ಬೆಂಗಳೂರು,ನ.30- ಎಂ.ಎಸ್ ಬಿಲ್ಡಿಂಗ್ ಎದುರುಗಡೆ ಇರುವ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಯ್ಸಳ ಶೈಲಿಯ ಧಾರ್ಮಿಕ ಸೌಧದ ನೀಲನಕ್ಷೆ ಸಿದ್ಧವಾಗಿದೆ.
ಎಂ.ಎಸ್. ಬಿಲ್ಡಿಂಗ್ ಎದುರುಗಡೆಯ ರಾಮಾಂಜನೇಯ ಸ್ವಾಮಿ ದೇವಸ್ಥಾನ ಹಿಂಭಾಗ ಇರುವ ಮುಜರಾಯಿ ಇಲಾಖೆಯ 26 ಗುಂಟೆ ಜಾಗದಲ್ಲಿ 6 ಗುಂಟೆ ದೇವಸ್ಥಾನವಿದ್ದು, ಉಳಿದ 20 ಗುಂಟೆ ಜಾಗದಲ್ಲಿ ರಾಜ್ಯದ ಮುಜರಾಯಿ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಿದೆ. ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧವನ್ನು ನಿರ್ಮಾಣ ಮಾಡಲಿದೆ. ನಾಲ್ಕು ಅಂತಸ್ತಿನ ಕಟ್ಟಡ ಇದಾಗಿರಲಿದೆ.
ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖೆ ಪರಿಷತ್ ಸಭೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಇದೀಗ ನೀಲನಕ್ಷೆ ಎಲ್ಲವೂ ಸಿದ್ಧವಾಗಿದ್ದು, ಅತಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈಗಿರುವ ಧಾರ್ಮಿಕ ದತ್ತಿ ಇಲಾಖೆ ಕಚೇರಿ ಮಿಂಟೋ ಆಸ್ಪತ್ರೆ ಎದುರುಗಡೆ ಇದ್ದು, ಪ್ರತಿ ತಿಂಗಳು ಸುಮಾರು 11 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಇಲಾಖೆ ಪ್ರಾರಂಭವಾದದಿಂದ ಇಲ್ಲಿಯವರೆಗೂ ಯಾವುದೇ ಸ್ವಂತ ಕಟ್ಟಡ ಕಚೇರಿ ಇಲ್ಲ. ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ನೂರಾರು ಎಕರೆಗಳು ದೇವಸ್ಥಾನದ ಮುಜರಾಯಿ ಇಲಾಖೆಯ ಆಸ್ತಿಗಳಿದ್ದರೂ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇಲ್ಲ. ಹೀಗಾಗಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಧಾರ್ಮಿಕ ಸೌಧ ರೂಪುರೇಷೆ:
ಧಾರ್ಮಿಕ ಸೌಧದ ಮೊದಲನೆಯ ಮಹಡಿಯಲ್ಲಿ ಕೋರ್ಟ್ ಹಾಲ್, ಕಮಿಷನರ್ ಕಚೇರಿ, ಸರ್ವೆ ಇಲಾಖೆ , ಹೆಚ್?ಕ್ಯೂ ಮತ್ತು ಕಿಂ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ಆಗಮ ಸೆಕ್ಷನ್ ಆಫೀಸರ್, ಐಟಿ ಸೆಕ್ಷನ್, ಇಂಜಿನಿಯರಿಂಗ್ ಸೆಕ್ಷನ್, ಮೀಟಿಂಗ್ ಹಾಲ್, ಹೆಚ್‌ಕ್ಯೂ ಒನ್ ಚೇಂಬರ್, ಕ್ಯೂಎ1 ಇರಲಿದೆ. ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್, ಸುಪರಿಡೆಂಟ್ 1-5 ಕಚೇರಿಗಳು, ಡಿಜಿಟಲ್ ಲೈಬ್ರರಿ, ಆರ್‌ಡಿಪಿಆರ್, ರೆಕಾರ್ಡ್‌್ಸ ಇರಲಿವೆ. ನಾಲ್ಕನೆಯ ಮಹಡಿಯಲ್ಲಿ ಆಡಿಟೋರಿಯಂ ಇರಲಿದೆ. ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಪಕ್ಕದಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ಎರಡು ಡಬಲ್ ಬೆಡ್‌ರೂಮ್ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ದೇವಸ್ಥಾನದ ಖರ್ಚುಗಳು ಹಾಗೂ ದೇವಸ್ಥಾನ ಮುಂದೆ ಇರುವ ಯಾಗ ಶಾಲೆ, ಪಾಕಶಾಲೆಯನ್ನು ನವೀಕರಣ ಮಾಡಲಾಗುವುದು. ದೇವಸ್ಥಾನದ ಖರ್ಚುವೆಚ್ಚವನ್ನು ಮುಜರಾಯಿ ಇಲಾಖೆ ಭರಿಸಲಿದೆ.