ಭುವನೇಶ್ವರ,ಮೇ20- ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಲೋಕಸಭೆಯಲ್ಲಿ ತಮ್ಮ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಮತ್ತು ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಯಾವುದೇ ಶಕ್ತಿ ಅಥವಾ ಅಸ್ತಿತ್ವವಿಲ್ಲ ಎಂಬ ವಿರೋಧಿಗಳು ಸುಳ್ಳು ಸೃಷ್ಟಿಸಿದ್ದಾರೆ. ಬಿಜೆಪಿ ಈ ಬಾರಿ ಈ ಮಿಥ್ಯೆಗಳನ್ನು ಧಿಕ್ಕರಿಸಲಿದೆ ಎಂದರು.
2019ರ ಚುನಾವಣೆಯನ್ನು ನೋಡಿ. ಆಗ ದಕ್ಷಿಣದಲ್ಲಿ ಬಿಜೆಪಿಯೇ ದೊಡ್ಡ ಪಕ್ಷವಾಗಿತ್ತು. ಮತ್ತೊಮೆ, ನಾನು ಇದನ್ನು ಹೇಳುತ್ತೇನೆ. ಬಿಜೆಪಿ ದಕ್ಷಿಣ ಭಾರತದಲ್ಲಿ ಏಕೈಕ ದೊಡ್ಡ ಪಕ್ಷವಾಗಲಿದೆ ಮತ್ತು ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷವು ಈ ಬಾರಿ ದಕ್ಷಿಣ ಭಾರತದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸುವ ವಿಶ್ವಾಸದಲ್ಲಿದೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಮತ್ತು ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳು ಲೋಕಸಭೆ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ಈಗಾಗಲೇ ಮತ ಚಲಾಯಿಸಿವೆ. ಈ ರಾಜ್ಯಗಳು 130 ಸ್ಥಾನಗಳನ್ನು ಹೊಂದಿದ್ದು, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇಸರಿ ಪಕ್ಷವು ಈ ರಾಜ್ಯಗಳಿಗೆ ಕಾಲಿಡಲು ಶ್ರಮಿಸಿದೆ ಎಂದರು.
ಪ್ರಸ್ತುತ ಬಿಜೆಪಿಯು ಈ 130 ಸ್ಥಾನಗಳಲ್ಲಿ 29 ಸಂಸದರನ್ನು ಹೊಂದಿದೆ, ಇವರಲ್ಲಿ ಬಹುಪಾಲು ಕರ್ನಾಟಕದವರು. ಜನರ ಆಶೀರ್ವಾದವು ನಮನ್ನು ದಾಖಲೆ ಮುರಿಯುವ ಜನಾದೇಶಕ್ಕೆ ಕೊಂಡೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ದೇಶದ ಎಲ್ಲಾ ಭಾಗಗಳಿಂದ, ವಿಶೇಷವಾಗಿ ದಕ್ಷಿಣ ಮತ್ತು ಪೂರ್ವದಿಂದ ಹೆಚ್ಚಿನ ಸ್ಥಾನಗಳನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.