Sunday, December 1, 2024
Homeರಾಜ್ಯಹೆಬ್ಬಾರ್-ಎಸ್.ಟಿ.ಸೋಮಶೇಖರ್‌ಗೆ ಬಿಜೆಪಿ ನೋಟಿಸ್

ಹೆಬ್ಬಾರ್-ಎಸ್.ಟಿ.ಸೋಮಶೇಖರ್‌ಗೆ ಬಿಜೆಪಿ ನೋಟಿಸ್

ಬೆಂಗಳೂರು,ಮಾ.2- ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವ ಕುರಿತು ಶಾಸಕರಾದ ಎಸ್.ಟಿ.ಸೋಮ ಶೇಖರ್ ಮತ್ತು ಶಿವರಾಮ್ ಹೆಬ್ಬಾರ್‍ಗೆ ಬಿಜೆಪಿ ನೋಡಟಿಸ್ ಜಾರಿ ಮಾಡಿದೆ. ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡರ್ ಪಾಟೀಲ್ ಅವರು ಈ ಇಬ್ಬರು ಶಾಸಕರಿಗೆ ಕಾರಣ ಕೇಳಿ ಮಾ.5ರೊಳಗೆ ಉತ್ತರ ನೀಡಬೇಕೆಂದು ನೋಟಿಸ್ ಕಳುಹಿಸಿದ್ದಾರೆ.

ಸಂವಿಧಾನದ 10ನೇ ಶೆಡ್ಯೂಲ್‍ನಡಿ ಬರುವ ಪಕ್ಷಾಂತರ ಮತ್ತು ಅನರ್ಹತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಕಳೆದ ಫೆ.26ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆಂಬ ಆರೋಪವಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಮತ ಹಾಕುವಂತೆ ಬಿಜೆಪಿ ವಿಪ್ ಜಾರಿ ಮಾಡಿತ್ತು. ಇದನ್ನು ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆಂಬ ಆರೋಪವಿದೆ.

ಬಿಜೆಪಿ ಚುನಾವಣಾ ಏಜೆಂಟರಾಗಿದ್ದ ಸುನೀಲ್‍ಕುಮಾರ್ ಅವರಿಗೆ ಮತದಾನಕ್ಕೂ ಮುನ್ನ ತೋರಿಸಿಯೇ ಅಡ್ಡ ಮತದಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅನಾರೋಗ್ಯದ ಕಾರಣ ಮತದಾನಕ್ಕೆ ಬಾರದೆ ಗೈರು ಹಾಜರಾಗಿದ್ದರು. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಮತದಾನ ಮಾಡಲು ಹೋಗಿರಲಿಲ್ಲ. ಇದರಲ್ಲಿ ಯಾವುದೇ ದುರದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಆದರೆ ಇದನ್ನು ಒಪ್ಪದ ಬಿಜೆಪಿ ಮತದಾನ ಹಿಂದಿನ ದಿನ ಸೋಮವಾರ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರ ಕಾರಿನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದ ಹೆಬ್ಬಾಳ ಸಮೀಪದ ಮ್ಯಾನತಾಟೆಕ್ ಪಾರ್ಕ್ ಹತ್ತಿರ ಹಿಲ್ಟನ್ ರೆಸಾರ್ಟ್‍ಗೆ ಭೇಟಿ ನೀಡಿದ್ದರೆಂಬ ಮಾತು ಕೇಳಿಬಂದಿತ್ತು. ಇದೀಗ ಈ ಇಬ್ಬರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನವನ್ನು ಅನರ್ಹಗೊಳಿಸಲು ಬಿಜೆಪಿ ಮುಂದಾಗಿದೆ.

RELATED ARTICLES

Latest News