Friday, September 20, 2024
Homeರಾಜ್ಯಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಒತ್ತಾಯಿಸಿ ನಾಳೆ ಬಿಜೆಪಿ ರಾಜ್ಯಾದ್ಯಂತ ಹೋರಾಟ

ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಒತ್ತಾಯಿಸಿ ನಾಳೆ ಬಿಜೆಪಿ ರಾಜ್ಯಾದ್ಯಂತ ಹೋರಾಟ

BJP statewide protest tomorrow demanding CM Siddaramaiah's resignation

ಬೆಂಗಳೂರು,ಆ.21- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ನಾಳೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ಬಿಜೆಪಿಯ ಎಲ್ಲಾ ಮೋರ್ಚಗಳಿಗೆ ಕರೆ ನೀಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು, ಪದಾಧಿಕಾರಿಗಳು ಸೇರಿದಂತೆ ಬೃಹತ್‌ ಪ್ರಮಾಣದಲ್ಲಿ ಸೇರಬೇಕೆಂದು ಸೂಚಿಸಲಾಗಿದೆ.

ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಈಗ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿದೆ. ಕಾಂಗ್ರೆಸ್‌‍ ರಾಜ್ಯಪಾಲರು ಅಭಿಯೋಜನೆಗೆ ನೀಡಿದ್ದನ್ನು ವಿರೋಧಿಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ನಾಳೆ ರಾಜ್ಯಾದ್ಯಂತ ಬೀದಿಗಿಳಿಯಲಿದೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ನೇರವಾಗಿ ಫಲಾನುಭವಿಗಳಾಗಿದ್ದಾರೆ. ಅವರ ಮೇಲೆ ಸೂಕ್ತ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಕಾರ್ಯಾಲಯದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಪ್ರಾಸಿಕ್ಯೂಷನ್‌ ವಿಧಾನದ ಸಂವಿಧಾನದಡಿಯಲ್ಲೇ ಕಾನೂನುಬದ್ಧವಾಗಿ ಅನುಮತಿ ನೀಡಿದ್ದಾರೆ.ಆದರೆ ಕಾಂಗ್ರೆಸ್‌‍ ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಆರೋಪ ಹೊತ್ತಿರುವ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವುದನ್ನು ಬಿಜೆಪಿ ವಿರೋಧಿಸಿದೆ.

ಅಲ್ಲದೆ, ಥಾವರ್‌ಚಂದ್‌ ಗೆಹ್ಲೋಟ್‌ ದಲಿತ ಸಮುದಾಯಕ್ಕೆ ಸೇರಿರುವುದರಿಂದ ಅರವನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ. ಸಚಿವ ಜಮೀರ್‌ ಅಹಮದ್‌, ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜ ಸೇರಿದಂತೆ ಅನೇಕರು ಅವರ ವಿರುದ್ಧ ಮನಸ್ಸಿಗೆ ಬಂದಂತೆ ಟೀಕಿಸಿದ್ದಾರೆ. ಇದರ ವಿರುದ್ಧವೂ ಹೋರಾಟ ನಡೆಸಬೇಕೆಂದು ಬಿಜೆಪಿ ಘಟಕ ಸೂಚನೆ ನೀಡಿದೆ.ಪ್ರತಿಭಟನೆ ಸಂದರ್ಭದಲ್ಲಿ ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಶಾಂತಿಯುತವಾಗಿ ನಡೆಸಬೇಕೆಂದು ನಿರ್ದೇಶಿಸಲಾಗಿದೆ.

RELATED ARTICLES

Latest News