ನಡೆಸಲಿದ್ದಾರೆ.
ಬೆಳಗಾವಿಯ ವೆಲ್‍ಕಮ್ ಐಟಿಸಿ ಹೋಟೆಲ್‍ನಲ್ಲಿ ರಾತ್ರಿ 9ಕ್ಕೆ ನಡೆಯಲಿರುವ ಈ ಸಭೆಗೆ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖರ ಸಭೆ ನಡೆಸಲಾಗುತ್ತದೆ.

ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೋರ್ ಕಮಿಟಿ ಸದಸ್ಯರು, ನಾಲ್ಕು ಜಿಲ್ಲೆಗಳ ಪ್ರಮುಖರು ಭಾಗಿಯಾಗಲಿದ್ದಾರೆ. ಜೊತೆಗೆ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಟಿಕೆಟ್ ಆಕಾಂಕ್ಷಿಗಳನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ.

ನಾಲ್ಕು ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯವನ್ನು ಪಡೆಯಲಿರುವ ನಡ್ಡಾ ನಂತರ ಪಕ್ಷದ ಚುನಾವಣಾ ಸಮಿತಿಗೆ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ, ಚಿಕ್ಕೋಡಿ, ವಿಜಾಪುರ ಹಾಗೂ ಬಾಗಲಕೋಟೆ ಕ್ಷೇತ್ರಗಳಿಗೆ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಸರ್ವಸಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಸಭೆಯನ್ನು ನಡೆಸಲಾಗುತ್ತದೆ.

ನಾಳೆ ಬೆಳಗ್ಗೆ 11 ಗಂಟೆಗೆ ಚಿಕ್ಕೋಡಿಯಲ್ಲಿ ಬಿಜೆಪಿ ಬೂತ್ ಮೇಲ್ಪಟ್ಟ ಕಾರ್ಯಕರ್ತರ ಸಭೆ ನಡೆಯಲಿದೆ. ಸಂಜೆ 4.30ಕ್ಕೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ಪ್ರಬುದ್ಧರ ಸಭೆಯಲ್ಲಿ ವೈದ್ಯರು, ಉದ್ಯಮಿಗಳು, ವಕೀಲರು, ಇಂಜಿನಿಯರ್, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾವಿರಾರು ಜನರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವುದು ಲೋಕಸಭಾ ಚುನಾವಣೆಯ ತಯಾರಿ, ಮತ್ತೆ ಸಂಘಟನೆಯ ದೃಷ್ಟಿಕೋನದಿಂದ ಈ ಸಭೆ ನಡೆಯಲಿದೆ.

ಈ ವೇಳೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಕೆಲಸಗಳನ್ನು ವಿಸ್ತೃತವಾಗಿ ತಿಳಿಸಲಾಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಪ್ರಥಮ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುವ ಬಗ್ಗೆ ಸಭೆಯಲ್ಲಿ ಜೆ.ಪಿ.ನಡ್ಡಾ ಮಾತನಾಡಲಿದ್ದಾರೆ.

RELATED ARTICLES

Latest News