ಬೆಂಗಳೂರು,ಸೆ.20- ಬಸ್ ಚಾಲನೆ ಮಾಡಿಕೊಂಡು ಬರುತ್ತಿದ್ದ ಚಾಲಕನಿಗೆ ದಾರಿ ಮಧ್ಯೆಯೇ ಎದೆನೋವು ಕಾಣಿಸಿಕೊಂಡಿದ್ದನ್ನು ಗಮನಿಸಿದ ಕರ್ತವ್ಯನಿರತ ಎಎಸ್‌ಐ ರಘುಕುಮಾರ್ ಅವರು ತಕ್ಷಣ ನೆರವಿಗೆ ಧಾವಿಸಿ 40 ಪ್ರಯಾಣಿಕರ ಪ್ರಾಣ ರಕ್ಷಿಸುವುದರ ಜೊತೆಗೆ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿರುವುದಕ್ಕೆ ನಾಗರಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಮೊನ್ನೆ ಮಧ್ಯಾಹ್ನ 3.45ರ ಸುಮಾರಿನಲ್ಲಿ ಹಲಸೂರು ಗೇಟ್ ಸಂಚಾರ ಠಾಣೆಯ ಎಎಸ್‌ಐ ರಘುಕುಮಾರ್ ಅವರು ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದರು.ಆ ಸಂದರ್ಭದಲ್ಲಿ ಶಾಂತಿನಗರ ಡಿಪೋ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ನಿಧಾನವಾಗಿದ್ದನ್ನು ಗಮನಿಸಿದ ರಘುಕುಮಾರ್ ಅವರು ನೋಡಿದಾಗ ಚಾಲಕ ಎದೆ ಹಿಡಿದುಕೊಂಡು ನರಳಾಡುತ್ತಿದ್ದುದು ಕಂಡುಬಂದಿದೆ.
ತಕ್ಷಣ ಬಸ್ ಬಳಿ ಹೋಗಿ ಬಸ್ ಬಾಗಿಲ ತೆಗೆಸಿ ಒಳಗೆ ಹೋಗಿ ಹ್ಯಾಂಡ್ ಬ್ರೇಕ್ ಹಾಕಿ ನಿರ್ವಾಹಕನ ಸಹಾಯದಿಂದ ಚಾಲಕ ವೀರೇಶ್‌ನನ್ನು ಕೆಳಗಿಳಿಸಿದ್ದಾರೆ. ನಂತರ ಮತ್ತೊಂದು ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದ ಅಶೋಕನಗರ ಸಂಚಾರಿ ಠಾಣೆ ಸಿಬ್ಬಂದಿ ಪ್ರಸನ್ನಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಬಸ್ ಚಾಲಕ ವೀರೇಶ್ ಅವರನ್ನು ಆಟೋದಲ್ಲಿ ಕೂರಿಸಿ ವೈದೇಹಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ವೀರೇಶ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಬಸ್ ಚಾಲಕ ವೀರೇಶ್ ಅವರಿಗೆ ಎದೆ ನೋವು ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತುಕೊಂಡು ಬಸ್‌ನಲ್ಲಿದ್ದ 40 ಪ್ರಯಾಣಿಕರು ಪ್ರಾಣ ಕಾಪಾಡುವುದರ ಜೊತೆಗೆ ಚಾಲಕನ ಪ್ರಾಣ ಉಳಿಸಿದ ಎಎಸ್‌ಐ ರಘುಕುಮಾರ್ ಅವರಿಗೆ ಪ್ರಶಂಸೆ ವ್ಯಕ್ತವಾಗಿದೆ.
ಪ್ರತಿಕ್ರಿಯೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಸ್‌ಐ ರಘುಕುಮಾರ್, ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನನ್ನ ಜಾಗದಲ್ಲಿ ಯಾರೇ ಇದ್ದರೂ ಇದೇ ರೀತಿ ಮಾಡುತ್ತಿದ್ದರು. ನಾನು ಕರ್ತವ್ಯದಲ್ಲಿದ್ದಾಗ ಬರುತ್ತಿದ್ದ ಬಸ್ ಏಕಾಏಕಿ ನಿಧಾನವಾಗಿದ್ದನ್ನು ಗಮನಿಸಿ ಚಾಲಕನ ರಕ್ಷಣೆಗೆ ನೆರವಾಗಿ ಆಸ್ಪತ್ರೆಗೆ ದಾಖಲಿಸಿದೆ. ಅವರ ಪ್ರಾಣ ಹಾಗೂ ಪ್ರಯಾಣಿಕರ ಪ್ರಾಣ ರಕ್ಷಿಸಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು.