Thursday, May 2, 2024
Homeರಾಜ್ಯಬಿಜೆಪಿ ನಾಯಕರ ವಿರುದ್ಧ ದಿನೇಶ್‍ ಗುಂಡೂರಾವ್ ಅಸಮಾಧಾನ

ಬಿಜೆಪಿ ನಾಯಕರ ವಿರುದ್ಧ ದಿನೇಶ್‍ ಗುಂಡೂರಾವ್ ಅಸಮಾಧಾನ

ಹುಬ್ಬಳ್ಳಿ,ಜ.6- ಬಿಜೆಪಿಯವರಿಗೆ ನೈಜ ಸಮಸ್ಯೆಗಳು ಬೇಕಿಲ್ಲ. ಅದಕ್ಕಾಗಿ ಒಬ್ಬ ವ್ಯಕ್ತಿಯ ಬಂಧನವನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಜನರಿಗೆ ಇದರ ಹಿಂದಿನ ಕುತಂತ್ರಗಳು ಅರ್ಥವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದೇ ರೀತಿಯ ವೈಯಕ್ತಿಕ ಹಾಗೂ ಭಾವನಾತ್ಮಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ವಿಧಾನಸಭೆ ಚುನಾವಣೆಯನ್ನು ಎದುರಿಸಿದರು. ಅದಕ್ಕೆ ಜನ ತಕ್ಕ ಪಾಠ ಕಲಿಸಿದರು. ಆದರೂ ಬದಲಾಗದ ಬಿಜೆಪಿಯವರು ಮತ್ತೆ ಭಾವನಾತ್ಮಕ ವಿಚಾರಗಳಿಗೆ ಜೋತು ಬಿದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಇದಕ್ಕಾಗಿ ಬೆಲೆ ತೆರುತ್ತಾರೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿನ ಶ್ರೀಕಾಂತ್ ಪೂಜಾರ್ ಮೇಲಿದ್ದ ರೌಡಿಪಟ್ಟಿಯನ್ನು ಕೈಬಿಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಬಾಕಿ ಇದ್ದ ಪ್ರಕರಣಗಳ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ. ಬಿಜೆಪಿಯವರು ಗಂಭೀರ ಸಮಸ್ಯೆಗಳನ್ನು ದಾರಿ ತಪ್ಪಿಸಲು ಕರಸೇವಕರ ಬಂಧನ ಎಂಬ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದರು.

ಪಿಎಸ್‍ಎಲ್‍ವಿ ಎಕ್ಸ್‌ಪೋಸ್ಯಾಟ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ : ಇಸ್ರೋ ಮುಖ್ಯಸ್ಥ ಸೋಮನಾಥ್

ಜಿಎಸ್‍ಟಿ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಬರಪರಿಹಾರಕ್ಕೆ ಆರ್ಥಿಕ ನೆರವು ಸಿಕ್ಕಿಲ್ಲ. ವಿವಿಧ ಯೋಜನೆಗಳಡಿ ರಾಜ್ಯಕ್ಕೆ ಸಿಗಬೇಕಾದ ಪಾಲು ದೊರೆಯುತ್ತಿಲ್ಲ. ಇಂತಹ ಗಂಭೀರ ವಿಚಾರಗಳನ್ನು ಮರೆಮಾಚಲು ಧರ್ಮ, ದೇವರು ಎಂಬ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಮತ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನರಿಗೆ ಇದು ಅರ್ಥವಾಗುತ್ತದೆ ಎಂದು ಹೇಳಿದರು.

