Sunday, April 28, 2024
Homeರಾಜ್ಯವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಚಪ್ಪಾಳೆ ಹೊಡೆದು, ಭಜನೆ ಮಾಡಿ ಬಿಜೆಪಿ ಪ್ರತಿಭಟನೆ

ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಚಪ್ಪಾಳೆ ಹೊಡೆದು, ಭಜನೆ ಮಾಡಿ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಫೆ.29- ರಾಜ್ಯಸಭೆ ಚುನಾವಣಾ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಿಲ್ಲ ಎಂದು ಆರೋಪಿಸಿ ಸರ್ಕಾರದ ಉತ್ತರಕ್ಕೆ ತೃಪ್ತರಾಗದೆ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿಂದು ಚಪ್ಪಾಳೆ ಬಡಿದು ಭಜನೆ ಮಾಡುವ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ಶಾಸಕರ ಧರಣಿಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಒಂದೆಡೆ ಉತ್ತರ ನೀಡುತ್ತಿದ್ದರೆ, ಮತ್ತೊಂದೆಡೆ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕರು ವಿವಿಧ ರೀತಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ವಲ್ಪ ಹೊತ್ತಿನ ನಂತರ ಬಾವಿಯಲ್ಲಿ ಸುತ್ತುವರೆಯುತ್ತಾ, ಚಪ್ಪಾಳೆ ಬಡಿಯುತ್ತಾ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾಗದಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದರು. ಬಿಜೆಪಿ ಶಾಸಕರಿಗೆ ಬೆಂಬಲ ನೀಡಿ ಧರಣಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಶಾಸಕರು ಮಾತ್ರ ಮೌನವಾಗಿದ್ದರು.

ಭಜನೆ ರೀತಿ ಚಪ್ಪಾಳೆ ತಟ್ಟುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಸಭೆ ಚುನಾವಣೆಯಲ್ಲಿ ಅಡ್ಡ ಮತ ಹಾಕಿದ್ದನ್ನು ಮರೆಮಾಚಲು ನಾಟಕವಾಡುತ್ತಿದ್ದಾರೆ. ಇಲ್ಲಿ ಭಜನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬರು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರೆ ಇನ್ನೊಬ್ಬ ಬಿಜೆಪಿ ಶಾಸಕರು ಮತದಾನ ಮಾಡದೆ ಗೈರು ಹಾಜರಾಗಿದ್ದಾರೆ. ಆದರೆ ಇಲ್ಲಿ ಭಜನೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಶಾಸಕರು ಬಾವಿಯಲ್ಲಿಲ್ಲ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿದ್ದಾರೆ ಅನಿಸುತ್ತಿದೆ ಎಂದರು. ಮುಖ್ಯಮಂತ್ರಿ ಉತ್ತರ ನೀಡುತ್ತಿದ್ದಂತೆ ಬಿಜೆಪಿ ಶಾಸಕರು ಧರಣಿ ನಡೆಸಿ ಗದ್ದಲ ಎಬ್ಬಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಲೇ ಇದ್ದರು.

RELATED ARTICLES

Latest News