Saturday, July 13, 2024
Homeರಾಜ್ಯಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ವಾರ್ನಿಂಗ್ ಕೊಟ್ಟ ಬಿಜೆಪಿ

ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರಗೆ ವಾರ್ನಿಂಗ್ ಕೊಟ್ಟ ಬಿಜೆಪಿ

ಬೆಂಗಳೂರು,ಮಾ.29- ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಕನಿಷ್ಠ ಪದಗಳಲ್ಲಿ ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಕೆಂಡ ಕಾರಿರುವ ಬಿಜೆಪಿ ಇದೇ ರೀತಿ ಮಾತು ಮುಂದುವರೆಸಿದರೆ ದೂರು ದಾಖಲಿಸುವ ಎಚ್ಚರಿಕೆಯನ್ನು ನೀಡಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಇತಿಮಿತಿಯಲ್ಲಿ ಮಾತನಾಡಿದರೆ ಯತೀಂದ್ರಗೆ ಒಳಿತು. ಇಲ್ಲದಿದ್ದರೆ ನಾವು ಕೂಡ ಅವರಿಗೂ ಕೆಳಮಟ್ಟದ ಭಾಷೆ ಬಳಸಲು ಬರುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ತಾವು ನೀಡಿರುವ ಹೇಳಿಕೆಗೆ ತಕ್ಷಣವೇ ಯತೀಂದ್ರ ಕ್ಷಮೆಯಾಚಿಸಬೇಕು. ಇದೇ ರೀತಿ ನಾಲಿಗೆ ಹರಿದುಬಿಟ್ಟರೆ ಅವರ ಭಾಷೆಯಲ್ಲೇ ಪ್ರತ್ಯುತ್ತರ ಕೊಡುತ್ತೇವೆ ಎಂದು ಗುಡುಗಿದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯನವರ ಮಗ ಎಂಬ ಕಾರಣಕ್ಕೆ ಯತೀಂದ್ರ ರಾಷ್ಟ್ರೀಯ ನಾಯಕರ ಬಗ್ಗೆ ಮಾತಾಡಿದರೆ ದೊಡ್ಡ ವ್ಯಕ್ತಿಯಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅವರಿಗೆ ಜ್ಞಾನ ಕಡಿಮೆ ಇದೆ, ಬುದ್ಧಿ ಭ್ರಮಣೆಯಾಗಿದೆ. ಯಾರ ಬಗ್ಗೆ ಮಾತಾಡಬೇಕು ಎಂಬುದೇ ಗೊತ್ತಿಲ್ಲ. ಅಮಿತ್ ಶಾ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರು ರಾಜಕೀಯದ ಬಗ್ಗೆ ಮಾತನಾಡುವುದಕ್ಕೂ ಯೋಗ್ಯತೆ ಇಲ್ಲದ ಯತೀಂದ್ರಗೆ ಅಮಿತ್ ಶಾ ಬಗ್ಗೆ ಮಾತನಾಡುವುದು ಸೋಜಿಗ. ಯತೀಂದ್ರ ವಿರುದ್ಧ ದೂರು ದಾಖಲು ಮಾಡುತ್ತೇವೆ ಎಂದರು.

ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಮಾತನಾಡಿ, ಬೇರೆಯವರ ಬಗ್ಗೆ ಹಗುರವಾಗಿ ಮಾತಾಡುವುದು ಮತ್ತು ಬಯ್ಯುವುದನ್ನೇ ಕೆಲವರು ರಾಜಕೀಯದಲ್ಲಿ ದೊಡ್ಡತನ ಅಂದುಕೊಳ್ಳುತ್ತಾರೆ. ಅಂಥವರ ಪಾಲಿಗೆ ಯತೀಂದ್ರ ಸಿದ್ದರಾಯ್ಯ ಸೇರಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದರು.