ಒಬ್ಬ ರೌಡಿಶೀಟರ್‍ನನ್ನು ಸಮರ್ಥಿಸಿಕೊಂಡು, ಭಾವನೆ ಕೆರಳಿಸಿ ಜನರ ಬದುಕಿನ ಸಮಸ್ಯೆಗಳನ್ನು ಕಡೆಗಣಿಸುತ್ತಿರುವ ಬಿಜೆಪಿಯನ್ನು ಜನ ಕ್ಷಮಿಸುವುದಿಲ್ಲ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೈಗೆತ್ತಿಕೊಳ್ಳಿ. 5 ಸಾವಿರ ಕೋಟಿ ರೂ.ಗಳ ಅನುದಾನ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಭರವಸೆ ನೀಡಿದರು. ಆದರೆ ಈಗ ಹಣ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಗುಜರಾತ್‍ಗೆ ಹೆಚ್ಚು ಹಣ ನೀಡುತ್ತಿದ್ದಾರೆ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಿ. ಅದರ ಬದಲು ಭಾವನಾತ್ಮಕ ವಿಚಾರಗಳ ಪ್ರಸ್ತಾಪ ಅನಗತ್ಯ. ಹಿಂದೂ ಧರ್ಮ ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿಯೊಂದೂ ಗ್ರಾಮದಲ್ಲೂ ಶ್ರೀ ರಾಮನ ದೇವಸ್ಥಾನವಿದೆ. ಬಿಜೆಪಿ ಇಲ್ಲದೇ ಇದ್ದಾಗಲೂ ದೇವಸ್ಥಾನದ ನಿರ್ಮಾಣವಾಗಿದೆ. ಪೂಜೆ ನಡೆಯುತ್ತಿದೆ. ಅಯೋಧ್ಯೆಯ ರಾಮಮಂದಿರವೊಂದೇ ದೇಶದ ವಿಚಾರವಲ್ಲ ಎಂದು ಹೇಳಿದರು.

ಧರ್ಮ ಮತ್ತು ದೇವರನ್ನು ಒಂದು ಪಕ್ಷಕ್ಕೆ ದತ್ತು ಕೊಡಲು ಸಾಧ್ಯವಿಲ್ಲ. ಬಿಜೆಪಿಯವರು ಇದ್ದರೆ ಮಾತ್ರ ಹಿಂದು, ಇಲ್ಲವಾದರೆ ಹಿಂದೂವಿರೋಧಿಗಳು ಎಂಬುದು ಹಾಸ್ಯಾಸ್ಪದ. ಧರ್ಮ ಸಂಪೂರ್ಣ ವೈಯಕ್ತಿಕ. ನಮ್ಮಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಮೊದಲಿನಿಂದಲೂ ಉತ್ತಮ ಉದಾಹರಣೆಗಳಿವೆ ಎಂದರು.

ನಾವು ಯಾವ ಧರ್ಮ ಪಾಲಿಸಬೇಕು. ದೇಶ ಹೇಗೆ ನಡೆಯಬೇಕು ಎಂಬ ಎಲ್ಲಾ ವಿಚಾರಗಳ ಬಗ್ಗೆಯೂ ಸಂವಿಧಾನದಲ್ಲಿ ಸ್ಪಷ್ಟತೆ ಇದೆ. ಬಿಜೆಪಿಯವರು ಹೇಳಿದ್ದನ್ನೆಲ್ಲಾ ಕೇಳಲಾಗುವುದಿಲ್ಲ ಎಂದು ಹೇಳಿದರು.
ಕೇರಳ, ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇಲ್ಲಿ ನಾವು ಹೆಚ್ಚು ಪರೀಕ್ಷೆಗಳನ್ನು ಮಾಡುತ್ತಿದ್ದಾರೆ. ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುಂಜಾಗ್ರತೆ ವಹಿಸಿದ್ದೇವೆ.

ಕೋವಿಡ್ ಮತ್ತು ಅದರ ರೂಪಾಂತರಿಗಳು ವಿಶ್ವಾದ್ಯಂತ ಹರಡುತ್ತಿವೆ. ಆತಂಕಪಡುವ ಅಗತ್ಯವಿಲ್ಲ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯರು ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು.

ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ : ಸಿಎಂ ಸಿದ್ದರಾಮಯ್ಯ

ಧಾರವಾಡ ಜಿಲ್ಲೆಯಲ್ಲಿ 9 ತಾಲೂಕು, ಒಂದು ಜಿಲ್ಲಾಸ್ಪತ್ರೆ ಸೇರಿ ಒಟ್ಟು 10 ಆರೋಗ್ಯ ಕೇಂದ್ರಗಳಲ್ಲಿ ಟೆಲಿ ಐಸಿಯು ಸೌಲಭ್ಯವನ್ನು ಉದ್ಘಾಟಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲೂ ಟೆಲಿ ಸೌಲಭ್ಯದ ಮೂಲಕ ತಜ್ಞ ವೈದ್ಯರ ಸಲಹೆ, ಸೂಚನೆ ಮತ್ತು ಚಿಕಿತ್ಸೆ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

RELATED ARTICLES

Latest News