Friday, November 22, 2024
Homeರಾಜಕೀಯ | Politicsಚಿಕ್ಕಬಳ್ಳಾಪುರದಿಂದ ಅಲೋಕ್ ವಿಶ್ವನಾಥ್‍ಗೆ ಬಿಜೆಪಿ ಟಿಕೆಟ್ ಸಾಧ್ಯತೆ

ಚಿಕ್ಕಬಳ್ಳಾಪುರದಿಂದ ಅಲೋಕ್ ವಿಶ್ವನಾಥ್‍ಗೆ ಬಿಜೆಪಿ ಟಿಕೆಟ್ ಸಾಧ್ಯತೆ

ಬೆಂಗಳೂರು,ಮಾ.12- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್‍ಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ.ಅಲೋಕ್ ವಿಶ್ವನಾಥ್‍ಗೆ ಟಿಕೆಟ್ ನೀಡಲೇಬೇಕೆಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪಟ್ಟು ಹಿಡಿದಿದ್ದಾರೆ.

ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಈ ಬಾರಿ ಅಲೋಕ್ ವಿಶ್ವನಾಥ್‍ಗೆ ಟಿಕೆಟ್ ಮೊದಲ ಪಟ್ಟಿಯಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಈವರೆಗೂ ಈ ಕ್ಷೇತ್ರದಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್‍ಗೆ ಟಿಕೆಟ್ ಸಿಗಬಹುದೆಂಬ ವದಂತಿಗಳು ಹಬ್ಬಿದ್ದವು. ಆದರೆ ಅವರಿಗೆ ಟಿಕೆಟ್ ನೀಡಲು ಬಿಎಸ್‍ವೈ, ವಿಜಯೇಂದ್ರ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಘಟಕ, ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿರುವುದು ಭಾರೀ ಹಿನ್ನಡೆಯಾಗಿದೆ.

ಸುಧಾಕರ್‍ಗೆ ಜಿಲ್ಲೆಯಲ್ಲಿ ವಿರೋ ಅಲೆ ಸಾಕಷ್ಟು ಇರುವುದರಿಂದ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಬೇರೊಬ್ಬರಿಗೆ ಟಿಕೆಟ್ ನೀಡಬೇಕೆಂದು ಅಭಿಪ್ರಾಯವನ್ನು ಜಿಲ್ಲಾ ಘಟಕ ವರಿಷ್ಠರಿಗೆ ತಿಳಿಸಿದೆ. ತಮ್ಮ ಪುತ್ರನಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಹೋಗುವ ಭರವಸೆಯನ್ನು ವಿಶ್ವನಾಥ್ ವರಿಷ್ಠರಿಗೆ ನೀಡಿದ್ದಾರೆ. ಇವರ ಪರವಾಗಿ ಖುದ್ದು ಯಡಿಯೂರಪ್ಪ ಮತ್ತು ವಿಜಯೇಂದ್ರ ಬೆಂಬಲಕ್ಕೆ ನಿಂತಿರುವುದು ಟಿಕೆಟ್ ಖಾತರಿ ಎಂದು ಹೇಳಲಾಗುತ್ತಿದೆ.

ಉತ್ತಮ ಶೈಕ್ಷಣಿಕ ಹಿನ್ನಲೆಯುಳ್ಳ ಅಲೋಕ್ ವಿಶ್ವನಾಥ್, ಈ ಹಿಂದೆ ತಮ್ಮ ತಂದೆ ಸ್ರ್ಪಸುತ್ತಿದ್ದ ಯಲಹಂಕ ವಿಧಾನಸಭೆ ಚುನಾವಣೆ ವೇಳೆ ಕೆಲಸ ಮಾಡಿದ ಅನುಭವವೂ ಇದೆ. ಅಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅವರಿಗೆ ಟಿಕೆಟ್ ನೀಡಬೇಕೆಂಬ ಬೆಂಬಲವೂ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.

ಜೊತೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಬಳ್ಳಾಪುರ, ಹೊಸಕೋಟೆ, ಗೌರಿಬಿದನೂರು, ಶಿಡ್ಲಘಟ್ಟ, ನೆಲಮಂಗಲ ಸೇರಿದಂತೆ ಮತ್ತಿತರ ಕಡೆ ಈಗಾಗಲೇ ಪ್ರಚಾರವನ್ನು ಸಹ ಆರಂಭಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ವರಿಷ್ಠರು ಚಿಕ್ಕಬಳ್ಳಾಪುರದಿಂದ ಅಲೋಕ್ ವಿಶ್ವನಾಥ್‍ಗೆ ಟಿಕೆಟ್ ನೀಡುವುದು ಖಚಿತ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

RELATED ARTICLES

Latest News