Thursday, December 12, 2024
Homeರಾಜಕೀಯ | Politicsಯತ್ನಾಳ್ ನಡೆಯಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಹೈಕಮಾಂಡ್‌ಗೆ ಪತ್ರ

ಯತ್ನಾಳ್ ನಡೆಯಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಹೈಕಮಾಂಡ್‌ಗೆ ಪತ್ರ

BJP Workers angry over Yatnal, write to high command

ಬೆಂಗಳೂರು,ನ.28- ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಯಿಂದ ಕಾರ್ಯಕರ್ತರಿಗೆ ನೋವಾಗಿದ್ದು, ಕೂಡಲೇ ಅವರ ಬಾಯಿಗೆ ಕಡಿವಾಣ ಹಾಕಬೇಕೆಂದು ಪಕ್ಷದ ಕಾರ್ಯಕರ್ತ ಶಿವಕುಮಾರ್ ಎಂಬುವರು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರೆ.

ಮಂಡ್ಯದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಎಂಬುವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ರಕ್ತದ ಮೂಲಕ ಪತ್ರ ಬರೆದಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ತಕ್ಷಣವೇ ಶಿಸ್ತುಕ್ರಮ ಜರುಗಿಸದಿದ್ದರೆ ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಪತ್ರ ಚಳುವಳಿಯನ್ನು ಆರಂಭಿಸಿರುವ ಅವರು, ಯತ್ನಾಳ್ ಹಾಗೂ ಅವರ ತಂಡ ನಡೆಸುತ್ತಿರುವ ಜಾಗೃತಿ ಅಭಿಯಾನಕ್ಕೆ ಕಡಿವಾಣ ಹಾಕಬೇಕು. ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರ ಅನುಮತಿ ಪಡೆಯದೆ ಪಕ್ಷದ ಚಿಹ್ನೆಯನ್ನು ಬಳಸದೆ ಯಾವ ಆಧಾರದ ಮೇಲೆ ಅಭಿಯಾನ ನಡೆಸಲು ಅವಕಾಶ ಕೊಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಪಕ್ಷದ ಒಪ್ಪಿಗೆಯನ್ನು ಪಡೆಯದೆ ನಡೆಸುತ್ತಿರುವ ಈ ಅಭಿಯಾನಕ್ಕೆ ಕೂಡಲೇ ರಾಷ್ಟ್ರದ ನಾಯಕರು ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಬೇಕು. ಕರ್ನಾಟಕ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಯಾರಿಗೂ ಶೋಭೆ ತರುವುದಿಲ್ಲ ಎಂದು ಶಿವಕುಮಾರ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಅವರ ತಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಆದರೆ ಪ್ರತಿದಿನ ಯಡಿಯೂರಪ್ಪ , ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಬೆಳವಣಿಗೆ ವಿರೋಧ ಪಕ್ಷಗಳು ನಮ್ಮನ್ನು ನೋಡಿ ನಗುವಂತಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ಯತ್ನಾಳ್ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿಯ ನಿಷ್ಠಾವಂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೊಂದಿದ್ದಾರೆ. ಹೇಳಲು ಆಗದೆ, ಕೇಳಲು ಆಗದೆ ಅನೇಕರು ಪಕ್ಷಕ್ಕೆ ಬಂದಿರುವ ದುಸ್ಥಿತಿಯನ್ನು ಕಂಡು ಮರಗುತ್ತಿದ್ದಾರೆ.ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ರಾಷ್ಟ್ರೀಯ ನಾಯಕರ ಬಲಿಷ್ಠ ತಂಡ ಇರುವಾಗ ಕರ್ನಾಟಕದ ಬಗ್ಗೆ ಗಮನಹರಿಸಲು ಸಾಧ್ಯವಾಗದೇ ಇರುವುದು ಕಾರ್ಯಕರ್ತರಲ್ಲಿ ತುಂಬ ನೋವುಂಟು ಮಾಡಿದೆ. ಈಗಲೂ ಕಾಲ ಮಿಂಚಿಲ್ಲ ಕೂಡಲೇ ಮಧ್ಯಪ್ರವೇಶಿಸಿ ಯತ್ನಾಳ್ ಬಾಯಿಗೆ ಬೀಗ ಹಾಕಲು ಮುಂದಾಗುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

RELATED ARTICLES

Latest News