Friday, November 22, 2024
Homeರಾಜಕೀಯ | Politics3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರೆಡಿ

3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ರೆಡಿ

BJP's list of possible candidates for the by-elections

ಬೆಂಗಳೂರು,ಅ.18- ಪ್ರತಿಷ್ಠೆಯ ಕಣವಾಗಿ ಪರಿಣಿಮಿಸಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ವರಿಷ್ಠರ ಚರ್ಚಿಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ನವದೆಹಲಿಗೆ ತೆರಳುತ್ತಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರ ಪ್ರಮುಖರ ಜೊತೆ ಚರ್ಚಿಸಿ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯನ್ನು ನೀಡಲಿದ್ದಾರೆ.

ನಂತರ ವರಿಷ್ಠರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮವಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದರಿಂದ ಅಂತಿಮವಾಗಿ ಪಕ್ಷದ ರಾಷ್ಟ್ರೀಯ ನಾಯಕರೇ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿ ಎಂಬುದು ರಾಜ್ಯ ನಾಯಕರ ಒತ್ತಾಸೆಯಾಗಿದೆ.

ಯಾರಿಗೆ ಟಿಕೆಟ್ ಕೊಟ್ಟರೂ ಟಿಕೆಟ್ ಕೈ ತಪ್ಪಿದವರು ಮುನಿಸಿಕೊಂಡು ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಬಹುದೆಂಬ ಎಚ್ಚರಿಕೆ ಹಿನ್ನಲೆಯಲ್ಲಿ ಎಲ್ಲವನ್ನೂ ದೆಹಲಿ ನಾಯಕರೇ ತೀರ್ಮಾನಿಸಲಿ ಎಂಬ ನಿರ್ಧಾರಕ್ಕೆ ರಾಜ್ಯ ನಾಯಕರು ಬಂದಂತಿದೆ.

ಇಲ್ಲಿ ಯಾವುದೇ ಅಭ್ಯರ್ಥಿ ಹೆಸರನ್ನು ಸಿದ್ದಪಡಿಸಿದರೂ ಅಂತಿಮವಾಗಿ ವರಿಷ್ಠರ ಮುದ್ರೆ ಬಿದ್ದ ನಂತರವೇ ಅಧಿಕೃತವಾಗುತ್ತದೆ ಎಂಬ ಹಿನ್ನಲೆಯಲ್ಲಿ ಕೆಲವು ಸಂಭವನೀಯ ಪಟ್ಟಿಗಳನ್ನು ಮಾತ್ರ ವಿಜಯೇಂದ್ರ ವರಿಷ್ಠರಿಗೆ ನೀಡಲಿದ್ದಾರೆ ಎಂದು ಗೊತ್ತಾಗಿದೆ.

ಕಗ್ಗಂಟಾಗಿ ಪರಿಣಮಿಸಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್, ಬಿಜೆಪಿ ಬೆಂಬಲಿತ ಎನ್ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಲಹೆ ಮಾಡಲಿದ್ದಾರೆ. ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವುದು ಇಲ್ಲವೇ ಬಿಡುವುದು ವರಿಷ್ಠರೇ ತೀರ್ಮಾನಿಸಬೇಕು. ಅವರನ್ನು ಕರೆಸಿ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನು ದೆಹಲಿ ನಾಯಕರಿಗೆ ಬಿಡಲಾಗಿದೆ.

ರಾಜ್ಯ ನಾಯಕರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲದ ಕಾರಣ ಯೋಗೇಶ್ವರ್ ಸಮಾಧಾನಪಡಿಸಿ ಅವರಿಗೆ ಟಿಕೆಟ್ ನೀಡಬೇಕೇ ಇಲ್ಲವೇ ಸಂಪುಟದ ಯಾವುದಾದರೂ ಸ್ಥಾನಮಾನವನ್ನು ನೀಡುವುದಾದರೆ ನಮ ಅಭ್ಯಂತರವಿಲ್ಲ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಅದು ನೇರವಾಗಿ ಕಾಂಗ್ರೆಸ್ಗೆ ಅನುಕೂಲವಾಗುತ್ತದೆ ಎಂಬುದನ್ನು ವಿಜಯೇಂದ್ರ ಮನವರಿಕೆ ಮಾಡಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ಕ್ಷೇತ್ರಕ್ಕೆ ಪುತ್ರ ಭರತ್ ಬೊಮಾಯಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.ನಿಮ ಮಗನಿಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚಿಸಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೊಮಾಯಿಗೆ ಸೂಚಿಸಿರುವುದರಿಂದ ಬಹುತೇಕ ಭರತ್ ಬೊಮಾಯಿ ಮೊದಲ ಬಾರಿಗೆ ಉಪ ಚುನಾವಣೆಯ ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ.

ಇದೇ ಕ್ಷೇತ್ರದಿಂದ ಮಾಜಿ ಸಚಿವ ಮುರುಗೇಶ್ ನಿರಾಣಿ ತಮಗೆ ಟಿಕೆಟ್ ನೀಡಬೇಕೆಂದು ದೆಹಲಿಯಲ್ಲಿ ಲಾಬಿ ನಡೆಸಲಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಹೊರಗಿನವರು ಎಂಬ ಆಪಾದನೆ ಬರುವ ಹಿನ್ನಲೆಯಲ್ಲಿ ಭರತ್ ಬೊಮಾಯಿ ಅವರನ್ನೇ ಕಣಕ್ಕಿಳಿಸಲು ಮುಂದಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರಕ್ಕೆ ಹಲವು ಹೆಸರುಗಳು ಕೇಳಿಬಂದಿವೆ. ಜಿಲ್ಲೆಯ ಮುಖಂಡರು ಒಬ್ಬೊಬ್ಬರ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದಾರೆ.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶಿಲ್ಪ, ಮಾಜಿ ಸಂಸದ ಎನ್.ವೈ.ದೇವೇಂದ್ರಪ್ಪ, ಕೆ.ಎಸ್.ದಿವಾಕರ್ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಯಲ್ಲಿವೆ.

ನಾಮಪತ್ರ ಸಲ್ಲಿಸಲು ಇದೇ ತಿಂಗಳು 25 ಕಡೆಯ ದಿನವಾಗಿರುವುದರಿಂದ ಮುಂದಿನ ವಾರ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News