ತಮ್ಮ ತಂದೆ ಸಿದ್ದರಾಮಯ್ಯ 14 ಬಜೆಟ್ ಮಂಡಿಸಿರುವ ಬಗ್ಗೆ ಯತೀಂದ್ರ ಹೇಳಿಕೊಳ್ಳುತ್ತಿರುತ್ತಾರೆ, ಅವರ ಸಾಧನೆ ಬಗ್ಗೆ ಮಾತಾಡಲಿ ಯಾರು ಬೇಡ ಎನ್ನುತ್ತಾರೆ. ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವರು ಯಾಕೆ ಮಾತಾಡುವುದು? ಎಂದು ಪ್ರಶ್ನಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಕಾರಕ್ಕೆ ಬರಲಿದೆ ಮತ್ತು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸದಾನಂದ ಗೌಡ ಹೇಳಿದರು. ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಯತೀಂದ್ರ ಕೀಳುಮಟ್ಟದ ಹೇಳಿಕೆ ಕೊಟ್ಡಿದ್ದಾರೆ. ಮಾತಿನ ಮೇಲೆ ನಿಗಾ ಇರಬೇಕು, ಐರನ್ ಮ್ಯಾನ್ ಅಮಿತ್ ಶಾ ಅವರು ದೇಶ ಉಳಿಸುವುದಕ್ಕೆ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಗುಂಡಾ ಅಂತಾರೆ. ತಕ್ಷಣ ಕ್ಷಮೆ ಕೇಳಬೇಕು. ತಮ್ಮಹೇಳಿಕೆ ವಾಪಸ್ ಪಡೆಯಬೇಕು. ಅಮಿತ್ ಶಾ ಅವರು ನೀಡಿರುವ ಕೊಡುಗೆಯನ್ನು ಯತೀಂದ್ರ ಪರಿವಾರ ಎಳ್ಳಷ್ಟು ಕೊಟ್ಟಿಲ್ಲ. ಸಚಿವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಸಿ.ಟಿ ರವಿ ಮಾತನಾಡಿ, ಅಪ್ಪನ ಹೆಸರಲ್ಲಿ ಅಕಾರಕ್ಕೆ ಬಂದವರು ಹೀಗೆ.. ಯತೀಂದ್ರ ಎಂದಾದರೂ ಪಕ್ಷದ ಕೆಲಸ ಮಾಡಿದ್ದಾರಾ? ಅಮಿತ್ ಶಾ 1982ರಲ್ಲಿ ಬೂತ್ ಅಧ್ಯಕ್ಷರಾಗಿದ್ದರು. ಆಗ ಇವರಪ್ಪ ಇನ್ನೂ ಎಂಎಲ್‍ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನಿಂದ ಶಾಸಕರಾದವರು ಯತೀಂದ್ರ. ಆದರೆ ನಾವು ವಿದ್ಯಾರ್ಥಿಗಳಾಗಿದ್ದಾಗಲೇ ನಾಯಕರಾಗಿದ್ದೆವು.

ನಮ್ಮ ಮೇಲೂ ಸುಳ್ಳು ಕೇಸ್ ಹಾಕಿ ಗೂಂಡಾ ಕಾಯ್ದೆ ಹಾಕಿದ್ದರು. ಹಾಗಾದ ಮಾತ್ರಕ್ಕೆ ನಾನೂ ಗುಂಡಾನಾ? ಅಪ್ಪನ ಹೆಸರಲ್ಲಿ ಅಕಾರಕ್ಕೆ ಬಂದವರಿಗೆ ಸಾಮಾನ್ಯ ಕಾರ್ಯಕರ್ತರ ಕಷ್ಟ ಹೇಗೆ ತಿಳಿಯುತ್ತದೆ? ಎಂದು ಕಿಡಿಕಾರಿದರು.ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಯತೀಂದ್ರ ಸಿದ್ದರಾಮಯ್ಯ, ಅಮಿತ್ ಶಾ ಓರ್ವ ಗೂಂಡಾ, ರೌಡಿ. ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂಥವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂಥವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.

RELATED ARTICLES

Latest News