ಬೆಂಗಳೂರು,ಡಿ.1- ಇಂದು ಬೆಳ್ಳಂಬೆಳಗ್ಗೆ ರಾಜ್ಯ ರಾಜಧಾನಿ ಹಾಗೂ ಹೊರವಲಯದಲ್ಲಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇಮೇಲ್ ಮೂಲಕ ಕಳುಹಿಸಿರುವ ಸಂದೇಶದಿಂದ ಕೆಲಕಾಲ ಆತಂಕ ಉಂಟಾಗಿತ್ತು. ಇಂದು ಬೆಳಗ್ಗೆ ಎಂದಿನಂತೆ ಶಾಲಾ ಆಡಳಿತ ಮಂಡಳಿ ಶಾಲೆಗೆ ಬಂದು ಇಮೇಲ್ ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ. ತಕ್ಷಣ ಶಾಲಾ ಕೊಠಡಿಗಳಿಂದ ಮಕ್ಕಳನ್ನು ಹೊರಗೆ ಕರೆತಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಬಸವೇಶ್ವರನಗರದ ನ್ಯಾಷಲ್ ಶಾಲೆ, ವಿದ್ಯಾಶಿಲ್ಪ ಶಾಲೆ, ಸದಾಶಿವನಗರದ ನೀವ್ ಶಾಲೆ, ಹೆಬ್ಬಗೋಡಿಯ ಎಬಿನೇಜರ್ ಶಾಲೆ, ಸರ್ಜಾಪುರದ ಗ್ರೀನ್‍ವುಡ್ ಹೈಸ್ಕೂಲ್, ದೊಮ್ಮಸಂದ್ರದ ಇನ್ವೇಚರ್ ಶಾಲೆ, ಸಿಂಗೇನ ಅಗ್ರಹಾರ ಸಮೀಪದ ಶಾಲೆ, ಚಾಮರಾಜಪೇಟೆಯ ಭವನ್ ಬೆಂಗಳೂರು ಪ್ರೆಸ್ ಸ್ಕೂಲ್, ಆನೆಕಲ್ ವ್ಯಾಪ್ತಿಯ ಐದು ಶಾಲೆಗಳು, ನಾಗದೇವಹಳ್ಳಿಯ ಚಿತ್ರಕೂಟ ಶಾಲೆ, ಯಲಹಂಕ ವ್ಯಾಪ್ತಿಯ ಖಾಸಗಿ ಶಾಲೆಗಳು, ಬನ್ನೇರುಘಟ್ಟ ಬಳಿಯ ಗ್ಲೋಬಲ್ ಇಂಟರ್‍ನ್ಯಾಷನಲ್ ಶಾಲೆ ಸೇರಿದಂತೆ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಇಮೇಲ್ ಮೂಲಕ ರವಾನೆಯಾಗಿದೆ.
ಭಾರತದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೀನಾ
ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಿರಿ ಇಲ್ಲದಿದ್ದರೆ ಸಾಯಲು ಸಿದ್ದವಾಗಿ ಎಂಬ ಸಂದೇಶವನ್ನು ಮುಜಾಹಿದ್ದೀನ್ ಎಂಬ ಹೆಸರಿನಲ್ಲಿ ಬೆದರಿಕೆ ಕರೆ ಬಂದಿದೆ ಎಂಬುದು ತಿಳಿದುಬಂದಿದೆ.
ಶಾಲೆಗಳತ್ತ ಪೋಷಕರ ದೌಡು:
ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗಳತ್ತ ದೌಡಾಯಿಸಿ ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.
ಬಾಂಬ್ ನಿಷ್ಕ್ರಿಯ ದಳ:
ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಶಾಲೆಗಳಿಗೆ ಧಾವಿಸಿ ಶಾಲಾ ಕೊಠಡಿಗಳು ಸೇರಿದಂತೆ ಶೌಚಾಲಯ ಹಾಗೂ ಶಾಲಾ ಸುತ್ತಮುತ್ತ ಪರಿಶೀಲಿಸಿದರಾದರೂ ಸದ್ಯಕ್ಕೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಶಾಲೆಗಳಿಗೆ ರಜೆ:
ಬಾಂಬ್ ಬೆದರಿಕೆ ಸಂದೇಶ ಬಂದ ಶಾಲೆಗಳ ಆಡಳಿತ ಮಂಡಳಿಗಳು ಮಕ್ಕಳ ಪೋಷಕರಿಗೆ ಕರೆ ಮಾಡಿ ಶಾಲೆಗೆ ರಜೆ ನೀಡಿ ಮಕ್ಕಳನ್ನು ಕಳುಹಿಸಿದರು. ಕಳೆದ ಒಂದು ವರ್ಷದಿಂದ ನಿರಂತರವಾಗಿ ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಲಾಗಿತ್ತು. ಇದೀಗ ಕಿಡಿಗೇಡಿಗಳು ಅದೇ ಚಾಳಿ ಮುಂದುವರೆಸಿದ್ದಾರೆ.