ಚಿಕ್ಕಮಗಳೂರು,ಡಿ.20– ಸಚಿವೆ ಲಕ್ಷಿ ಹೆಬ್ಬಾಳ್ಕರ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಂಧಿಸಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿಯ ಜಿಲ್ಲಾಧ್ಯಕ್ಷ ದೇವರ ಶೆಟ್ಟಿ ನೇತೃತ್ವದಲ್ಲಿ ನಗರ ಬಂದ್‌ಗೆ ಮನವಿ ಮಾಡುತ್ತಾ ಹನುಮಂತಪ್ಪ ಸರ್ಕಲ್ ಬಳಿ ಬಂದಾಗ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸ್ಥಳದಲ್ಲೇ ಇದ್ದು ಬಂದ್ ಅಥವಾ ಪ್ರತಿಭಟನೆ ಮಾಡಲು ಯಾವುದೇ ರೀತಿಯ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.ಬಸವನಹಳ್ಳಿ ಮುಖ್ಯ ರಸ್ತೆಯ ಸಿ.ಟಿ.ರವಿ ಮನೆಯಿಂದ ಹೊರಟ ಬಿಜೆಪಿ ಕಾರ್ಯಕರ್ತರು ನಮ ನಾಯಕ ಸಿ.ಟಿ.ರವಿ ಅವರನ್ನು ವಿನಾಕಾರಣ ಬಂಧಿಸಿದ್ದು ಅವರಿಗೆ ನ್ಯಾಯ ಒದಗಿಸಿಕೊಡಲು ಬಂದ್ ಮಾಡಿ ಬೆಂಬಲಿಸಬೇಕೆಂದು ಅಂಗಡಿಯವರಿಗೆ ಮನವಿ ಮಾಡುತ್ತಾ ಹನುಮಂತಪ್ಪ ಸರ್ಕಲ್ ಬಳಿ ಜಮಾಯಿಸಿದರು.
ಈ ವೇಳೆ ಅಲ್ಲಿಯೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮುಟೆ ಬಂದ್ ಅಥವಾ ಪ್ರತಿಭಟನೆಗೆ ಯಾವುದೇ ರೀತಿ ಅನುಮತಿ ಪಡೆಯದೇ ಇರುವುದರಿಂದ ಅವರನ್ನು ಬಂಧಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ,ನಗರಸಭೆಯ ಮಾಜಿ ಅಧ್ಯಕ್ಷ ಪುಷ್ಪರಾಜ್, ಅನ್ವರ್, ರಾಜೇಶ್, ಚಂದ್ರು ಸೇರಿದಂತೆ ಬಿಜೆಪಿ ಪ್ರಮುಖ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ನಗರದ ಹನುಮಂತಪ್ಪ ಸರ್ಕಲ್, ಮಲ್ಲಂದೂರು ಸರ್ಕಲ್, ಆಜಾದ್ ಪಾರ್ಕ್ ವೃತ, ಎಐಟಿ ಸರ್ಕಲ್, ಉಪ್ಪಳ್ಳಿ ಬಡಾವಣೆ, ರಾಮನಹಳ್ಳಿ, ಕೋಟೆ ಬಡಾವಣೆಯಲ್ಲಿ ಬಿಗಿ ಪೋಲಿಸ್ ಬಂದು ಬಸ್ತ್ ಹಾಕಲಾಗಿದೆ.
ವಾಹನ ಓಡಾಟ, ಶಾಲಾ ಕಾಲೇಜುಗಳು, ಪೆಟ್ರೋಲ್ ಬಂಕ್, ಸರ್ಕಾರಿ ಕಚೇರಿಗಳು ಎಂದಿನಂತೆ ವ್ಯವಹಾರ ನಡೆದರೆ ಬಸವನಹಳ್ಳಿ ಮುಖ್ಯ ರಸ್ತೆ, ಎಂಜಿ ರಸ್ತೆ, ಐ ಜಿ ರಸ್ತೆ ಹಾಗೂ ಕೋಟೆ ಬಡಾವಣೆಗಳಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಒಟ್ಟಾರೆ ಚಿಕ್ಕಮಗಳೂರು ನಗರ ಬೂದಿ ಮುಚ್ಚಿದ ಕೆಂಡದಂತಿದೆ.
ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು :
ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ಧ ಬಳಸಿದ್ದಾರೆ ಎಂದು ಆರೋಪಿಸಿ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಸಿ.ಟಿ.ರವಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕೆಲ ಕಾಲದ ಬಳಿಕ ಬಿಡುಗಡೆ ಮಾಡಿದರು.
