ಬೆಂಗಳೂರು,ಅ.27- ಬಿಎಂಟಿಸಿ ಚಾಲಕ ಹಾಗು ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಕಿಡಿಗೇಡಿಗಳ ಪತ್ತೆಗೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಮುಂದಾಗಿದ್ದಾರೆ. ಬಿಎಂಟಿಸಿ ಬಸ್ ಯಲಹಂಕದಿಂದ ಶಿವಾಜಿನಗರಕ್ಕೆ ಬರುವ ಮಾರ್ಗಮಧ್ಯೆ ನಿನ್ನೆ ಮಧ್ಯಾನ 4 ಗಂಟೆ ಸಂದರ್ಭದಲ್ಲಿ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ಬಸ್ ಸ್ಟಾಪ್ ನಲ್ಲಿ ನಿಂತಾಗ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಏಕಾ ಏಕಿ ಬಸ್‌ನೊಳಗೆ ನುಗ್ಗಿ ಚಾಲಕ ಹಾಗು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಗಳು ಮದ್ಯದ ನಶೆಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ಅಮಾನುಷವಾಗಿ ವರ್ತಿಸಿದ್ದಾರೆ. ಮೊದಲು ಚಾಲಕ ಗಗನ್ ಮೇಲೆ ಹಲ್ಲೆ ಮಾಡಿ ನಂತರ ಬಿಡಿಸಲು ಬಂದ ನಿರ್ವಾಹಕನ ಶಿವಕುಮಾರ್ ಮೇಲೆ ಏರಗಿ ಬಸ್‌ನಿಂದ ಕೆಳಗೆ ಎಳೆದು ತಂದು ನಂತರ ಮುಖಕ್ಕೆ ಗುದ್ದಿ, ಸೊಂಟಕ್ಕೆ ಹೊಡೆದು ಥಳಿಸಿದ್ದಾರೆ.
ಪ್ರಯಾಣಿಕರು ರಕ್ಷಣೆ ಮುಂದಾದಾಗ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಚಾಲಕ ಗಗನ್ ನೀಡಿರುವ ದೂರಿನ ಮೇರೆಗೆ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಚಾಲಕರು, ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದೆ. ಇದೇ ತಿಂಗಳಲ್ಲಿ ವೈಟ್‌ಫೀಲ್ಡ್ನಲ್ಲಿ ವೋಲ್ವೋಬಸ್‌ನಲ್ಲಿ ಪ್ರಯಾಣಿಕನೊಬ್ಬ ನಿರ್ವಾಹಕನಿಗೆ ಚಾಕುವಿನಿಂದ ಇರಿದಿದ್ದ. ಇದಲ್ಲದೆ ಹಲವಡೆ ಹಲ್ಲೆ ಪ್ರಕರಣಗಳು ನಡೆದಿವೆ.