ಮಹಿಳಾ ಸಚಿವರ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿರುವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸುವುದು ಮಾತ್ರವಲ್ಲದೆ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಅನ್ನು ಚಿಂತಕರ ಚಾವಡಿ ಎನ್ನಲಾಗುತ್ತದೆ. ಆದರೆ ನಾಲ್ಕ ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿರುವ ಸಿ.ಟಿ.ರವಿ ಅವರು ಅವಾಚ್ಯ ಪದ ಬಳಕೆ ಮಾಡಿರುವುದು ಬಿಜೆಪಿ ಸಂಸ್ಕೃತಿ ತೋರಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಿ.ಟಿ.ರವಿ ಅವರಿಗೆ ವಿಧಾನ ಪರಿಷತ್ನಲ್ಲಿ ಮಾತನಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸಿ.ಟಿ.ರವಿ ಅವರು ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ತೋರಿದಲ್ಲಿ ಮಹಿಳೆಯರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ನಾಯಕರು ಸಿ.ಟಿ.ರವಿ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಬಿಜೆಪಿ ಪಕ್ಷದ ಸಂಸ್ಕಾರವನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುತ್ತಿಗೆ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ಮಹಮದ್ ನಯಾಜ್, ಪ್ರಮುಖರಾದ ಮಧು, ಅಕಲ್ ಮತ್ತಿತರರಿದ್ದರು.
ಬಿಜೆಪಿಯಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ ವಿಫಲ
ಚಿಕ್ಕಮಗಳೂರು,ಡಿ.20- ಕೇಂದ್ರ ಗೃಹಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಈ ಕುತಂತ್ರದ ರೂವಾರಿಯಾಗಿದ್ದಾರೆ ಎಂದು ಬಿಜೆಪಿಯ ಕಾರ್ಯಕರ್ತರು ಮೂರ್ನಾಲ್ಕು ತಂಡಗಳು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿವೆ.
ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅಮಿತ್ ಶಾ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಯತ್ನಿಸಿದರು.ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಾಂಗ್ರೆಸ್ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಅಲ್ಲದೆ ಒಂದು ತಂಡವನ್ನು ಕಾಂಗ್ರೆಸ್ ಕಚೇರಿ ಎದುರು ವಶಕ್ಕೆ ಪಡೆದರೆ, ಕೆಲವರನ್ನು ಕಾಂಗ್ರೆಸ್ ಕಚೇರಿಯಿಂದ ನೂರು ಮೀಟರ್ ದೂರದಲ್ಲೇ ಹಾಗೂ ಇನ್ನುಳಿದವರನ್ನು ಬಿಜೆಪಿ ಕಚೇರಿ ಸಮೀಪವೇ ವಶಕ್ಕೆ ಪಡೆದಿದ್ದಾರೆ.
ಭಾರತದ ಗೃಹಮಂತ್ರಿ ಅಮಿತ್ ಷಾ ಅವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ತುಂಡರಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ದಾರಿಯುದ್ದಕ್ಕೂ ಗೃಹ ಮಂತ್ರಿಗಳ ವಿರುದ್ಧ ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ ಎಂದು ಘೋಷಣೆ ಕೂಗಿದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಭಾವಚಿತ್ರವನ್ನು ಹಿಡಿದು ರಾಹುಲ್ ಕಳ್ಳ ಎಂದು ಘೋಷಣೆ ಕೂಗಿದರು. ಈ ನಡುವೆ ಮಹಿಳಾ ಬಿಜೆಪಿ ಕಾರ್ಯಕರ್ತರು ದಿಢೀರನೆ ಕಾಂಗ್ರೆಸ್ ಕಚೇರಿಯತ್ತ ಧಾವಿಸಿದ ಕೂಡಲೇ ಪೊಲೀಸರು ಮಹಿಳಾ ಕಾರ್ಯಕರ್ತರನ್ನು ರಸ್ತೆ ಮಧ್ಯೆಯೇ ತಡೆದು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಕುರುವಂಗಿ ವೆಂಕಟೇಶ್, ಪುಷ್ಪರಾಜ್, ಮಧುಕುಮಾರ್ ರಾಜ್ ಅರಸ್, ಸಂತೋಷ್ ಕೋಟ್ಯಾನ್, ಅಂಕಿತಾ, ಚೈತ್ರಾ ಗೌಡ ಮತ್ತಿತರರಿದ್ದರು.